ಸ್ವತಂತ್ರ ಸಂಸ್ಥೆಯ ಅಧ್ಯಯನದ ಬಳಿಕವೇ ಬಿಎಸ್‌ಪಿಎಲ್ ಸ್ಥಾಪನೆ: ಸಚಿವ ಎಂ.ಬಿ. ಪಾಟೀಲ

KannadaprabhaNewsNetwork |  
Published : Mar 20, 2025, 01:18 AM IST
4 | Kannada Prabha

ಸಾರಾಂಶ

ಬಿಎಸ್‌ಪಿಎಲ್ ಕಾರ್ಖಾನೆ ಪರವಾಗಿ ನಾನು ಮಾತನಾಡುತ್ತಿಲ್ಲ. ಸರ್ಕಾರದಿಂದ ಸ್ಥಾಪಿಸಬೇಕು ಎನ್ನುವ ಬಯಕೆಯೂ ಇಲ್ಲ. ಹಾಗಂತ ಸ್ಥಾಪಿಸುವುದೇ ಇಲ್ಲ ಎಂದು ಹೇಳುವುದಿಲ್ಲ. ಅಲ್ಲಿಯ ಜನರಿಗೆ ತೊಂದರೆಯಾಗುತ್ತದೆ ಎನ್ನುವುದಾದರೆ ಕಾರ್ಖಾನೆ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ.

ಕೊಪ್ಪಳ:

ಸ್ವತಂತ್ರ ಅಧ್ಯಯನ ಸಮಿತಿಯ ವರದಿಯನ್ನಾಧರಿಸಿಯೇ ಕೊಪ್ಪಳ ಬಳಿ ಬಿಎಸ್‌ಪಿಎಲ್ ಕಾರ್ಖಾನೆ ಸ್ಥಾಪಿಸುವ ಕುರಿತು ಸರ್ಕಾರ ತೀರ್ಮಾನಿಸಲಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.

ವಿಧಾನಪರಿಷತ್‌ನಲ್ಲಿ 330ನೇ ನಿಯಮದಡಿ ಚರ್ಚೆಗೆ ಉತ್ತರಿಸಿದ ಅವರು, ಬಿಎಸ್‌ಪಿಎಲ್ ಕಾರ್ಖಾನೆ ಪರವಾಗಿ ನಾನು ಮಾತನಾಡುತ್ತಿಲ್ಲ. ಸರ್ಕಾರದಿಂದ ಸ್ಥಾಪಿಸಬೇಕು ಎನ್ನುವ ಬಯಕೆಯೂ ಇಲ್ಲ. ಹಾಗಂತ ಸ್ಥಾಪಿಸುವುದೇ ಇಲ್ಲ ಎಂದು ಹೇಳುವುದಿಲ್ಲ. ಅಲ್ಲಿಯ ಜನರಿಗೆ ತೊಂದರೆಯಾಗುತ್ತದೆ ಎನ್ನುವುದಾದರೆ ಕಾರ್ಖಾನೆ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ. ಆದರೆ, ಬಿಎಸ್‌ಪಿಎಲ್ ಕಾರ್ಖಾನೆಯವರು ನಮಗೆ ಕಾರ್ಖಾನೆಯ ವೈಜ್ಞಾನಿಕ ಕ್ರಮ, ಧೂಳು ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮದ ಬಗ್ಗೆ ಯೋಜನೆ ತೋರಿಸಿದ್ದಾರೆ. ಹಾಗಂತ ನಾವು ಅದನ್ನು ನಂಬುವುದಿಲ್ಲ. ಅವರು ಕಾರ್ಖಾನೆ ಸ್ಥಾಪಿಸಲೇಬೇಕು ಎನ್ನುವ ಕಾರಣಕ್ಕಾಗಿಯೇ ತಮ್ಮ ಪರವಾಗಿಯೇ ಯೋಜನೆಯನ್ನು ನಮ್ಮ ಮುಂದೆ ಪ್ರದರ್ಶನ ಮಾಡಿರಬಹುದು. ಇದರ ಹೊರತಾಗಿ ತಜ್ಞರನ್ನೊಳಗೊಂಡ ಸ್ವತಂತ್ರ ಸಂಸ್ಥೆಯ ಮೂಲಕ ಅಧ್ಯಯನ ನಡೆಸಲಾಗುವುದು. ಆ ಅಧ್ಯಯನ ವರದಿ ಸ್ಥಾಪಿಸಿದರೆ ಸಮಸ್ಯೆ ಇಲ್ಲ ಎಂದು ಬಂದರೆ ಅನುಮತಿ ನೀಡುತ್ತೇವೆ. ಸ್ಥಾಪಿಸುವುದು ಸೂಕ್ತ ಅಲ್ಲ ಎಂದು ವರದಿ ನೀಡಿದರೆ ಖಂಡಿತವಾಗಿಯೂ ತಿರಸ್ಕರಿಸುತ್ತೇವೆ ಎಂದರು.

