ಬುದ್ಧ-ಬಸವ-ಅಂಬೇಡ್ಕರ್ ವಾದಿ ಸಿದ್ದರಾಮಯ್ಯನವರು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ ಮೇರು ನಾಯಕರು. 2013ರಲ್ಲಿ ಪ್ರಥಮ ಬಾರಿಗೆ ಮುಖ್ಯಮಂತ್ರಿಯಾಗಿ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದೂ ಬಸವ ಜಯಂತಿ ದಿನದಂದೇ. ರೈತರ ಸಾಲಮನ್ನಾ, ಅನ್ನಭಾಗ್ಯ, ಕ್ಷೀರಭಾಗ್ಯ... ಮೊದಲಾದ ಹಲವು ಯಶಸ್ವಿ ಯೋಜನೆಗಳ ಮೂಲಕ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಸರ್ವಜನ ಹಿತಕ್ಕಾಗಿ ಶ್ರಮಿಸಿದ ಸಿದ್ದರಾಮಯ್ಯ ಅವರು, ನಮಗೆ ಮಾರ್ಗದರ್ಶಕರಾಗಿ ನೀಡಿದ ಸಲಹೆಗಳು ಅಮೂಲ್ಯ.
ಬಡವರು, ರೈತರು, ಕಾರ್ಮಿಕರು, ಮಹಿಳೆಯರು, ಹಿಂದುಳಿದವರು, ನಿರ್ಗತಿಕರು, ಅಲ್ಪಸಂಖ್ಯಾತರು ಹಾಗೂ ಸಮಾಜದ ಎಲ್ಲ ವರ್ಗಗಳ ಜನರ ಅಭಿವೃದ್ಧಿಗಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದ ಮತ್ತು ಪಕ್ಷ ಘೋಷಿಸಿದ ಪಂಚ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿ ಮಾಡಿ ಬಡತನ ನಿರ್ಮೂಲನೆಯ ಜೊತೆಗೆ ರಾಜ್ಯವನ್ನು ಪ್ರಗತಿಯ ಪಥದಲ್ಲಿ ತೆಗೆದುಕೊಂಡು ಹೋದ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ.
ವಿಶ್ವಗುರು ಬಸವಣ್ಣ ಅವರನ್ನು ಕರುನಾಡ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡುವಂತೆ ನಾವು ನಿಯೋಗ ತೆರಳಿ ಮನವಿ ಮಾಡಿದಾಗ, ಕೂಡಲೇ ಅದಕ್ಕೆ ಸಮ್ಮತಿಸಿ ಅಧಿಕೃತ ಘೋಷಣೆ ಮಾಡಿದ ಸಿದ್ದರಾಮಯ್ಯ ಅವರು, ಬಸವಾದಿ ಶರಣರ ಪುಣ್ಯಭೂಮಿ ಬಸವಕಲ್ಯಾಣದಲ್ಲಿ ಅತ್ಯಾಧುನಿಕ ಅನುಭವ ಮಂಟಪ ನಿರ್ಮಾಣಕ್ಕಾಗಿ ಕಳೆದ 3 ವರ್ಷಗಳಲ್ಲಿ 280 ಕೋಟಿ ರೂ.ಬಿಡುಗಡೆ ಮಾಡುವ ಮೂಲಕ ತಮ್ಮ ಬಸವಭಕ್ತಿ ಮೆರೆದಿದ್ದಾರೆ. ಜೊತೆಗೆ, ಚುನಾವಣಾ ಪೂರ್ವದಲ್ಲಿ ಕೊಟ್ಟ ಮಾತಿನಂತೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 5,000 ಕೋಟಿ ರೂ.ಬಜೆಟ್ ಅನುದಾನ ನೀಡಿದ ಸಿದ್ದರಾಮಯ್ಯನವರಿಗೆ ಇಡೀ ಕಲ್ಯಾಣ ಕರ್ನಾಟಕ ಋಣಿಯಾಗಿದೆ.2013ಕ್ಕೆ ಮುನ್ನ ಪ್ರಬಲ ವಿರೋಧ ಪಕ್ಷದ ನಾಯಕರಾಗಿ, ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿದ ಅವರ ದಿಟ್ಟತನ ಎಲ್ಲರಿಗೂ ಸ್ಫೂರ್ತಿಯಾಗಿತ್ತು. ವಿಧಾನಸಭೆಯಲ್ಲಿ ಸಿದ್ದರಾಮಯ್ಯನವರನ್ನು ಕೆಣಕಿದವರು ಬಹಳ ಕಡಿಮೆ. ಅವರು ಮಾಹಿತಿಯ ಗಣಿಯಾಗಿದ್ದರು. ಅವರ ನೆನಪಿನ ಶಕ್ತಿ ಅಗಾಧ. ಇದು ಪ್ರತಿಪಕ್ಷದವರನ್ನೇ ಪೇಚಿಗೆ ಸಿಲುಕಿಸುತ್ತಿತ್ತು.ಸುದೀರ್ಘ ಸಮಯ ಮುಖ್ಯಮಂತ್ರಿ ಹುದ್ದೆಯಲ್ಲಿ ಪ್ರಾಮಾಣಿಕವಾಗಿ, ದಕ್ಷತೆಯಿಂದ ಕಾರ್ಯ ನಿರ್ವಹಿಸಿ ಕರುನಾಡ ಜನರ ಮನ ಗೆದ್ದ ಜನಪ್ರಿಯ ನಾಯಕ, ಗುರುವಾರ ರಾಜೀನಾಮೆ ಸಲ್ಲಿಸಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಸಲ್ಲಿಸಿದ ಸೇವೆ, ಸಾಮಾಜಿಕ ನ್ಯಾಯಕ್ಕಾಗಿ ಅವರು ನಡೆಸಿದ ಹೋರಾಟ ಹಾಗೂ ಜನಪರ ಆಡಳಿತ ಕರ್ನಾಟಕದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಗಲಿದೆ. ಸಿದ್ದರಾಮಯ್ಯ ಅವರ ಅಮೂಲ್ಯ ಸೇವೆಯನ್ನು ಕರುನಾಡು ಸದಾ ಸ್ಮರಿಸುತ್ತದೆ.