ಬಿಎಸ್‌ವೈ ಬಂಧನಕ್ಕೆ ಸಿದ್ಧತೆ!

KannadaprabhaNewsNetwork |  
Published : Jun 13, 2024, 12:52 AM ISTUpdated : Jun 13, 2024, 08:44 AM IST
B. S. Yediyurappa

ಸಾರಾಂಶ

ಬಿ-ರಿಪೋರ್ಟ್‌ ಹಂತಕ್ಕೆ ಹೋಗಿದ್ದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಕೇಸ್‌ಗೆ ದಿಢೀರ್‌ ಮರುಜೀವ ಬಂದಿದ್ದು, ಮಾಜಿ ಸಿಎಂ ಯಡಿಯೂರಪ್ಪಗೆ ನೋಟಿಸ್‌ ಕೊಟ್ಟು ಒಂದೇ ದಿನದಲ್ಲಿ ಹಾಜರಾಗಲು ಸೂಚನೆ ನೀಡಲಾಗಿದೆ.  

 ಬೆಂಗಳೂರು :  ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮತ್ತೆ ಬಂಧಿಸಿ ಜೈಲಿಗೆ ಕಳುಹಿಸಲು ಸರ್ಕಾರ ಸಿದ್ಧತೆ ನಡೆಸಿದೆಯೇ?

ಇದೀಗ ಆಗಿರುವ ದಿಢೀರ್ ಬೆಳವಣಿಗೆಗಳನ್ನು ನೋಡಿದರೆ ಯಡಿಯೂರಪ್ಪ ಅವರ ಬಂಧನ ನಿಶ್ಚಿತ ಎನ್ನುವ ಹಂತ ತಲುಪಿದೆ.

ಮೂರು ತಿಂಗಳ ಹಿಂದೆ, ಲೋಕಸಭಾ ಚುನಾವಣೆಗೂ ಮೊದಲು ದಾಖಲಾಗಿದ್ದ ಅಪ್ರಾಪ್ತ ಬಾಲಕಿ ಮೇಲಿನ ಲೈಂಗಿಕ ಕಿರುಕುಳ ಪ್ರಕರಣ ಚುನಾವಣೆಯ ಫಲಿತಾಂಶದ ನಂತರ ದಿಢೀರ್ ಬೆಳವಣಿಗೆ ಕಂಡಿದ್ದು, ಯಡಿಯೂರಪ್ಪ ಅವರನ್ನು ಬಂಧಿಸುವ ಸಿದ್ಧತೆ ನಡೆದಿದೆ ಎನ್ನಲಾಗಿದೆ.

ಈ ಪ್ರಕರಣ ಸಂಬಂಧ ಯಡಿಯೂರಪ್ಪ ಅವರಿಗೆ ಸಿಐಡಿ ಮಂಗಳವಾರ ದಿಢೀರ್‌ ನೋಟಿಸ್ ನೀಡಿ ಬುಧವಾರವೇ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಇನ್ನೊಂದೆಡೆ ಇದೇ ಪ್ರಕರಣದಲ್ಲಿ ಯಡಿಯೂರಪ್ಪ ಅವರನ್ನು ಬಂಧಿಸುವಂತೆ ಆದೇಶ ಕೋರಿ ಹೈಕೋರ್ಟ್‌ನಲ್ಲಿ ಸಂತ್ರಸ್ತೆ ಕುಟುಂಬ ಮನವಿ ಮಾಡಿದೆ.

ಹೆಚ್ಚೂಕಡಮೆ ಬಿ ರಿಪೋರ್ಟ್‌ ಸಲ್ಲಿಸಬಹುದು ಎನ್ನಲಾಗಿದ್ದ ಪ್ರಕರಣ ದಿಢೀರ್ ಎರಡು ಬೆಳವಣಿಗೆ ಕಂಡಿರುವುದು ರಾಜಕೀಯ ಪ್ರೇರಿತ ಎನ್ನುವುದು ಈ ಪ್ರಕರಣದ ಕಾನೂನು ಪಂಡಿತರ ಆರೋಪ.

ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದ ಆರಂಭದಲ್ಲಿ ಇದು ಸತ್ಯಕ್ಕೆ ದೂರವಾದ ಆಪಾದನೆ ಎಂಬ ಮಾತುಗಳು ಕೇಳಿ ಬಂದಿದ್ದವು. ದೂರು ನೀಡಿದ ಮಹಿಳೆ ಯಡಿಯೂರಪ್ಪ ಅವರಲ್ಲದೆ ಇತರ 53 ವಿವಿಧ ಗಣ್ಯರ ಮೇಲೆ ಕೂಡ ದೂರು ನೀಡಿದ್ದರು. ಆ ಸಂದರ್ಭದಲ್ಲಿ ದೂರು ನೀಡಿದ ಸಂತ್ರಸ್ತೆಯ ತಾಯಿಯನ್ನು ಮಾನಸಿಕ ಅಸ್ವಸ್ಥೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ ಕೊಟ್ಟಿದ್ದರು. ಹೀಗೆಲ್ಲ ಇದ್ದರೂ ತನಿಖೆ ದಿಢೀರ್ ಈ ಹಂತಕ್ಕೆ ಬೆಳವಣಿಗೆ ಕಂಡಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.

ರಾಜಕೀಯ ಉದ್ದೇಶ?:

ಚುನಾವಣೆಗೂ ಮುನ್ನ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆದು ಇನ್ನೇನು ಇದರಲ್ಲಿ ಹುರುಳಿಲ್ಲ ಎಂಬ ನಿಲವಿಗೆ ಅಧಿಕಾರಿಗಳು ಬರತೊಡಗಿದ್ದರು. ಇದೀಗ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಪ್ರಕರಣದ ವಿಚಾರಣೆ ತೀವ್ರಗೊಳಿಸಿ ಯಡಿಯೂರಪ್ಪ ಅವರನ್ನು ಬಂಧಿಸುವ ಪ್ರಯತ್ನ ನಡೆದಿರುವುದರ ಹಿಂದೆ ರಾಜಕೀಯ ಅಡಗಿದೆ ಎಂದು ಅವರ ಆಪ್ತರು ಆರೋಪಿಸುತ್ತಿದ್ದಾರೆ.

ಪೋಕ್ಸೋ ಪ್ರಕರಣದಲ್ಲಿ ಇವರನ್ನು ಬಂಧಿಸುವುದಾದರೆ ಈ ಮೂರು ತಿಂಗಳು ಯಾಕೆ ಬಂಧಿಸಿರಲಿಲ್ಲ? ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ಅದರಲ್ಲೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಫಲಿತಾಂಶದ ಹಿನ್ನಡೆಯ ನಂತರ ಈ ಬೆಳವಣಿಗೆ ಆಗುತ್ತಿರುವುದು ಯಾಕೆ ಎಂದು ಅವರು ಪ್ರಶ್ನಿಸುತ್ತಿದ್ದಾರೆ.

ಈ ಹಿಂದೆ ಸಿಐಡಿ ನೋಟಿಸ್ ನೀಡಿದಾಗಲೆಲ್ಲ ಯಡಿಯೂರಪ್ಪ ಅವರು ಸಿಐಡಿ ಕಚೇರಿಗೆ ಖುದ್ದು ಹಾಜರಾಗಿ ವಿಚಾರಣೆಗೆ ಸಹಕರಿಸಿದ್ದರು. ಈಗ ಕೇವಲ ಒಂದೇ ದಿನದ ಕಾಲಾವಕಾಶ ನೀಡಿ ಬಂಧನದ ಕಾನೂನು ಪ್ರಕ್ರಿಯೆ ಪ್ರಾರಂಭಿಸಿರುವುದು ಸಹಜ ಪ್ರಕ್ರಿಯೆ ಅಲ್ಲ. ಬೆಂಗಳೂರಿನಲ್ಲಿರುವ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ದೆಹಲಿಯಲ್ಲಿರುವ ಕರ್ನಾಟಕದ ಉಸ್ತುವಾರಿ ನೋಡಿಕೊಳ್ಳುವ ಕಾಂಗ್ರೆಸ್ ನಾಯಕರ ಆಗ್ರಹದ ಮೇರೆಗೆ ಈ ಬೆಳವಣಿಗೆ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಪ್ರಕರಣದಲ್ಲಿ ಹುರುಳಿಲ್ಲ ಎನ್ನುವ ಕಾರಣಕ್ಕಾಗಿ ಯಡಿಯೂರಪ್ಪ ಅವರು ಈವರೆಗೂ ಜಾಮೀನನ್ನೂ ಪಡೆದಿಲ್ಲ. ಪ್ರಕರಣ ಗಂಭೀರವಾಗಿದ್ದರೆ ಜಾಮೀನು ಪಡೆಯದೇ ಏಕೆ ಸುಮ್ಮನಿರುತ್ತಿದ್ದರು. ಈಗ ಬದಲಾದ ರಾಜಕೀಯ ಸನ್ನಿವೇಶದಿಂದಾಗಿ ಅವರು ಜಾಮೀನು ಪಡೆಯಲು ಮುಂದಾಗಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಇಷ್ಟಕ್ಕೂ ಈ ಮಹಿಳೆ ನೀಡಿದ ಹಿಂದಿನ 53 ಗಣ್ಯರ ವಿರುದ್ಧದ ದೂರುಗಳನ್ನು ಆಧರಿಸಿ ಇದೇ ರೀತಿ ಬಂಧಿಸಲಾಗಿತ್ತೇ? ಆ ಪ್ರಕರಣಗಳೆಲ್ಲ ಏನಾದವು ಎಂದು ಅವರು ಪ್ರಶ್ನಿಸಿದ್ದಾರೆ.

