ಬಿಎಸ್‌ಪಿಎಲ್ ಕಾರ್ಖಾನೆ: ಸರ್ವಪಕ್ಷ ಸಭೆ ನಿರ್ಣಯದತ್ತ ಹೋರಾಟಗಾರರ ಚಿತ್ತ

KannadaprabhaNewsNetwork | Published : Mar 4, 2025 12:33 AM

ಸಾರಾಂಶ

ಬೃಹತ್ ಹೋರಾಟದ ಬಳಿಕ ಗವಿಸಿದ್ಧೇಶ್ವರ ಸ್ವಾಮೀಜಿ ಕಟ್ಟಪ್ಪಣೆ ಮಾಡಿ, ಕೊಪ್ಪಳ ಬಳಿ ಕಾರ್ಖಾನೆ ಸ್ಥಾಪಿಸಲು ಬಿಎಸ್‌ಪಿಎಲ್‌ಗೆ ಅನುಮತಿ ನೀಡಿರುವುದನ್ನು ರದ್ದು ಮಾಡಿಸಲು ಹೇಳಿರುವುದರಿಂದ ಈ ಸಭೆಗೆ ಭಾರಿ ಮಹತ್ವ ಬಂದಿದೆ. ಇದೇ ಕಾರಣಕ್ಕಾಗಿ ಪಕ್ಷಾತೀತವಾಗಿ ಹಾಲಿ ಮತ್ತು ಮಾಜಿ ಶಾಸಕರು, ಸಚಿವರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ:

ಕೊಪ್ಪಳ ಬಳಿ ಬಿಎಸ್‌ಪಿಎಲ್‌ ಕಾರ್ಖಾನೆ ಸ್ಥಾಪಿಸುವುದನ್ನು ತಡೆಯಲು ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ಗೃಹ ಕಚೇರಿಯಲ್ಲಿ ಮಾ. 4 ರಂದು ನಡೆಯುವ ಸರ್ವ ಪಕ್ಷ ಸಭೆಯಲ್ಲಿ ನಾಯಕರ ನಿರ್ಣಯ ಮತ್ತು ನಂತರ ಸಿಎಂ ಸಿದ್ದರಾಮಯ್ಯ ಅವರು ತೆಗೆದುಕೊಳ್ಳುವ ನಿರ್ಧಾರವೇನು ಎಂದು ಕೊಪ್ಪಳ ತಾಲೂಕು ಪರಿಸರ ಹಿತರಕ್ಷಣಾ ವೇದಿಕೆ ಹಾಗೂ ಕೊಪ್ಪಳ ಬಚಾವೋ ಆಂದೋಲನ ಸಮಿತಿ ಸೇರಿದಂತೆ ಎಲ್ಲ ಹೋರಾಟ ಸಂಘಟನೆಗಳು ಕಾತರದಿಂದ ಕಾಯುತ್ತಿವೆ.

