ರಾಜ್ಯಸಭೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅವಮಾನಿಸುವಂತಹ ಹೇಳಿಕೆ ನೀಡಿದ ಕೇಂದ್ರ ಗೃಹ ಸಚಿವ ಅಮಿಶ್ ಶಾ ವಿರುದ್ಧ ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕದ ವತಿಯಿಂದ ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ರಾಜ್ಯಸಭೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅವಮಾನಿಸುವಂತಹ ಹೇಳಿಕೆ ನೀಡಿದ ಕೇಂದ್ರ ಗೃಹ ಸಚಿವ ಅಮಿಶ್ ಶಾ ವಿರುದ್ಧ ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.ನಗರದ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆಯಲ್ಲಿ ಭುವನೇಶ್ವರಿ ವೃತ್ತಕ್ಕೆ ತೆರಳಿ ಮಾನವ ಸರಪಳಿ ರಚಿಸಿ ಕೆಲಹೊತ್ತು ರಾಷ್ಟ್ರೀಯ ಹೆದ್ದಾರಿ ತಡೆದು ಅಮಿತ್ ಶಾ ಭಾವಚಿತ್ರ ಹರಿದು ಅಕ್ರೋಶ ವ್ಯಕ್ತಪಡಿಸಿದರು. ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಎನ್.ನಾಗಯ್ಯ ಮಾತನಾಡಿ, ವಿಶ್ವವೇ ಮೆಚ್ಚುವಂತಹ ಸಂವಿಧಾನವನ್ನು ಅಂಬೇಡ್ಕರ್ ರಚನೆ ಮಾಡಿದ್ದಾರೆ. ಸಂಸತ್ತಿನಲ್ಲಿ ಸಂವಿಧಾನದ ಬಗ್ಗೆ ಚರ್ಚಿಸುವಾಗ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ. ಅಲ್ಪಸಂಖ್ಯಾಸರು ಅಂಬೇಡ್ಕರ್ ಅವರನ್ನು ನಾಯಕರು ಎಂದು ಒಪ್ಪಿಕೊಂಡಿರುವುದನ್ನು ಸಹಿಸಿಕೊಳ್ಳಲು ಆಗದೇ ಸಂಸತ್‌ನಲ್ಲಿ ಅಂಬೇಡ್ಕರ್ ಅವರ ಬಗ್ಗೆ ಮಾತನಾಡಿ ಅಪಮಾನ ಮಾಡಿದ್ದಾರೆ ಎಂದು ದೂರಿದರು.ಅಂಬೇಡ್ಕರ್ ವಿರುದ್ಧ ಹೇಳಿಕೆ ನೀಡಿರುವ ಅಮಿತ್ ಶಾ ಅವರನ್ನು ಸಂಪುಟದಿಂದ ವಜಾ ಮಾಡಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಪಕ್ಷದ ಜಿಲ್ಲಾಧ್ಯಕ್ಷ ಬ.ಮ.ಕೃಷ್ಣಮೂರ್ತಿ ಮಾತನಾಡಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅಂಬೇಡ್ಕರ್ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿರುವುದರಲ್ಲಿ ಯಾವುದೇ ಆಶ್ಚರ್ಯ ಇಲ್ಲ. ಅಂಬೇಡ್ಕರ್ ಮತ್ತು ಸಂವಿಧಾನವನ್ನು ದುರ್ಬಲ ಮಾಡುವುದು ಅವರ ರಹಸ್ಯ ಅಜೆಂಡಾವಾಗಿದೆ. ಇಲ್ಲಿಯವರೆ ಆ ವಿಚಾರವನ್ನು ತಲೆಯಲ್ಲಿ ಮಾತ್ರ ಇಟ್ಟುಕೊಂಡಿದ್ದು ಈಗ ಬಹಿರಂಗಗೊಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ನವರು ಅಂಬೇಡ್ಕರ್ ಭಾವಚಿತ್ರ, ಸಂವಿಧಾನ ಪುಸ್ತಕ ಪ್ರದರ್ಶನ ಮಾಡುವುದೇ ಅಕ್ಕರೆ ಇಲ್ಲ. ದೇಶದಲ್ಲಿ 70ಕ್ಕೂ ಹೆಚ್ಚು ವರ್ಷಗಳ ಕಾಲ ಆಡಳಿತ ನಡೆಸಿರುವ ಕಾಂಗ್ರೆಸ್ ಕೂಡ ಅಂಬೇಡ್ಕರ್ ಆಶಯದಂತೆ ಆಡಳಿತ ನಡೆಸಿಲ್ಲ. ಸಂವಿಧಾನವನ್ನು ಅನೇಕ ಬಾರಿ ತಿದ್ದುಪಡಿ ಮಾಡಿ ಸಂವಿಧಾನದ ಆಶಯಗಳನ್ನು ದುರ್ಬಲಗೊಳಿಸಿದೆ. ಈಗ ಮತಗಳಿಗಾಗಿ ಅಂಬೇಡ್ಕರ್ ಭಾವಚಿತ್ರ ಹಿಡಿದು ಸಂವಿಧಾನದ ಪರ ಎಂದು ಮಾಡುವುದು ಸರಿಯಲ್ಲ. ಬಿಜೆಪಿ, ಕಾಂಗ್ರೆಸ್ ಎರಡು ಕೂಡ ಅಂಬೇಡ್ಕರ್ ಮತ್ತು ಸಂವಿಧಾನ ವಿರೋಧಿಗಳು ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಬ್ಯಾಡಮೂಡ್ಲು ಬಸವಣ್ಣ, ಜಿಲ್ಲಾ ಸಂಯೋಜಕ ವಕೀಲ ಪುಟ್ಟಸ್ವಾಮಿ, ಜಿಲ್ಲಾ ಉಸ್ತುವಾರಿ ಅಮಚವಾಡಿ ಪ್ರಕಾಶ್, ಚಂದಕವಾಡಿ ರಾಜಶೇಖರ್, ಜಿಲ್ಲಾ ಉಪಾಧ್ಯಕ್ಷ ಬಸವಣ್ಣ ಗುಂಡ್ಲುಪೇಟೆ, ಜಿಲ್ಲಾ ಪ್ರ.ಕಾರ್ಯದರ್ಶಿ ಎಸ್.ಪಿ.ಮಹೇಶ್, ಜಿಲ್ಲಾ ಕಾರ್ಯದರ್ಶಿ ಅಭಿ ಅರಳೀಪುರ, ಶಾಂತರಾಜು ಕೆಸ್ತೂರು, ತಾಲೂಕು ಅಧ್ಯಕ್ಷ ಚಂದ್ರಕಾಂತ್, ಜಿಲ್ಲಾ ಖಜಾಂಚಿ ಶಿವಶಂಕರ್, ತಾಲೂಕು ಉಪಾಧ್ಯಕ್ಷ ಗಿರೀಶ್ ಯಲಕ್ಕೂರು, ತಾಲೂಕು ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಕುಮಾರಸ್ವಾಮಿ, ಪ್ರಕಾಶ್, ರಾಮಸಮುದ್ರ ಬಾಬು, ಬಿವಿಎಫ್ ಜಿಲ್ಲಾ ಸಂಯೋಜಕ ಜೈಸಿದ್ಧಾರ್ಥ, ಲಕ್ಷ್ಮೀಪ್ರಸಾದ್, ಹೊಂಡರಬಾಳು ವಾಸು ಇತರರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.