ಸಿ. ಟಿ. ರವಿ ಮೇಲೆ ಹಲ್ಲೆ ಖಂಡಿಸಿ ಬಿಜೆಪಿ ಪ್ರತಿಭಟನೆ

KannadaprabhaNewsNetwork | Published : Dec 21, 2024 1:16 AM

ಸಾರಾಂಶ

BJP protests against attack on C. T. Ravi

-ಕಾಂಗ್ರೆಸ್ ಸರ್ಕಾರ, ಸಿಎಂ ವಿರುದ್ಧ ಭುಗಿಲೆದ್ದ ಕೇಸರಿಪಡೆ ಆಕ್ರೋಶ । ಪ್ರತಿಭಟನಾಕಾರರು, ಪಿಎಸ್ಸೈ ವಾಕ್ಸ್‌ಮರ: ಉದ್ವಿಗ್ನಗೊಂಡಿದ್ದ ವಾತಾವರಣ

-------

ಕನ್ನಡಪ್ರಭ ವಾರ್ತೆ ಯಾದಗಿರಿ

ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರ ಮೇಲೆ ಹಲ್ಲೆ ಮಾಡಿರುವುದನ್ನು ಖಂಡಿಸಿ ಬಿಜೆಪಿ ಜಿಲ್ಲಾ ಘಟಕದಿಂದ ನಗರದ ನೇತಾಜಿ ಸುಭಾಶ್ಚಂದ್ರ ಭೋಸ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಪ್ರತಿಕೃತಿ ದಹಿಸಿದ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರ ಗೂಂಡಾಗಿರಿ ನಡೆಸುತ್ತಿದೆ ಎಂದು ಆರೋಪಿಸಿರು.

ಬಿಜೆಪಿ ಮುಖಂಡ ರಾಚಣ್ಣಗೌಡ ಮುದ್ನಾಳ, ಪ್ರಜಾಪ್ರಭುತ್ವದ ಸಂವಿಧಾನ ಎಂದು ಹುಸಿ ನಾಟಕವಾಡುವ ಕಾಂಗ್ರೆಸ್ ನವರು ಒಬ್ಬ ಶಾಸಕರನ್ನು ನಿಯಮಗಳನ್ನು ಮೀರಿ ಬಂಧಿಸುವುದು, ರೌಡಿಗಳಂತೆ ಹಲ್ಲೆ ನಡೆಸುವುದು ಅತ್ಯಂತ ನಾಚಿಕೆಗೇಡು ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಲೆಮಾರಿ ನಿಗಮದ ಮಾಜಿ ಅಧ್ಯಕ್ಷ ದೇವೇಂದ್ರನಾಥ್ ಮಾತನಾಡಿ, ಕಾಂಗ್ರೆಸ್ ಪಕ್ಷ ಗೂಂಡಾಗಿರಿ ಮಾಡುತ್ತಿರುವುದಕ್ಕೆ ಬೆಳಗಾವಿ ಅಧಿವೇಶನದಲ್ಲಿ ಸಿ.ಟಿ. ರವಿ ಅವರ ಮೇಲೆ ಹಲ್ಲೆ ಮಾಡಿರುವುದೇ ಸಾಕ್ಷಿಯಾಗಿದೆ. ಇಂತಹ ಕೃತ್ಯಗಳಿಂದ ದಬ್ಬಾಳಿಕೆ ನಡೆಸುವುದು ಬಹಳ ದಿನ ನಡೆಯಲಾರದು ಎಂದು ಟೀಕಿಸಿದರು.

ಯುವ ಮುಖಂಡರಾದ ಮಹೇಶರೆಡ್ಡಿ ಮುದ್ನಾಳ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಂಡು ದಬ್ಬಾಳಿಕೆ ನಡೆಸುತ್ತಿದ್ದು, ಸಿ.ಟಿ. ರವಿ ಅವರ ವಿರುದ್ಧ ನಡೆದುಕೊಂಡ ರೀತಿ ಪ್ರಜ್ಞಾವಂತರು ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ ಎಂದರು.

ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ ಮಾತನಾಡಿ, ಒಬ್ಬ ಶಾಸಕರಾಗಿರುವ ಸಿ.ಟಿ. ರವಿ ಅವರ ವಿರುದ್ಧ ಬಂದಿರುವ ಆರೋಪವನ್ನು ಕೂಲಂಕುಶವಾಗಿ ಪರಿಶೀಲನೆ ಮಾಡದೇ ಪೊಲೀಸರು ನೇರವಾಗಿ ಸುವರ್ಣಸೌಧದೊಳಗಿನಿಂದಲೇ ಬಂಧಿಸಿ ಕರೆದೊಯ್ದು ದೌರ್ಜನ್ಯ ಮೆರೆದಿರುವುದರ ಹಿಂದೆ ರೌಡಿ ಆಡಳಿತದ ಕರಿಛಾಯೆ ಕಾಣಿಸುತ್ತಿದೆ ಎಂದು ಆಕ್ರೊಶ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಕಾಮಾ ಮಾತನಾಡಿ, ಅಧಿಕಾರದ ದುರ್ಬಳಕೆ ಮಾಡಿಕೊಂಡು ದಬ್ಬಾಳಿಕೆ ನಡೆಸುತ್ತಿರುವ ಕಾಂಗ್ರೆಸ್ ವರ್ತನೆಯನ್ನು ಜನತೆ ನೋಡುತ್ತಿದ್ದರೂ ನಾಚಿಕೆಯಿಲ್ಲದಂತೆ ಗೂಂಡಾಗಿರಿ ಮಾಡುತ್ತಿರುವುದು ಅಕ್ಷಮ್ಯವಾಗಿದೆ ಎಂದ ಅವರು, ತಪ್ಪಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ಆದರೆ, ಅದನ್ನು ಬಿಟ್ಟು ಗೂಂಡಾಗಿರಿ ನಡೆಸುತ್ತಿರುವ ಸರ್ಕಾರಕ್ಕೆ ಸರಿಯಾದ ಪಾಠಕಲಿಸಬೇಕೆಂದು ಅವರು ರಾಜ್ಯಪಾಲರಿಗೆ ಒತ್ತಾಯಿಸಿದರು.

ಪರಶುರಾಮ್ ಕುರಕುಂದಿ, ಜಿಲ್ಲಾ ವಕ್ತಾರಾದ ಹಣಮಂತ ಇಟಗಿ, ನಗರಾಧ್ಯಕ್ಷರಾದ ಲಿಂಗಪ್ಪ ಹತ್ತಿಮನಿ, ಗ್ರಾಮೀಣ ಮಂಡಲ್ ಅಧ್ಯಕ್ಷರಾದ ರಾಜಶೇಖರ್ ಕಾಡಂನೋರ್, ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟರೆಡ್ಡಿ ಅಬ್ಬೆತುಮಕೂರ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸುನೀತಾ ಚವ್ಹಾಣ, ನಗರ ಸಭೆ ಸದಸ್ಯರಾದ ಪ್ರಭಾವತಿ ಕಲಾಲ, ವಿಜಯಲಕ್ಷ್ಮಿ, ಬೀಮಬಾಯಿ ಇದ್ದರು.

ಪ್ರತಿಭಟನೆಯ ವೇಳೆ ಪಿಎಸ್ಸೈ ಹಾಗೂ ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿ ನಡೆದು, ಕೆಲ ಕಾಲ ವಾತಾವರಣ ಉದ್ವಿಗ್ನಗೊಂಡಿತ್ತು.

-----

ಫೋಟೊ:ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರ ಮೇಲೆ ಹಲ್ಲೆ ಮಾಡಿರುವುದನ್ನು ಖಂಡಿಸಿ ಬಿಜೆಪಿ ಜಿಲ್ಲಾ ಘಟಕದಿಂದ ಯಾದಗಿರಿ ನಗರದ ಸುಭಾಶ್ಚಂದ್ರಬೋಸ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

-----

Share this article