ಮಂಜಿನ ನಗರಿಯಲ್ಲಿ ಮುದ್ದಂಡ ಹಾಕಿ ಉತ್ಸವ ಸಂಭ್ರಮ

KannadaprabhaNewsNetwork | Published : Mar 15, 2025 1:03 AM

ಸಾರಾಂಶ

ವಿಶ್ವದ ಗಮನ ಸೆಳೆದು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ ದಾಖಲೆ ನಿರ್ಮಿಸಿರುವ ಕೊಡವ ಕೌಟುಂಬಿಕ ಹಾಕಿ ಉತ್ಸವದ 25ನೇ ವರ್ಷದ ಪಂದ್ಯಾವಳಿಯ ಜವಾಬ್ದಾರಿಯನ್ನು ಮುದ್ದಂಡ ಕುಟುಂಬ ವಹಿಸಿಕೊಂಡಿದ್ದು, ಮಂಜಿನ ನಗರಿ ಮಡಿಕೇರಿಯಲ್ಲಿ ಮಾ.28ರಿಂದ ಏ.27ರ ವರೆಗೆ ಸುಮಾರು ಒಂದು ತಿಂಗಳು ಹಾಕಿ ಪಂದ್ಯಗಳು ನಡೆಯಲಿದ್ದು, ಸಿದ್ಧತೆಗಳು ಭರದಿಂದ ಸಾಗಿದೆ.

28ರಿಂದ ಒಂದು ತಿಂಗಳು ನಡೆಯಲಿದೆ ಪಂದ್ಯಾವಳಿ । ಬೆಳ್ಳಿ ಮಹೋತ್ಸವಕ್ಕೆ ಸಾಕ್ಷಿಯಾಗಲಿದೆ ಮಡಿಕೇರಿ

ವಿಘ್ನೇಶ್ ಎಂ. ಭೂತನಕಾಡು

ಕನ್ನಡಪ್ರಭ ವಾರ್ತೆ ಮಡಿಕೇರಿವಿಶ್ವದ ಗಮನ ಸೆಳೆದು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ ದಾಖಲೆ ನಿರ್ಮಿಸಿರುವ ಕೊಡವ ಕೌಟುಂಬಿಕ ಹಾಕಿ ಉತ್ಸವದ 25ನೇ ವರ್ಷದ ಪಂದ್ಯಾವಳಿಯ ಜವಾಬ್ದಾರಿಯನ್ನು ಮುದ್ದಂಡ ಕುಟುಂಬ ವಹಿಸಿಕೊಂಡಿದ್ದು, ಮಂಜಿನ ನಗರಿ ಮಡಿಕೇರಿಯಲ್ಲಿ ಮಾ.28ರಿಂದ ಏ.27ರ ವರೆಗೆ ಸುಮಾರು ಒಂದು ತಿಂಗಳು ಹಾಕಿ ಪಂದ್ಯಗಳು ನಡೆಯಲಿದ್ದು, ಸಿದ್ಧತೆಗಳು ಭರದಿಂದ ಸಾಗಿದೆ.ಹಾಕಿ ಪ್ರೇಮಿ ಪಾಂಡಂಡ ಕುಟ್ಟಣಿ ಕುಟ್ಟಪ್ಪ ಅವರು 1997ರಲ್ಲಿ ಕರಡ ಗ್ರಾಮದಲ್ಲಿ ಮೊದಲ ಬಾರಿಗೆ ಕೊಡವ ಕೌಟುಂಬಿಕ ಹಾಕಿ ಉತ್ಸವವನ್ನು ಆರಂಭಿಸುವ ಮೂಲಕ ಹಾಕಿ ಉತ್ಸವಕ್ಕೆ ಚಾಲನೆ ನೀಡಿದರು. ಕೊಡವ ಹಾಕಿ ಅಕಾಡೆಮಿಯ ಅಧೀನದಲ್ಲಿ ಪ್ರತಿ ವರ್ಷ ಕೌಟುಂಬಿಕ ಹಾಕಿ ಉತ್ಸವ ನಡೆಯುತ್ತಿದ್ದು, ಪ್ರತಿ ವರ್ಷ ಒಂದೊಂದು ಕೊಡವ ಕುಟುಂಬ ಹಾಕಿ ಉತ್ಸವದ ಜವಾಬ್ದಾರಿ ವಹಿಸಿಕೊಂಡು ಅತ್ಯಂತ ಯಶಸ್ವಿಯಾಗಿ ನಡೆಸುತ್ತದೆ.ಈ ವರ್ಷ 25ನೇ ವರ್ಷದ ಉತ್ಸವ ಆಗಿದ್ದು, ಮುದ್ದಂಡ ಕುಟುಂಬ ವಹಿಸಿಕೊಂಡಿದೆ. ಮಡಿಕೇರಿಯ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಈಗಾಗಲೇ ಸಿದ್ಧತೆ ಆರಂಭಿಸಿದೆ. ಮುದ್ದಂಡ ಕುಟುಂಬ ಕೂಡ ಈ ಬಾರಿ ಗಿನ್ನೆಸ್ ದಾಖಲೆ ಮಾಡುವ ಗುರಿಯನ್ನು ಹೊಂದಿದೆ.ಮುದ್ದಂಡ ಫ್ಯಾಮಿಲಿ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಚಾರಿಟೇಬಲ್ ಟ್ರಸ್ಟ್ ಮೂಲಕ ಮುದ್ದಂಡ ಹಾಕಿ ಉತ್ಸವ ಆಯೋಜಿಸಲಾಗುತ್ತಿದ್ದು, ಮುದ್ದಂಡ ರಶಿನ್ ಸುಬ್ಬಯ್ಯ ಅವರ ಮುಂದಾಳತ್ವದಲ್ಲಿ ಇಡೀ ಮುದ್ದಂಡ ಕುಟುಂಬ ಹಾಕಿ ಉತ್ಸವಕ್ಕೆ ಶ್ರಮಿಸುತ್ತಿದೆ. ಈ ಬಾರಿ ನಡೆಯುವ ಹಾಕಿ ಉತ್ಸವಕ್ಕೆ ಸುಮಾರು 2 ಕೋಟಿ ರು. ವೆಚ್ಚ ಮಾಡಲಾಗುತ್ತಿದೆ.

25ನೇ ವರ್ಷದ ಅಂಗವಾಗಿ 1997ರಿಂದ ಇಲ್ಲಿಯ ವರೆಗೆ ಹಾಕಿ ಉತ್ಸವವನ್ನು ಆಯೋಜಿಸಿದ ಎಲ್ಲ ಕುಟುಂಬಗಳ ಐನ್ ಮನೆಗಳಿಗೆ ಮುದ್ದಂಡ ಹಾಕಿ ಉತ್ಸವದ ಕ್ರೀಡಾಜ್ಯೋತಿ ತೆರಳುವುದು ಈ ಬಾರಿಯ ವಿಶೇಷವಾಗಿದೆ.ಮುದ್ದಂಡ ಹಾಕಿ ಉತ್ಸವದಲ್ಲಿ ಪಾಲ್ಗೊಳ್ಳಲು ಈಗಾಗಲೇ ಸುಮಾರು 300ಕ್ಕೂ ಅಧಿಕ ಕುಟುಂಬದ ತಂಡಗಳು ನೋಂದಾಯಿಸಿಕೊಂಡಿವೆ. ಆನ್‌ಲೈನ್ ಹಾಗೂ ಜಿಲ್ಲೆಯ ಸುಮಾರು 40 ಕಡೆಗಳಲ್ಲಿ ಹಾಕಿ ತಂಡಗಳ ಹೆಸರು ನೋಂದಾಯಿಸಲು ವ್ಯವಸ್ಥೆ ಮಾಡಲಾಗಿದೆ. ಮಡಿಕೇರಿಯ ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಮೈದಾನ ಹಾಗೂ ಗ್ಯಾಲರಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಸುಮಾರು 25 ಸಾವಿರ ಮಂದಿ ಕ್ರೀಡಾಪ್ರೇಮಿಗಳು ಹಾಗೂ ಪ್ರೇಕ್ಷಕರು ಗ್ಯಾಲರಿಯಲ್ಲಿ ಕುಳಿತುಕೊಂಡು ಪಂದ್ಯವನ್ನು ವೀಕ್ಷಿಸಲು ಎಲ್ಲ ಸಿದ್ಧತೆಗಳನ್ನು ಮುದ್ದಂಡ ಕುಟುಂಬದ ಪ್ರಮುಖರು ಮಾಡುತ್ತಿದ್ದಾರೆ.25ನೇ ವರ್ಷದ ಉತ್ಸವ ಆಗಿರುವುದರಿಂದ ಅಧಿಕ ಮಂದಿ ಪಂದ್ಯಾವಳಿಯನ್ನು ವೀಕ್ಷಣೆ ಮಾಡಲು ಆಗಮಿಸುವ ಸಾಧ್ಯತೆ ಇರುವುದರಿಂದ ಮೈದಾನದ ಸಮೀಪದಲ್ಲಿ ಸುಮಾರು 2000ಕ್ಕೂ ಅಧಿಕ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಸ್ಥಳೀಯರಾದ ಯಾಲದಾಳು ಮನೋಜ್ ಬೋಪಯ್ಯ ಹಾಗೂ ಬಿದ್ದಂಡ ದಿಲೀಪ್ ನಾಚಪ್ಪ ಕೂಡ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆಗೆ ಸಹಕರಿಸಿದ್ದಾರೆ.ಹಾಕಿ ಉತ್ಸವದಲ್ಲಿ ವಿಜೇತ ತಂಡಕ್ಕೆ 5 ಲಕ್ಷ ರು. ನಗದು ಹಾಗೂ ಟ್ರೋಫಿ, ರನ್ನರ್ ಅಪ್ ಪ್ರಶಸ್ತಿ ಪಡೆದ ತಂಡಕ್ಕೆ 3 ಲಕ್ಷ ರು. ನಗದು ಹಾಗೂ ಟ್ರೋಫಿ ಹಾಗೂ ಸೆಮಿಫೈನಲ್‌ನಲ್ಲಿ ಪರಾಜಿತಗೊಂಡ ತಂಡಕ್ಕೆ ತಲಾ 1 ಲಕ್ಷ ರು. ನಗದು ಬಹುಮಾನವನ್ನು ನೀಡಲಾಗುತ್ತದೆ. ಈ ವರ್ಷ 25ನೇ ವರ್ಷದ ಬೆಳ್ಳಿ ಮಹೋತ್ಸವದ ವಿಶೇಷ ಎಂಬಂತೆ ಮಹಿಳೆಯರಿಗೆ ರಿಂಕ್ ಹಾಕಿ ಪಂದ್ಯಾವಳಿಯನ್ನು ಕೂಡ ಆಯೋಜಿಸಲಾಗುತ್ತಿದೆ. ವಿಜೇತ ತಂಡಕ್ಕೆ 2 ಲಕ್ಷ ರು. ಹಾಗೂ ರನ್ನರ್ ಅಪ್ ತಂಡಕ್ಕೆ 1 ಲಕ್ಷ ರು. ನೀಡಲಾಗುತ್ತಿದೆ.-----------------ಮಡಿಕೇರಿಯಲ್ಲಿ ಮೂರನೇ ಬಾರಿಯ ಉತ್ಸವಕೊಡವ ಕುಟುಂಬಗಳ ನಡುವೆ ನಡೆಯುವ ಕೌಟುಂಬಿಕ ಹಾಕಿ ಉತ್ಸವದ ಜವಾಬ್ದಾರಿಯನ್ನು ಪ್ರತಿ ವರ್ಷ ಕೂಡ ಒಂದೊಂದು ಕೊಡವ ಕುಟುಂಬಗಳು ವಹಿಸಿಕೊಳ್ಳುತ್ತದೆ. ಮಡಿಕೇರಿಯಲ್ಲಿ ಮೂರನೇ ಬಾರಿ ಉತ್ಸವ ನಡೆಯುತ್ತಿದೆ. 2005ರಲ್ಲಿ ಬಿದ್ದಂಡ ಕುಟುಂಬ ವಹಿಸಿಕೊಂಡಿದ್ದು, 222 ತಂಡಗಳು ಪಾಲ್ಗೊಂಡಿತ್ತು. 2016ರಲ್ಲಿ ಶಾಂತೆಯಂಡ ಕುಟುಂಬ ವಹಿಸಿಕೊಂಡಿದ್ದು, 299 ಕುಟುಂಬಗಳು ಪಾಲ್ಗೊಂಡಿತ್ತು. ಇದೀಗ 2025ರಲ್ಲಿ 25ನೇ ವರ್ಷದ ಬೆಳ್ಳಿಮಹೋತ್ಸವ ಆಗಿರುವುದರಿಂದ ಮುದ್ದಂಡ ಕುಟುಂಬ ವಹಿಸಿಕೊಂಡಿದ್ದು, ಸುಮಾರು 400 ತಂಡಗಳನ್ನು ಪಾಲ್ಗೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಮುದ್ದಂಡ ಕುಟುಂಬ ಗುರಿ ಹೊಂದಿದ್ದು, ಈಗಾಗಲೇ ಕೆಲಸವನ್ನು ಮಾಡುತ್ತಿದೆ.

--------------ಮುದ್ದಂಡ ಕುಟುಂಬದ ಹಿನ್ನೆಲೆ ಕೊಡವ ಕುಟುಂಬಗಳಲ್ಲಿ ಮುದ್ದಂಡ ಕುಟುಂಬವು ಪ್ರಮುಖ ಹಾಗೂ ಗೌರವಯುತ ಕೊಡವ ಕುಟುಂಬಗಳಲ್ಲಿ ಒಂದಾಗಿದೆ. ಶ್ರೀಮಂತ ಪರಂಪರೆ ಮತ್ತು ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಸಂಸ್ಕೃತಿ ಮತ್ತು ಇತಿಹಾಸದಲ್ಲಿ ತಮ್ಮ ಛಾಪು ಮೂಡಿಸಿರುವ ಹಲವಾರು ಕೊಡವ ಕುಟುಂಬಗಳಲ್ಲಿ, ಮುದ್ದಂಡ ಕುಟುಂಬವು ಹಲವು ತಲೆಮಾರುಗಳ ಹಿಂದಿನ ಪರಂಪರೆಯೊಂದಿಗೆ ಗುರುತಿಸಿಕೊಂಡಿದೆ. ವಿರಾಜಪೇಟೆ ತಾಲೂಕಿನ ಅರಮೇರಿ ಗ್ರಾಮದಲ್ಲಿ ಮುದ್ದಂಡ ಕುಟುಂಬದ ಬೇರುಗಳನ್ನು ಗುರುತಿಸಬಹುದಾಗಿದೆ ಹಾಗೂ ಅದೇ ಮೂಲ ತಾಯ್ನಾಡು ಎಂದು ನಂಬಲಾಗಿದೆ.ಇಂದು, ಕುಟುಂಬದ ಸದಸ್ಯರು ವಿವಿಧ ಪ್ರದೇಶಗಳಲ್ಲಿ ವಿಶೇಷವಾಗಿ ಮಡಿಕೇರಿ ನಗರ, ಮಾದಾಪುರ ಮತ್ತು ಸೋಮವಾರಪೇಟೆ ತಾಲೂಕಿನ ಸುರ್ಲಾಬ್ಬಿ ಮತ್ತಿತರ ಕಡೆಗಳಲ್ಲಿ ನೆಲೆಸಿದ್ದಾರೆ. ಮುದ್ದಂಡ ಕುಟುಂಬವು ದೊಡ್ಡ ಮತ್ತು ಸಮೃದ್ಧ ಸಮುದಾಯವಾಗಿ ಬೆಳೆದಿದೆ. 100ಕ್ಕೂ ಹೆಚ್ಚು ವಿಭಕ್ತ ಕುಟುಂಬಗಳು ಮತ್ತು ಸುಮಾರು 400 ಸದಸ್ಯರಿದ್ದಾರೆ. ಕೊಡಗಿನಲ್ಲಿ ಮಾತ್ರವಲ್ಲದೆ ರಾಜ್ಯಾದ್ಯಂತ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸಿದ್ದಾರೆ. ಕೆಲವರು ಭಾರತದ ವಿವಿಧ ಭಾಗಗಳಲ್ಲಿ ನೆಲೆಸಿದ್ದಾರೆ, ಇನ್ನು ಕೆಲವರು ವಿದೇಶಗಳಲ್ಲಿ ನೆಲೆಸಿದ್ದಾರೆ. ಭೌಗೋಳಿಕವಾಗಿ ಹರಡಿಕೊಂಡಿದ್ದರೂ ಕೂಡ ಕುಟುಂಬವು ತಮ್ಮ ಬೇರುಗಳೊಂದಿಗೆ ನಿಕಟ ಸಂಪರ್ಕ ಹೊಂದಿದೆ. ಹಲವರು ಇನ್ನೂ ಕೊಡಗಿನೊಂದಿಗೆ ಬಲವಾದ ಸಂಬಂಧವನ್ನು ಉಳಿಸಿಕೊಂಡಿದ್ದಾರೆ. ಕುಟುಂಬ ಸಂಪ್ರದಾಯಗಳು ಮತ್ತು ಸ್ಥಳೀಯ ಸಮುದಾಯ ಚಟುವಟಿಕೆಗಳಲ್ಲಿ ಈಗಲೂ ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ.

