ಬಿಎಸ್‌ಪಿಎಲ್ ಮೊಂಡಾಟ, ಜನಪ್ರತಿನಿಧಿಗಳ ಪೀಕಲಾಟ!

KannadaprabhaNewsNetwork |  
Published : Mar 15, 2025, 01:03 AM IST
546564 | Kannada Prabha

ಸಾರಾಂಶ

ಜಿಲ್ಲೆಯ ಸರ್ವಪಕ್ಷ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಹೋಗಿ ಕಾರ್ಖಾನೆ ಆರಂಭಕ್ಕೆ ತಡೆ ನೀಡಿದೆ. ಮುಖ್ಯಮಂತ್ರಿಗಳು ಮೌಖಿಕ ಆದೇಶ ಮಾಡಿದ್ದನ್ನೇ ಜಿಲ್ಲೆಯ ಜನಪ್ರತಿನಿಧಿಗಳು ಗೆದ್ದುಬಿಟ್ಟೆವು ಎನ್ನುವಂತೆ ಬೀಗಿ ಸುಮ್ಮನಾಗಿದ್ದಾರೆ. ಆದರೆ, ಇದಾದ ಮೇಲೂ ಬಿಎಸ್‌ಪಿಎಲ್‌ ಕಾರ್ಖಾನೆ ಸ್ಥಾಪಿಸಲು ಪ್ರಯತ್ನಿಸುತ್ತಲೇ ಇದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ:

ಕೊಪ್ಪಳ ಬಳಿ ತಲೆ ಎತ್ತಲು ಮುಂದಾಗಿದ್ದ ಬಿಎಸ್‌ಪಿಎಲ್ ಬೃಹತ್ ಕಾರ್ಖಾನೆಗೆ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ತಾತ್ಕಾಲಿಕ್‌ ಬ್ರೇಕ್‌ ಬಿದ್ದಿದೆ. ಸರ್ಕಾರ ಬಿಎಸ್‌ಪಿಎಲ್ ಕಾರ್ಖಾನೆಗೆ ಪರ್ಯಾಯ ಕಂಪನಿ ಸ್ಥಾಪಿಸಲು ಸಲಹೆ ನೀಡಿದರೂ ಬಲ್ಡೋಟಾ ಕಂಪನಿ ಮಾತ್ರ ಕಾರ್ಖಾನೆ ಸ್ಥಾಪಿಸುವುದಾಗಿ ಹಠ ಹಿಡಿದಿದೆ. ಇದು ಜನಪ್ರತಿನಿಧಿಗಳ ಪಿಕಲಾಟಕ್ಕೆ ಕಾರಣವಾಗಿದೆ.

ಜಿಲ್ಲೆಯ ಸರ್ವಪಕ್ಷ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಹೋಗಿ ಕಾರ್ಖಾನೆ ಆರಂಭಕ್ಕೆ ತಡೆ ನೀಡಿದೆ. ಮುಖ್ಯಮಂತ್ರಿಗಳು ಮೌಖಿಕ ಆದೇಶ ಮಾಡಿದ್ದನ್ನೇ ಜಿಲ್ಲೆಯ ಜನಪ್ರತಿನಿಧಿಗಳು ಗೆದ್ದುಬಿಟ್ಟೆವು ಎನ್ನುವಂತೆ ಬೀಗಿ ಸುಮ್ಮನಾಗಿದ್ದಾರೆ. ಆದರೆ, ಇದಾದ ಮೇಲೂ ಬಿಎಸ್‌ಪಿಎಲ್‌ ಕಾರ್ಖಾನೆ ಸ್ಥಾಪಿಸಲು ಪ್ರಯತ್ನಿಸುತ್ತಲೇ ಇದೆ.

ಅನುಮತಿ ಸಿಕ್ಕಿದೆ:

ಕೊಪ್ಪಳ ಬಳಿ ಬಿಎಸ್‌ಪಿಎಲ್ ಕಾರ್ಖಾನೆ ಆರಂಭಿಸಲು ಈಗಾಗಲೇ ಪರಿಸರ ಇಲಾಖೆ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಪರವಾನಗಿ ಪಡೆದಿದೆ. ಎಂಎಸ್‌ಪಿಎಲ್ ಮತ್ತು ಆರ್ಸೆಸ್ ಕಂಪನಿ ಹೆಸರಿನಲ್ಲಿ ಕಾರ್ಖಾನೆ ಸ್ಥಾಪಿಸಲು 2018ರಲ್ಲಿ ಸಾರ್ವಜನಿಕ ಅಹವಾಲು ಸಭೆ ನಡೆಸಿದ ದಾಖಲೆ ಸೃಷ್ಟಿಸಿಕೊಂಡಿದೆ. ಆದರೆ, ಈ ಸಭೆ ಯಾವಾಗ ಕರೆಯಲಾಗಿದೆ, ಯಾರು ಹಾಜರಾಗಿದ್ದರು ಎನ್ನುವುದು ನಿಗೂಢವಾಗಿದೆ. ರಾಜ್ಯ ಸರ್ಕಾರದ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 10.5 ಮಿಲಿಯನ್ ಟನ್ ವಾರ್ಷಿಕ ಉತ್ಪಾದನಾ ಒಡಂಬಡಿಕೆ ಮಾಡಿಕೊಂಡಿದ್ದರೂ ಸಹ ಪರಿಸರ ಇಲಾಖೆಯಿಂದ ಕೇವಲ 3.5 ಮಿಲಿಯನ್ ಟನ್ ವಾರ್ಷಿಕ ಉತ್ಪಾದನಾ ಅನುಮತಿ ದೊರೆತಿದೆ ಎಂದು ತಿಳಿದು ಬಂದಿದೆ. ಎಂಎಸ್‌ಪಿಎಲ್ ಕಂಪನಿ ಮತ್ತು ಬಿಎಸ್‌ಪಿಎಲ್ ಕಂಪನಿ ಒಂದೇ ಎನ್ನುವ ದಾಖಲೆ ಸಹ ಮಾಡಿಕೊಂಡಿದ್ದಾರೆ. ಕೊಪ್ಪಳದಲ್ಲಿರುವ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಇವರಿಗೆ ಕಾರ್ಖಾನೆ ಸ್ಥಾಪಿಸಲು ಅನುಮತಿ ನೀಡಿದೆ ಎನ್ನುವುದು ಗಮನಾರ್ಹ ಸಂಗತಿ.