ಗವಿಸಿದ್ಧೇಶ್ವರ ಶ್ರೀಗಳು ನಮ್ಮೂರಿಗೆ ಮತ್ತೊಂದು ಕಾರ್ಖಾನೆ ಬೇಡ, ಇರುವ ಕಾರ್ಖಾನೆಗಳಿಂದ ಜನರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆಂದು ಹೇಳಿದ್ದಾರೆ. ಗವಿಮಠವನ್ನು ಎರಡನೇ ಸಿದ್ಧಗಂಗಾ ಮಠವೆಂದು ಕರೆಯುತ್ತೇವೆ. ಹೀಗಾಗಿ ಅವರ ಮಾತನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದಿರುವ ಸಚಿವರು, ಸ್ಪಾಂಜ್ ಐರನ್ ಹಾಗೂ ಸಾಲ್ವೆಂಟ್‌ನಿಂದ ಧೂಳಾಗುತ್ತಿದೆ ಹೊರತು ಕಾರ್ಖಾನೆಗಳಿಂದ ಅಲ್ಲ. ಹೀಗಾಗಿ ಈಗಿರುವ ಕಾರ್ಖಾನೆಗಳಿಂದ ಆಗುತ್ತಿರುವ ಧೂಳಿನ ಮೇಲೆಯೂ ಕಠಿಣ ಕ್ರಮಕೈಗೊಳ್ಳುತ್ತಿದ್ದೇವೆ. ರಾಜ್ಯದಲ್ಲಿರುವ ಎಲ್ಲ ಸ್ಪಾಂಜ್ ಐರನ್ ಮತ್ತು ಸಾಲ್ವೆಂಟ್ ಸೇರಿದಂತೆ ಎಲ್ಲದರ ಮೇಲೆ ಕಠಿಣ ಕ್ರಮಕೈಗೊಳ್ಳುವುದಾಗಿ ಹೇಳಿದರು.

ಕೊಪ್ಪಳಕ್ಕೆ ಶೀಘ್ರ ಭೇಟಿ:

ನಮ್ಮ ಸರ್ಕಾರದ ಅವಧಿಯಲ್ಲಿ ಬಿಎಸ್‌ಪಿಎಲ್ ಕಾರ್ಖಾನೆ ಅನುಮತಿ ಪಡೆದಿಲ್ಲ ಎಂದಿರುವ ಸಚಿವರು, ಕೇಂದ್ರ ಸರ್ಕಾರದ ಪರಿಸರ ಇಲಾಖೆ ಅವರಿಗೆ ಅನುಮತಿ ನೀಡಿದೆ. ಇದು ನಿಮ್ಮ ಸರ್ಕಾರ ನೀಡಿರುವ ಅನುಮತಿ ಎಂದು ಹೇಮಲತಾ ನಾಯಕ ಅವರಿಗೆ ಹೇಳಿದರು. ಶೀಘ್ರ ಕೊಪ್ಪಳಕ್ಕೆ ಭೇಟಿ ನೀಡಿ ಗವಿಶ್ರೀಗಳ ಅಧ್ಯಕ್ಷತೆಯಲ್ಲಿ ಹೋರಾಟಗಾರರು, ಪರಿಸರವಾದಿಗಳ ಸಮ್ಮುಖದಲ್ಲಿ ಸಭೆ ಮಾಡುತ್ತೇವೆ. ಬಿಎಸ್‌ಪಿಎಲ್ ಕಾರ್ಖಾನೆ ಸ್ಥಾಪನೆ ಕುರಿತು ಅವರೆಲ್ಲರೊಂದಿಗೆ ಮುಕ್ತವಾಗಿ ಚರ್ಚಿಸುತ್ತೇವೆ. ಅವರೆಲ್ಲರ ಸಮ್ಮತಿಯೊಂದಿಗೆ ಸ್ವತಂತ್ರ ಅಧ್ಯಯನ ಸಮಿತಿಯಿಂದ ಅಧ್ಯಯನ ಮಾಡಲಾಗುವುದು. ಇಲ್ಲವೇ ಗವಿಶ್ರೀಗಳೇ ಖಾಸಗಿ ಎಜೆನ್ಸಿ ಮೂಲಕ ಅಧ್ಯಯನ ಮಾಡಿಸಲಿ. ಅದರಲ್ಲಿ ಯಾವುದೇ ಸಮಸ್ಯೆ ಇಲ್ಲವೆಂದು ವರದಿ ಬಂದರೆ ಮಾತ್ರ ಕಾರ್ಖಾನೆ ಸ್ಥಾಪಿಸಲು ಅನುಮತಿ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದರು.ಕೈಮುಗಿದು ಬೇಡಿಕೊಂಡ ಹೇಮಲತಾ

