- ‘ಅಟಲ್ ಭೂಜಲ ಯೋಜನೆ’ಗೆ ಗ್ರಾಮಗಳ ಸೇರ್ಪಡೆಗೆ ಪ್ರಸ್ತಾವನೆ
- ಅಟಲ್ ಯೋಜನೆಯಿಂದ ಅಂತರ್ಜಲ ಮರುಪೂರಣಕ್ಕೆ ಭಾರಿ ಹಣ----- ರಾಜ್ಯದ 142 ಗ್ರಾ.ಪಂ.ನಲ್ಲಿ ನೀರಿನ ಅತಿ ಬಳಕೆ
- 170 ಗ್ರಾಪಂನಲ್ಲಿ ಪರಿಸ್ಥಿತಿ ಕ್ಲಿಷ್ಟಕರ, 267 ರಲ್ಲಿ ಅರೆ ಕ್ಲಿಷ್ಟಕರ- ಕೇಂದ್ರ, ರಾಜ್ಯ ನಡೆಸಿದ ಸರ್ವೇಯಲ್ಲಿ ಬಹಿರಂಗ
--** ಸಚಿವರ ಕೋಟ್...**ರಾಜ್ಯದ 579 ಗ್ರಾಮ ಪಂಚಾಯ್ತಿಯಲ್ಲಿ ಅಂತರ್ಜಲ ಮಟ್ಟ ಗಣನೀಯವಾಗಿ ಕಡಿಮೆಯಾಗಿರುವುದು ಕಂಡುಬಂದಿದೆ. ಆದ್ದರಿಂದ ಅಂತರ್ಜಲ ಸಂರಕ್ಷಣೆ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಲು ‘ಅಟಲ್ ಭೂಜಲ್ ಯೋಜನೆ’ಗೆ ಸೇರಿಸುವಂತೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಒಪ್ಪಿಗೆ ದೊರೆಯುವ ಭರವಸೆಯಿದೆ.-ಎನ್.ಎಸ್. ಬೋಸರಾಜು, ಸಣ್ಣ ನೀರಾವರಿ ಸಚಿವರು
--*ಸಿದ್ದು ಚಿಕ್ಕಬಳ್ಳೇಕೆರೆಕನ್ನಡಪ್ರಭ ವಾರ್ತೆ ಬೆಂಗಳೂರು
ಭೀಕರ ಬರರಿಂದ ರಾಜ್ಯದ 579 ಗ್ರಾಮ ಪಂಚಾಯ್ತಿಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು ಇವುಗಳನ್ನು ‘ಅಟಲ್ ಭೂಜಲ ಯೋಜನೆ’ಗೆ ಸೇರ್ಪಡೆ ಮಾಡಿಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರವು ಪ್ರಸ್ತಾವನೆ ಸಲ್ಲಿಸಿದೆ.ಅಂತರ್ಜಲ ನಿಯಮ (ಜಿಡಬ್ಲ್ಯೂಆರ್)ಗಳನ್ವಯ ಕೇಂದ್ರ ಅಂತರ್ಜಲ ಮಂಡಳಿ(ಸಿಜಿಡಬ್ಲ್ಯೂಬಿ) ಮತ್ತು ರಾಜ್ಯ ಅಂತರ್ಜಲ ನಿರ್ದೇಶನಾಲಯದಿಂದ ನಡೆಸಿದ ಸರ್ವೆಯಲ್ಲಿ ಈ ಸಂಗತಿ ಬಹಿರಂಗವಾಗಿದ್ದು 142 ಗ್ರಾಮ ಪಂಚಾಯ್ತಿಗಳಲ್ಲಿ ಅತಿಯಾದ ನೀರಿನ ಅತಿ ಬಳಕೆ ಮಾಡಲಾಗಿದೆ. 170 ಗ್ರಾಪಂಗಳಲ್ಲಿ ಪರಿಸ್ಥಿತಿ ಕ್ಲಿಷ್ಟಕರವಾಗಿದ್ದು, 267 ಗ್ರಾಪಂನಲ್ಲಿ ಅರೆ ಕ್ಲಿಷ್ಟಕರ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸರ್ವೇ ಬಹಿರಂಗಪಡಿಸಿದೆ.ಈಗಾಗಲೇ ಅಂತರ್ಜಲಮಟ್ಟ ಕಡಿಮೆ ಇರುವ ರಾಜ್ಯದ 14 ಜಿಲ್ಲೆಯ 1199 ತಾಲೂಕುಗಳು ಅಟಲ್ ಭೂಜಲ ಯೋಜನೆಗೆ ಸೇರ್ಪಡೆಯಾಗಿದ್ದು ಹೆಚ್ಚುವರಿಯಾಗಿ ಈ 579 ತಾಲೂಕುಗಳನ್ನೂ ಪರಿಗಣಿಸಬೇಕು ಎಂದು ರಾಜ್ಯ ಕೋರಿದೆ. ಯೋಜನೆಗೆ ಸೇರ್ಪಡೆಯಾದರೆ ವಿಶ್ವಬ್ಯಾಂಕ್ ಮತ್ತು ಕೇಂದ್ರ ಸರ್ಕಾರದಿಂದ ಜಲ ಮರುಪೂರಣ ಕಾರ್ಯಗಳಿಗೆ ನೂರಾರು ಕೋಟಿ ರು. ಅನುದಾನ ಸಿಗಲಿದೆ.ಎಲ್ಲೆಲ್ಲಿ ? ಯಾವ್ಯಾವ ಪರಿಸ್ಥಿತಿ?:ಬೆಳಗಾವಿ ಜಿಲ್ಲೆಯ ಬೈಲಹೊಂಗಲದ 34 ಗ್ರಾ.