ಬೃಹತ್ ಹೋರಾಟದ ಬಳಿಕ ಗವಿಸಿದ್ಧೇಶ್ವರ ಸ್ವಾಮೀಜಿ ಕಟ್ಟಪ್ಪಣೆ ಮಾಡಿ, ಕೊಪ್ಪಳ ಬಳಿ ಕಾರ್ಖಾನೆ ಸ್ಥಾಪಿಸಲು ಬಿಎಸ್‌ಪಿಎಲ್‌ಗೆ ಅನುಮತಿ ನೀಡಿರುವುದನ್ನು ರದ್ದು ಮಾಡಿಸಲು ಹೇಳಿರುವುದರಿಂದ ಈ ಸಭೆಗೆ ಭಾರಿ ಮಹತ್ವ ಬಂದಿದೆ. ಇದೇ ಕಾರಣಕ್ಕಾಗಿ ಪಕ್ಷಾತೀತವಾಗಿ ಹಾಲಿ ಮತ್ತು ಮಾಜಿ ಶಾಸಕರು, ಸಚಿವರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಭೆಯಲ್ಲಿ ಎಲ್ಲರೂ ಒಮ್ಮತದ ನಿರ್ಣಯ ಮಾಡಿ, ಬಳಿಕ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ಕೊಪ್ಪಳ ಬಳಿ ಕಾರ್ಖಾನೆ ಸ್ಥಾಪಿಸುವುದಕ್ಕೆ ನೀಡಿರುವ ಆದೇಶ ರದ್ದುಪಡಿಸಬೇಕು ಎಂದು ಒತ್ತಾಯಿಸಲಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು, ಜನವಸತಿ ಪ್ರದೇಶದ ಬಳಿ ಕಾರ್ಖಾನೆ ಸ್ಥಾಪಿಸುವುದು ಸೂಕ್ತವಲ್ಲ. ಹೀಗಾಗಿ, ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ನೀಡಿರುವ ಅನುಮತಿ ಹಿಂಪಡೆಯುತ್ತೇನೆ ಎಂದು ಹೇಳಿದರೆ ಎಲ್ಲವೂ ಸುಸೂತ್ರವಾಗುತ್ತದೆ. ಹಾಗೊಂದು ವೇಳೆ ಇದಕ್ಕೆ ಪರಿಶೀಲಿಸುತ್ತೇನೆ ಎಂದು ಹೇಳಿದರೆ ಜಿಲ್ಲೆಯ ಜನಪ್ರತಿನಿಧಿಗಳ ನಡೆ ಏನಾಗುತ್ತದೆ ಎನ್ನುವುದು ಮುಖ್ಯವಾಗುತ್ತದೆ.

ಧರಣಿ ಮುಂದೂಡಿಕೆ:

ಕೊಪ್ಪಳ ಬಳಿ ಕಾರ್ಖಾನೆ ಸ್ಥಾಪಿಸುವುದು ಬೇಡ ಎಂದು ಕೊಪ್ಪಳ ಬಂದ್ ನಡೆಸಿದ ಮರುದಿನವೇ ನಿರಂತರ ಧರಣಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಗವಿಸಿದ್ಧೇಶ್ವರ ಸ್ವಾಮೀಜಿ ಕಾರ್ಖಾನೆ ಆದೇಶ ರದ್ದುಪಡಿಸುವ ಹೊಣೆಯನ್ನು ಜನಪ್ರತಿನಿಧಿಗಳಿಗೆ ನೀಡಿದ್ದರಿಂದ ಅವರಿಂದ ಯಾವ ಉತ್ತರ ಬರುತ್ತದೆ ಎನ್ನುವ ಕಾರಣಕ್ಕಾಗಿಯೇ ಧರಣಿಯನ್ನು ಮುಂದೂಡಲಾಗಿದೆ.

ಶತಾಯ ಪ್ರಯತ್ನ:

ಕಾರ್ಖಾನೆ ಸ್ಥಾಪನೆ ತಡೆಯಲು ಸಚಿವ, ಶಾಸಕರು, ಮಾಜಿ ಜನಪ್ರತಿನಿಧಿಗಳು ಸೇರಿದಂತೆ ಶತಾಯ ಗತಾಯ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಾಣುತ್ತಿದೆಯಾದರೂ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿದೆ. ಬೃಹತ್ ಹೋರಾಟದ ಬಳಿಕವೂ ಬಿಎಸ್‌ಪಿಎಲ್ ಕಂಪನಿ ಕಾರ್ಖಾನೆ ಸ್ಥಾಪಿಸಲು ಭರದ ಸಿದ್ಧತೆ ಹಾಗೂ ಹೋಮ-ಹವನ ಮಾಡಿದೆ. ಇದನ್ನು ನೋಡಿಯೋ ಇವರು ಏಕೆ ಸುಮ್ಮನಿದ್ದಾರೆ ಎಂಬ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಈ ನಡುವೆ ಕಾರ್ಖಾನೆಯ ಭೂಮಿಯ ಸಮತಟ್ಟು ಮಾಡುವ ಗುತ್ತಿಗೆ ಯಾರು ಪಡೆದಿದ್ದಾರೆ ಎನ್ನುವ ಚರ್ಚೆ ಸಹ ಸಾಮಾಜಿಕ ಜಾಲತಾಣದಲ್ಲಿ ನಡೆದಿದೆ.

ಈ ನಡುವೆ ಜನಪ್ರತಿನಿಧಿಗಳು ಸಿಎಂ ಸಿದ್ದರಾಮಯ್ಯ ಅವರ ಮನವೊಲಿಸಿಯೇ ತೀರುತ್ತೇವೆ. ಸಿದ್ದರಾಮಯ್ಯ ಅವರೇ ಕೊಪ್ಪಳದ ಗವಿಸಿದ್ಧೇಶ್ವರ ಸ್ವಾಮೀಜಿಗೆ ಭರವಸೆ ನೀಡಿದ್ದು ಕಾರ್ಖಾನೆ ಸ್ಥಾಪಿಸಲು ಬಿಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಎಲ್ಲದಕ್ಕೂ ಮಾ. 4ರಂದು ನಡೆಯುವ ಸಭೆಯ ಬಳಿಕವೇ ಉತ್ತರ ದೊರೆಯಲಿದೆ.ಗವಿಸಿದ್ಧೇಶ್ವರ ಸ್ವಾಮೀಜಿ ಹಾಗೂ ಜನರ ಆಶಯದಂತೆ ನಾವು ಸಿಎಂ ಮನವೊಲಿಸುವ ಪ್ರಯತ್ನಿಸುತ್ತೇವೆ. ಜಿಲ್ಲೆಯ ಜನಪರವಾಗಿ ಧ್ವನಿ ಎತ್ತಿ, ಕಾರ್ಖಾನೆ ಅನುಮತಿ ಆದೇಶ ರದ್ದು ಮಾಡಿಸಲು ಶ್ರಮಿಸುತ್ತೇವೆ ಎಂದು ಸಚಿವ ಶಿವರಾಜ ತಂಗಡಗಿ ಭರವಸೆ ನೀಡಿದ್ದಾರೆ.ಜನಪ್ರತಿನಿಧಿಗಳು ತಮ್ಮ ಪ್ರಯತ್ನದ ಮೂಲಕ ಕಾರ್ಖಾನೆಯ ಅನುಮತಿ ರದ್ದುಪಡಿಸಿದರೆ ಒಳ್ಳೆಯದು. ಹಾಗೊಂದು ವೇಳೆ ಅದಾಗದಿದ್ದರೆ ಹೋರಾಟ ಮುಂದುವರಿಸುತ್ತೇವೆ ಎಂದು ಕೊಪ್ಪಳ ಬಚಾವೋ ಆಂದೋಲನ ಸಮಿತಿ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಹೇಳಿದರು. ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಗವಿಸಿದ್ಧೇಶ್ವರ ಸ್ವಾಮೀಜಿ ಜನಪ್ರತಿನಿಧಿಗಳಿಗೆ ಜವಾಬ್ದಾರಿ ನೀಡಿದ್ದು, ಅವರ ಪ್ರಯತ್ನವನ್ನು ಕಾದು ನೋಡುತ್ತಿದ್ದೇವೆ. ಅದಾಗದಿದ್ದರೆ ಹೋರಾಟ ಅನಿವಾರ್ಯ ಎಂದು ಕೊಪ್ಪಳ ತಾಲೂಕು ಪರಿಸರ ಹಿರತಕ್ಷಣಾ ಸಮಿತಿ ಸಂಚಾಲಕ ರಮೇಶ ತುಪ್ಪದ ತಿಳಿಸಿದ್ದಾರೆ.

Share this article