ಸುಮ್ಮನೇ ಕುಳಿತರೆ ಆಗದು:

ಕಾರ್ಖಾನೆ ಸ್ಥಾಪನೆ ಕಾಮಗಾರಿ ಸ್ಥಗಿತಗೊಂಡಿರುವುದನ್ನೇ ಸಂಭ್ರಮಿಸುತ್ತಿರುವ ಜನಪ್ರತಿನಿಧಿಗಳು, ಕಂಪನಿ ಯಾವುದೇ ಕಾರಣಕ್ಕೂ ಸ್ಥಾಪನೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಇದೆ. ಕಾರ್ಖಾನೆಯನ್ನು ಸರ್ಕಾರ ಬೇರೆಡೆ ಸ್ಥಳಾಂತರಿಸುವ ಅಥವಾ ಆರಂಭಿಸದಂತೆ ಅಧಿಕೃತ ಲಿಖಿತ ಆದೇಶ ಹೊರಬೀಳುವವ ವರೆಗೂ ಪ್ರಯತ್ನಿಸಬೇಕಿದೆ. ಜಿಲ್ಲೆಯ ಜನರು ಜನಪ್ರತಿನಿಧಿಗಳು ಇದನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದು ಜನಪ್ರತಿನಿಧಿಗಳಿಗೆ ಸಂಕಷ್ಟ ತಂದೊಡ್ಡಿದೆ.

ಶ್ರೀಗಳ ನಡೆಯತ್ತ ಎಲ್ಲರ ಚಿತ್ತ:

ಕಾರ್ಖಾನೆ ಸ್ಥಾಪನೆ ವಿರೋಧಿಸಿ ನಡೆದಿದ್ದ ಹೋರಾಟದಲ್ಲಿ ಭಾಗಿಯಾಗಿದ್ದ ಗವಿಸಿದ್ಧೇಶ್ವರ ಶ್ರೀಗಳು, ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಸ್ಥಾಪಿಸದಂತೆ ನೋಡಿಕೊಳ್ಳಬೇಕೆಂದು ಜನಪ್ರತಿನಿಧಿಗಳ ಮೇಲೆ ಜವಾಬ್ದಾರಿ ಹಾಕಿದ್ದರು. ಬಳಿಕ ಮೌನಾನುಷ್ಠಾನದಲ್ಲಿ ತೊಡಗಿದ್ದರು. ಇದೀಗ ಹರಿದ್ವಾರಕ್ಕೆ ಪ್ರಯಾಣ ಬೆಳೆಸಿರುವ ಶ್ರೀಗಳು ಯಾವಾಗ ಬರುತ್ತಾರೆ ಎಂದು ಭಕ್ತರು ಕಾಯುತ್ತಿದ್ದಾರೆ. ಹೋರಾಟ ಮಾಡಬೇಡಿ ಎಂದು ಸಹ ಹೇಳಿದ್ದರಿಂದ ಯಾವ ನಿರ್ಧಾರ ಪ್ರಕಟಿಸುತ್ತಾರೆ ಎಂದು ಹೋರಾಟಗಾರರು ಎದುರು ನೋಡುತ್ತಿದ್ದಾರೆ.ಕೊಪ್ಪಳ ಬಳಿ ಕಾರ್ಖಾನೆ ಆರಂಭಕ್ಕೆ ಸಿಎಂ ಸಿದ್ದರಾಮಯ್ಯ ಬ್ರೇಕ್‌ ಹಾಕಿದ್ದಾರೆ. ಈಗ ಸರ್ಕಾರದ ಹಂತದಲ್ಲಿ ಪರವಾನಗಿ ರದ್ದುಪಡಿಸುವ ದಿಸೆಯಲ್ಲಿ ಪ್ರಯತ್ನ ನಡೆದಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.ಜನಪ್ರತಿನಿಧಿಗಳು ಸರ್ಕಾರದಿಂದ ಕೇವಲ ಮೌಖಿಕ ಆದೇಶ ಮಾಡಿಸಿದ್ದಾರೆ. ಇದಾದ ಮೇಲೆ ಯಾವುದೇ ಬೆಳವಣಿಗೆಯಾಗಿಲ್ಲ. ಹೀಗಾಗಿ, ನಮಗೂ ಆತಂಕವಾಗಿದೆ. ಯಾವುದಕ್ಕೂ ಶ್ರೀಗವಿಸಿದ್ಧೇಶ್ವರ ಶ್ರೀಗಳು ಆಗಮಿಸಿದ ನಂತರ, ಎಲ್ಲರೂ ಭೇಟಿಯಾಗಿ, ಮುಂದಿನ ಹೋರಾಟವನ್ನು ಅವರ ಅಪ್ಪಣೆಯಂತೆ ಮಾಡುತ್ತೇವೆ ಎಂದು ಕೊಪ್ಪಳ ತಾಲೂಕು ಪರಿಸರ ಹಿತರಕ್ಷಣಾ ವೇದಿಕೆ ಸಂಚಾಲಕ ಮಂಜುನಾಥ ಅಂಗಡಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