ಪಂ., ಚಾಮರಾಜನಗರ ಕಸಬಾ ತಾಲೂಕಿನ 43, ಚಿಕ್ಕಮಗಳೂರಿನ ಅಜ್ಜಂಪುರದ 19, ರಾಮನಗರದ ಮಾಗಡಿಯ 32 ಮತ್ತು ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ 14 ಸೇರಿದಂತೆ ಒಟ್ಟಾರೆ 142 ಗ್ರಾಮ ಪಂಚಾಯ್ತಿಗಳಲ್ಲಿ ಅಂತರ್ಜಲ ಅತಿ ಬಳಕೆಯಾಗಿರುವುದು ಕಂಡು ಬಂದಿದೆ. ಇಲ್ಲಿ ಅಂತರ್ಜಲ ಬಳಕೆಯು ವಾರ್ಷಿಕ ಮರುಪೂರಣದ ಶೇ.100 ಕ್ಕಿಂತ ಹೆಚ್ಚಾಗಿದೆ.ಹಾಸನದ ಚನ್ನರಾಯಪಟ್ಟಣದ 41 ಗ್ರಾಮ ಪಂಚಾಯ್ತಿ, ದಾವಣಗೆರೆ ಕಸಬಾ ತಾಲೂಕಿನ 40, ಕೊಪ್ಪಳದ ಕುಕುನೂರಿನ 15, ವಿಜಯಪುರದ ನಿಡಗುಂದಿಯ 11, ಹಾವೇರಿಯ ರಟ್ಟೇಹಳ್ಳಿಯ 19, ಬೆಳಗಾವಿಯ ಸವದತ್ತಿಯ 32 ಮತ್ತು ಚಾಮರಾಜನಗರ ಜಿಲ್ಲೆಯ ಯಳಂದೂರಿನ 12 ಗ್ರಾಮ ಪಂಚಾಯ್ತಿಗಳಲ್ಲಿ ಪರಿಸ್ಥಿತಿ ಕ್ಲಿಷ್ಟಕರವಾಗಿದೆ. ಅಂತರ್ಜಲ ಬಳಕೆಯ ಪ್ರಮಾಣ ಇಲ್ಲಿ ಶೇ.90 ರಿಂದ 100 ರಷ್ಟಿದೆ.ಬೆಳಗಾವಿಯ ಗೋಕಾಕದ 37 ಗ್ರಾಮ ಪಂಚಾಯ್ತಿ, ವಿಜಯಪುರದ ಬಸವನ ಬಾಗೇವಾಡಿಯ 15, ಚಡಚಣದ 15, ಕೊಲ್ಹಾರ 10, ತಿಕೋಟ 14, ರಾಮನಗರದ ಚನ್ನಪಟ್ಟಣದ 32, ಯಾದಗಿರಿ ಜಿಲ್ಲೆಯ ಗುರುಮಿಠಕಲ್‌ನ 18, ಯಾದಗಿರಿ ಕಸಬಾ ತಾಲೂಕಿನ 22, ಕೊಪ್ಪಳದ ಕನಕಗಿರಿಯ 11, ಯಲಬುರ್ಗಾದ 22, ರಾಯಚೂರಿನ ಸಿರಿವಾರದ 13, ತುಮಕೂರಿನ ಪಾವಗಡದ 34 ಮತ್ತು ವಿಜಯನಗರ ಜಿಲ್ಲೆಯ ಹಡಗಲಿಯ 26 ಸೇರಿದಂತೆ ಒಟ್ಟಾರೆ 267 ಗ್ರಾಮ ಪಂಚಾಯ್ತಿಗಳಲ್ಲಿ ಅರೆ ಕ್ಲಿಷ್ಟಕರ ಪರಿಸ್ಥಿತಿ ಇದೆ. ಇಲ್ಲಿ ಅಂತರ್ಜಲ ಬಳಕೆ ಪ್ರಮಾಣ ಶೇ.70 ರಿಂದ 90 ರಷ್ಟಿದೆ ಎಂದು ಸರ್ವೆ ಬೊಟ್ಟು ಮಾಡಿದೆ.
ಬಾಕ್ಸ್....
ಏನಿದು ಅಟಲ್ ಭೂಜಲ ಯೋಜನೆ ?ಕೇಂದ್ರ ಜಲ ಶಕ್ತಿ ಸಚಿವಾಲಯವು ಅಟಲ್ ಭೂಜಲ ಯೋಜನೆ ಜಾರಿಗೆ ತಂದಿದ್ದು ಗುಜರಾತ್, ಹರ್ಯಾಣ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ನೀರಿನ ಅಭಾವ ಇರುವ ಪ್ರದೇಶಗಳಲ್ಲಿ ಅಂತರ್ಜಲ ವೃದ್ಧಿಸಲು ಕೇಂದ್ರ ಸರ್ಕಾರ ಮತ್ತು ವಿಶ್ವಬ್ಯಾಂಕ್ ಹಣಕಾಸು ನೆರವು ನೀಡಲಿವೆ. ರಾಜ್ಯದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯು ಸಮುದಾಯದ ಸಹಭಾಗಿತ್ವದಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಅಂತರ್ಜಲ ವೃದ್ಧಿಗೊಳಿಸಲು ತುಂತುರು ಮತ್ತು ಹನಿ ನೀರಾವರಿ ಪದ್ಧತಿಗೆ ಪ್ರೋತ್ಸಾಹ, ಕೃಷಿ ಹೊಂಡ, ಇಂಗು ಗುಂಡಿ, ಗೋಕಟ್ಟೆ, ಚೆಕ್‌ಡ್ಯಾಂ ನಿರ್ಮಾಣ ಮತ್ತಿತರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು.