ಅಂಬೇಡ್ಕರ್ ಓದು ಕಾರ್ಯಕ್ರಮದಲ್ಲಿ ಮೆಹಬೂಬಹುಸೇನ
ಕೊಪ್ಪಳಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್ ಜಾಗತಿಕ ಮಹಾಪುರುಷರಾಗಿದ್ದು, ಸಮಾಜದಲ್ಲಿ ಬೇರೂರಿದ್ದ ಜಾತಿ ಪದ್ಧತಿ, ಮೌಢ್ಯಗಳ ವಿರುದ್ಧ ಹೋರಾಡಿದವರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ಮೆಹಬೂಬಹುಸೇನ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 2023-24 ನೇ ಸಾಲಿನ ವಿಶೇಷ ಘಟಕ ಯೋಜನೆಯಡಿಯಲ್ಲಿ ಕನಕಗಿರಿಯ ಶ್ರೀಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ಸೋಮವಾರ ನಡೆದ ಅಂಬೇಡ್ಕರ್ ಓದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ತಾವು ನೋವು ನುಂಗಿ ಸಮಾಜಕ್ಕೆ ಅಮೃತ ಉಣಬಡಿಸಿದ ಕೀರ್ತಿ ಈ ಮಹಾನ್ ಚೇತನರಿಗೆ ಸಲ್ಲುತ್ತದೆ. ವ್ಯಾಪಾರಿಗಳಿಗೆ ಸಮಯ ಅಂದರೆ ಹಣವಾದರೆ ಅಂಬೇಡ್ಕರ್ ಅವರಿಗೆ ಸಮಯ ಎಂಬುದು ಜ್ಞಾನವಾಗಿತ್ತು. ಅಧ್ಯಯನಕ್ಕೆ ಬಹಳ ಒತ್ತು ನೀಡಿದ್ದರು. ಮಹರ್ಷಿ ವಾಲ್ಮೀಕಿ, ಭಕ್ತ ಕನಕದಾಸ, ಬಸವೇಶ್ವರ, ಅಂಬೇಡ್ಕರ್ ಸೇರಿದಂತೆ ಇತರೆ ಮಹಾನ್ ವ್ಯಕ್ತಿಗಳನ್ನು ಆಯಾ ಜಾತಿಗೆ ಸೀಮಿತಗೊಳಿಸುವುದು ಸರಿಯಲ್ಲ. ಅವರ ವಿಚಾರಧಾರೆಗಳು ಸಾರ್ವಕಾಲಿಕ ಸತ್ಯವಾಗಿವೆ. ವಿದ್ಯಾರ್ಥಿ ಸಮುದಾಯ ಪುಸ್ತಕ, ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳಸಿಕೊಳ್ಳಬೇಕೆಂದು ತಿಳಿಸಿದರು.
