ಗ್ರಾಮೀಣ ಅಂಚೆ ನೌಕರರಿಗೆ ಪಿಂಚಣಿ ಸೌಲಭ್ಯ ಕಲ್ಪಿಸಿ

KannadaprabhaNewsNetwork | Published : Dec 13, 2023 1:00 AM

ಸಾರಾಂಶ

ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಅಂಚೆ ನೌಕರರಿಗೆ ನೀಡಬೇಕಾದ ಸೌಲಭ್ಯಗಳನ್ನು ನೀಡುತ್ತಿಲ್ಲ. 7ನೇ ವೇತನದ ಆಯೋಗದ ಸೌಕರ್ಯಗಳನ್ನು ಅನೇಕ ಹೋರಾಟಗಳ ಮೂಲಕ ಪಡೆದುಕೊಳ್ಳಲಾಗಿದೆ. ನೌಕರರ ಹಿತ ಕಾಯುವ ಯಾವುದೇ ಕಾಳಜಿ ಕಂಡುಬಂದಿಲ್ಲ. ಹೀಗಾಗಿ ಅನಿವಾರ್ಯವಾಗಿ ಅಂಚೆ ನೌಕರರು ಪ್ರತಿಭಟನೆಗೆ ಮುಂದಾಗುವುದು ಅನಿವಾರ್ಯವಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಗ್ರಾಮೀಣ ಅಂಚೆ ನೌಕರರಿಗೆ ಪಿಂಚಣಿ ಸೌಲಭ್ಯ ಸೇರಿದಂತೆ ವಿವಿಧ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿ ರಾಷ್ಟ್ರೀಯ ಗ್ರಾಮೀಣ ಅಂಚೆ ನೌಕರರ ಸಂಘದಿಂದ ನಗರದ ಪ್ರಧಾನ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಅಂಚೆ ನೌಕರರಿಗೆ ನೀಡಬೇಕಾದ ಸೌಲಭ್ಯಗಳನ್ನು ನೀಡುತ್ತಿಲ್ಲ. 7ನೇ ವೇತನದ ಆಯೋಗದ ಸೌಕರ್ಯಗಳನ್ನು ಅನೇಕ ಹೋರಾಟಗಳ ಮೂಲಕ ಪಡೆದುಕೊಳ್ಳಲಾಗಿದೆ. ನೌಕರರ ಹಿತ ಕಾಯುವ ಯಾವುದೇ ಕಾಳಜಿ ಕಂಡುಬಂದಿಲ್ಲ. ಹೀಗಾಗಿ ಅನಿವಾರ್ಯವಾಗಿ ಅಂಚೆ ನೌಕರರು ಪ್ರತಿಭಟನೆಗೆ ಮುಂದಾಗುವುದು ಅನಿವಾರ್ಯವಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಎಂಟು ಗಂಟೆಗೂ ಹೆಚ್ಚು ಕಾಲ ಸೇವೆ ನೀಡುತ್ತಿರುವ ಅಂಚೆ ನೌಕರರಿಗೆ ಪಿಂಚಣಿ ಸೌಕರ್ಯ ಕಲ್ಪಿಸಲಾಗಿಲ್ಲ. ಸೇವಾ ಹಿರಿತನದ ಆಧಾರದ ಮೇಲೆ ನೌಕರರಿಗೆ ವಿಶೇಷ ಇಂಕ್ರಿಮೆಂಟ್ ನೀಡಬೇಕು ಎಂಬ ಬೇಡಿಕೆಗೆ ಸ್ಪಂದಿಸುತ್ತಿಲ್ಲ.

ಗ್ರಾಚ್ಯುಟಿ ಮೇಲಿನ ಗರಿಷ್ಠ ಮೊತ್ತವಾದ ₹1.5 ಲಕ್ಷಗಳ ಮಿತಿಯನ್ನು ತೆಗೆದು ಹಾಕಿ ಕಮಲೇಶಚಂದ್ರ ಸಮಿತಿ ಶಿಫಾರಸು ಮಾಡಿದಂತೆ ಗರಿಷ್ಠ ₹5 ಲಕ್ಷಗಳ ವರೆಗೆ ಮೊತ್ತವನ್ನು ನೀಡಬೇಕು ಎಂದು ಒತ್ತಾಯಿಸುತ್ತಾ ಬರಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಕ್ರಮಗಳಾಗಿಲ್ಲ ಎಂದು ದೂರಿದರು.

ಅಂಚೆ ನೌಕರರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ವೈದ್ಯಕೀಯ ಸೌಲಭ್ಯಗಳು ಒದಗಿಸಬೇಕು. 30 ದಿನಗಳ ವೇತನ ಸಹಿತ ರಜೆ ನೀಡಬೇಕು. 7ನೇ ವೇತನದ ಶಿಫಾರಸ್ಸಿನಂತೆ 180 ದಿನಗಳವರೆಗೆ ರಜೆ ಉಳಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು.

ಗುಂಪು ವಿಮೆಯ ಮೊತ್ತವನ್ನು ₹5 ಲಕ್ಷಕ್ಕೆ ಹೆಚ್ಚಿಸಬೇಕು. ಇಲಾಖೆಯ ಯೋಜನೆಗಳ ಅನುಷ್ಠಾನಕ್ಕಾಗಿ ನಿಗದಿಗೊಳಿಸಿರುವ ವಾರ್ಷಿಕ ಗುರಿಯಿಂದ ನೌಕರರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಗುರಿ ಮೀರಿಸುವ ವಿಚಾರದಲ್ಲಿ ನೌಕರರಿಗೆ ನೀಡುವ ಅನಗತ್ಯ ಕಿರುಕುಳವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಅಂಚೆ ನೌಕರರ ಸಂಘದ ಜಿಲ್ಲಾ ಪ್ರಮುಖರಾದ ರಾಮಮೂರ್ತಿ, ಮಲ್ಲಿಕಾರ್ಜುನ, ಎಚ್.ಎಂ. ವೀರಭದ್ರಯ್ಯ, ಕೆ. ಎರ್ರಿಸ್ವಾಮಿ, ಎ.ಕೆ. ಹುಲುಗಣ್ಣ, ಉಮಾದೇವಿ, ನಾಗರತ್ನ ದೇವಿಗಿರಿ ಸೇರಿದಂತೆ ಸಂಘದ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Share this article