ಬಳ್ಳಾರಿ: ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಬುಡಾ) ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಬಿಜೆಪಿಯ ಕಾಯಕರ್ತರು ನಗರದ ಗಡಗಿಚನ್ನಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕಾ ಮಾತನಾಡಿ, ಬುಡಾದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ಶಾಸಕರೇ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಹೀಗಾಗಿ ಪ್ರಕರಣದ ತನಿಖೆ ಆರಂಭಿಸಬೇಕು. ಬುಡಾ ಅವ್ಯವಹಾರದಿಂದಾಗಿ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸುವಂತಾಗಿದ್ದು ಜಿಲ್ಲಾಧಿಕಾರಿ ಮಧ್ಯಪ್ರವೇಶ ಮಾಡಿ ಜನರ ಅನುಕೂಲಕ್ಕಾಗಿ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಗಡಗಿಚನ್ನಪ್ಪ ವೃತ್ತದಲ್ಲಿ ಕೆಲ ಹೊತ್ತು ಮಾನವ ಸರಪಳಿ ನಿರ್ಮಿಸಿದ ಬಿಜೆಪಿ ಕಾರ್ಯಕರ್ತರು ಬುಡಾ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.ಮಹಾನಗರ ಪಾಲಿಕೆ ಸದಸ್ಯರಾದ ಶ್ರೀನಿವಾಸ ಮೋತ್ಕರ್, ಹನುಮಂತಪ್ಪ, ಗಣಪಾಲ್ ಐನಾಥ ರೆಡ್ಡಿ, ಸುಗುಣ, ಪುಷ್ಪಾಚಂದ್ರಶೇಖರ್, ಸಾಧನಾ ಹಿರೇಮಠ, ವಿಜಯಲಕ್ಷ್ಮಿ ಸೇರಿದಂತೆ ಪಕ್ಷದ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅವ್ಯವಹಾರ ನಡೆದಿದ್ದು ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಬಳ್ಳಾರಿಯ ಗಡಗಿಚನ್ನಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.