-------------------25ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಉತ್ಸವವನ್ನು ನಮ್ಮ ಕುಟುಂಬ ವಹಿಸಿಕೊಂಡಿದ್ದು, ಮಡಿಕೇರಿಯ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಒಂದು ತಿಂಗಳು ಹಾಕಿ ಉತ್ಸವ ನಡೆಸಲು ಸಿದ್ಧತೆ ಮಾಡಿದ್ದೇವೆ. ಹಲವು ವಿಶೇಷತೆಗಳಿಗೆ ಈ ಬಾರಿಯ ಮುದ್ದಂಡ ಹಾಕಿ ಉತ್ಸವ ಸಾಕ್ಷಿಯಾಗಲಿದೆ. ಮಹಿಳೆಯರಿಗೆ ಕೂಡ ಹಾಕಿ ಪಂದ್ಯಾವಳಿ ಆಯೋಜಿಸಲಾಗಿರುವುದು ಈ ಬಾರಿಯ ಮತ್ತೊಂದು ವಿಶೇಷವಾಗಿದೆ.। ಮುದ್ದಂಡ ರಶಿನ್ ಸುಬ್ಬಯ್ಯ, ಅಧ್ಯಕ್ಷರು ಮುದ್ದಂಡ ಫ್ಯಾಮಿಲಿ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಚಾರಿಟೇಬಲ್ ಟ್ರಸ್ಟ್

Share this article