ಕೊಪ್ಪಳ ವಿಶ್ವ ವಿದ್ಯಾಲಯದ ಉಪನ್ಯಾಸಕಿ ಡಾ.ಗೀತಾ ಪಾಟೀಲ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಿ ಆರ್. ಅಂಬೇಡ್ಕರ್ ಬರೀ ದಲಿತರ ಪರವಾಗಿದ್ದರು ಎಂಬ ಗ್ರಹಿಕೆ ತಪ್ಪಿನಿಂದ ಕೂಡಿದೆ, ಅವರು ಎಲ್ಲ ವರ್ಗದ ಹಿತ ಚಿಂತಕರಾಗಿದ್ದರು ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು. ಸಾಮಾಜಿಕ ನ್ಯಾಯ ಎಂಬುದು ಭೀಕ್ಷೆ ಅಲ್ಲ, ಅದೊಂದು ಹಕ್ಕು ಎಂದು ಅಂಬೇಡ್ಕರ್ ಪ್ರತಿಪಾದಿಸಿದ್ದರು, ಶತ ಶತಮಾನಗಳಿಂದಲೂ ಶೋಷಣೆಗೆ ಒಳಗಾಗಿದ್ದ ಮಹಿಳೆಯರು ಹಾಗೂ ತುಳಿತಕ್ಕೆ ಒಳಗಾಗಿದ್ದ ಸಮುದಾಯದವರಿಗೆ ನ್ಯಾಯ ಒದಗಿಸಲು ಶ್ರಮಿಸಿದರು. ಮಹಿಳಾ ಸಮಾನತೆ ಹಾಗೂ ಸ್ವಾತಂತ್ರ್ಯರಕ್ಕೆ ಒತ್ತು ನೀಡಿದ್ದ ಅವರು, ದೇವದಾಸಿ ಪದ್ಧತಿ ಸೇರಿದಂತೆ ಇತರೆ ಅನಿಷ್ಠ ಪದ್ಧತಿಗಳ ನಿರ್ಮೂಲನೆಗೆ ಹೋರಾಡಿದರು.ಶಿಕ್ಷಣ, ಸಂಘಟನೆ ಹಾಗೂ ಹೋರಾಟ ಎಂಬ ತ್ರಿವಳಿ ಸೂತ್ರಗಳ ಮೂಲಕ ಸರ್ವರಿಗೂ ನ್ಯಾಯ ಒದಗಿಸಲು ಶ್ರಮಿಸಿದರು. ಶಿಕ್ಷಣ, ಉದ್ಯೋಗ, ಕೈಗಾರಿಕೆ ಕ್ಷೇತ್ರದಲ್ಲಿ ಮುಂದೆ ಬರಬೇಕಾದರೆ ಮೊದಲು ಶಿಕ್ಷಣವಂತರಾಗಬೇಕೆಂದು ತಿಳಿಸಿದರು.ಕಾಲೇಜಿನ ಪ್ರಭಾರ ಪ್ರಾಂಶುಪಾಲ ಬಜರಂಗಬಲಿ ಗೌಡಪ್ಪನವರ್ ಮಾತನಾಡಿ, ಜಾತಿ ಹಾಗೂ ವರ್ಗ ರಹಿತ ಸಮಾಜ ನಿರ್ಮಾಣದಲ್ಲಿ ಕ್ರಾಂತಿಕಾರಿ ಬಸವಣ್ಣ, ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಕೊಡುಗೆ ಅಪಾರವಾಗಿದೆ. ಸಮಾಜದಲ್ಲಿ ಸಮಾನತೆ ನೆಲೆಯೂರಲು ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಹಕ್ಕು ನೀಡಿದ್ದಾರೆ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ ಮಾತನಾಡಿ, ಡಾ.ಅಂಬೇಡ್ಕರ್ ಬದುಕು, ಬರಹಗಳ ಅಧ್ಯಯನ ಹಾಗೂ ಅರಿವು ಮೂಡಿಸಲು ಪ್ರತಿ ತಾಲೂಕಿನಲ್ಲಿ ಅಂಬೇಡ್ಕರ್ ಓದು ಕಾರ್ಯಕ್ರಮ ನಡೆಸಲಾಗುತ್ತಿದೆ. ಪುಸ್ತಕಗಳನ್ನು ಓದುವ ಹವ್ಯಾಸ ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಎಚ್. ಸಿ. ಆಶಿಕಾ, ಪ್ರಾಧ್ಯಾಪಕ ಮರ್ವಿನ್ ಡಿಸೋಜ್, ವೀರೇಶ ಕೆಂಗಲ್ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿಮಿತ್ತ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ನಾಗರಾಜ ಗದ್ದಿ (ಪ್ರಥಮ), ಅಂಬಿಕಾ( ದ್ವಿತೀಯ) ಹಾಗೂ ಶಶಿಕಲಾ (ತೃತೀಯ), ವಲೀಮಾ ಹಾಗೂ ವೀಣಾ ಅವರಿಗೆ ಇದೇ ಸಮಯದಲ್ಲಿ ಬಹುಮಾನ ವಿತರಿಸಲಾಯಿತು.