ದೂರು ನೀಡಿರುವ ಮಹಿಳೆ ಇತ್ತೀಚೆಗೆ ನಿಧನರಾಗಿದ್ದಾರೆ. ಹಾಗಿದ್ದಾಗಲೂ ಈಗ ಅವರ ಪುತ್ರನ ಮೂಲಕ ಮತ್ತೆ ನ್ಯಾಯಾಲಯದ ಮೆಟ್ಟಿಲು ಹತ್ತಿ ಯಡಿಯೂರಪ್ಪ ಅವರನ್ನು ಬಂಧಿಸಿ ವಿಚಾರಣೆ ನಡೆಸಲು ಪೊಲೀಸರಿಗೆ ನಿರ್ದೇಶನ ನೀಡುವಂತೆ ಅರ್ಜಿ ಸಲ್ಲಿಸಿದ್ದು ಯಾಕೆ ಎಂದೂ ಅವರು ಕೇಳಿದ್ದಾರೆ.

ಏನಿದು ಪ್ರಕರಣ?:

ತಮ್ಮ ಪುತ್ರಿ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣದಲ್ಲಿ ತನಿಖೆ ಸೂಕ್ತ ನಡೆಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸುವಂತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ನೆರವು ಕೋರಲು ಸಂತ್ರಸ್ತೆ ತಾಯಿ ನಿರ್ಧರಿಸಿದ್ದರು. ಅಂತೆಯೇ ಫೆ.2 ರಂದು ಡಾಲರ್ಸ್‌ ಕಾಲೋನಿಯಲ್ಲಿರುವ ಯಡಿಯೂರಪ್ಪನವರ ಮನೆಗೆ ತಮ್ಮ 17 ವರ್ಷದ ಮಗಳ ಜತೆ ತಾಯಿ ತೆರಳಿದ್ದರು. ಆಗ ಬಾಲಕಿ ಜತೆ ಅನುಚಿತವಾಗಿ ಯಡಿಯೂರಪ್ಪನವರು ವರ್ತಿಸಿದ್ದಾರೆ ಎಂದು ದೂರಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸದಾಶಿವನಗರ ಠಾಣೆಗೆ ಮಾ.14 ರಂದು ಸಂತ್ರಸ್ತೆ ತಾಯಿ ದೂರು ನೀಡಿದ್ದರು. ಅದರನ್ವಯ ಯಡಿಯೂರಪ್ಪನವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದ್ದರು. ಈ ಪ್ರಕರಣದ ಸಂಬಂಧ ಸಿಐಡಿ ತನಿಖೆಗೆ ಡಿಜಿಪಿ ಅಲೋಕ್ ಮೋಹನ್ ಆದೇಶಿಸಿದ್ದರು.

ಇನ್ನೂ 53 ಮಂದಿ ವಿರುದ್ಧ ದೂರು ನೀಡಿದ್ದ ಸಂತ್ರಸ್ತೆ ತಾಯಿ!ಯಡಿಯೂರಪ್ಪ ಅವರಷ್ಟೇ ಅಲ್ಲ. ಈ ಹಿಂದೆ ಕೆಲ ಹಿರಿಯ ರಾಜಕಾರಣಿ ಹಾಗೂ ಐಪಿಎಸ್ ಅಧಿಕಾರಿ ಸೇರಿ 53 ಮಂದಿ ವಿರುದ್ಧ ಸಂತ್ರಸ್ತೆ ತಾಯಿ ದೂರು ನೀಡಿದ್ದರು. ಹೀಗೆ ಗಣ್ಯರ ವಿರುದ್ಧ ಪದೇ ಪದೇ ಆರೋಪ ಹೊರಿಸುವುದು ಸಂತ್ರಸ್ತೆ ತಾಯಿಗೆ ಹೊಸದೇನಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