ನಿಯಮ 330 ಅಡಿ ವಿಷಯ ಪ್ರಸ್ತಾಪಿಸಿ ಸದಸ್ಯೆ ಹೇಮಲತಾ ನಾಯಕ, ಕೊಪ್ಪಳ ಬಳಿ ಇರುವ ಕಾರ್ಖಾನೆಗಳಿಂದಲೇ 17 ಹಳ್ಳಿಯ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ವಿವಿಧ ರೋಗದಿಂದ ಬಳಲುತ್ತಿದ್ದಾರೆ. ಹೀಗಾಗಿ, ಇಂಥ ಸ್ಥಿತಿಯಲ್ಲಿ ಮತ್ತೊಂದು ಕಾರ್ಖಾನೆ ಬೇಡವೇಬೇಡ ಎಂದು ಕೈಮುಗಿದು ಬೇಡಿಕೊಂಡರು. 15ಕ್ಕೂ ಹೆಚ್ಚು ಜನರು ಕ್ಯಾನ್ಸರ್‌, ಅಸ್ತಮಾ, ಟಿಬಿ, ಹೃದಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದೆಲ್ಲವೂ 2022 ವರದಿಯಾಗಿದೆ. ವಾಸ್ತವದಲ್ಲಿ ಘನಘೋರವಿದೆ. ಯಾವುದೇ ಕಾರಣಕ್ಕೂ ಹೊಸ ಕಾರ್ಖಾನೆ ಸ್ಥಾಪನೆ ಬೇಡ, ಹಾಗೆ ಈಗಿರುವ ಕಾರ್ಖಾನೆಗಳ ಧೂಳು ನಿಯಂತ್ರಣ ಮೇಲೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.ನದಿ ನೀರು ಬೇಡ:

ತುಂಗಭದ್ರಾ ನೀರನ್ನು ಹೊಸ ಕಾರ್ಖಾನೆಗೆ ಬಳಸಿಕೊಳ್ಳುವುದು ಬೇಡ ಎಂದು ವಿಪ ಸದಸ್ಯ ಎ. ವಸಂತಕುಮಾರ ಆಗ್ರಹಿಸಿದ್ದಾರೆ. ಕೊಪ್ಪಳ ಬಳಿ ಈಗಗಾಲೇ ಸಾಕಷ್ಟು ಕಾರ್ಖಾನೆಗಳಿದ್ದು ಅವುಗಳಿಗೆ ನೀರು ನೀಡುವುದರಿಂದ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು ದೊರೆಯುತ್ತಿಲ್ಲ. ಹೀಗಿರುವಾಗ ಮತ್ತೊಂದು ಕಾರ್ಖಾನೆಗೆ ಅವಕಾಶ ನೀಡಿದರೇ ನೀರು ಎಲ್ಲಿಂದ ತರುವೀರಿ? ಅದಕ್ಕೆ ಎಷ್ಟು ನೀರು ಬೇಕು? ಈಗಾಗಲೇ ಕಾರ್ಖಾನೆ ಕೋಟಾ ಮುಗಿದಿದೆಯೇ? ಎನ್ನುವ ಬಗ್ಗೆ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!