ಬುದ್ಧ, ಬಸವ, ಅಂಬೇಡ್ಕರ್‌ ಸಮಾಜವನ್ನು ಸರಿದಾರಿಗೆ ತರಲು ಮಾರ್ಗದರ್ಶಕರು

KannadaprabhaNewsNetwork |  
Published : May 31, 2026, 01:15 AM IST
1 | Kannada Prabha

ಸಾರಾಂಶ

ಅಸಮತೋಲನ ಸಮಾಜವನ್ನು ಸರಿಪಡಿಸಲು ತತ್ವಾದರ್ಶಗಳು ದಾರದೀಪವಾಗಿವೆ. ಬ್ರಹ್ಮ, ವಿಷ್ಣು, ಮಹೇಶ್ವರರಂತಿರುವ ಈ ಮೂವರು ಯುಗಪುರುಷರಿಂದ ಸಮಾಜಕ್ಕೆ ಅಪರಿಮಿತ ಕೊಡುಗೆ ಸಂದಿದೆ. ಸಮಸಮಾಜದ ಆಶಯ ಈಡೇರಿಸಲು ಇದರಿಂದ ಸಾಧ್ಯವಾಗಿದೆ ಎಂದ ಅವರು, ಪ್ರತಿಯೊಬ್ಬರೂ ಸುಶಿಕ್ಷಿತರಾದಲ್ಲಿ ಸಮಾನತೆ ಬರುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ಬುದ್ಧ, ಬಸವ, ಅಂಬೇಡ್ಕರ್‌ ಅವರು ಸಮಾಜವನ್ನು ಸರಿದಾರಿಗೆ ತರಲು ಮಾರ್ಗದರ್ಶಕರಾಗಿದ್ದಾರೆ ಎಂದು ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ ಹೇಳಿದರು.

ರಮಾಬಾಯಿ ಅಂಬೇಡ್ಕರ್‌ ಸರ್ವೋದಯ ಮಹಿಳಾ ಒಕ್ಕೂಟವು ತನ್ನ 7ನೇ ವಾರ್ಷಿಕೋತ್ಸವ ಅಂಗವಾಗಿ ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬುದ್ಧ, ಬಸವ, ಅಂಬೇಡ್ಕರ್‌ ಜಯಂತಿಯಲ್ಲಿ ಮಾತನಾಡಿದ ಅವರು, ಅಸಮತೋಲನ ಸಮಾಜವನ್ನು ಸರಿಪಡಿಸಲು ತತ್ವಾದರ್ಶಗಳು ದಾರದೀಪವಾಗಿವೆ ಎಂದರು.

ಬ್ರಹ್ಮ, ವಿಷ್ಣು, ಮಹೇಶ್ವರರಂತಿರುವ ಈ ಮೂವರು ಯುಗಪುರುಷರಿಂದ ಸಮಾಜಕ್ಕೆ ಅಪರಿಮಿತ ಕೊಡುಗೆ ಸಂದಿದೆ. ಸಮಸಮಾಜದ ಆಶಯ ಈಡೇರಿಸಲು ಇದರಿಂದ ಸಾಧ್ಯವಾಗಿದೆ ಎಂದ ಅವರು, ಪ್ರತಿಯೊಬ್ಬರೂ ಸುಶಿಕ್ಷಿತರಾದಲ್ಲಿ ಸಮಾನತೆ ಬರುತ್ತದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್‌ ಮಾತನಾಡಿ, ಮಹಾತ್ಮಗಾಂಧೀಜಿ, ಡಾ.ಬಿ.ಆರ್‌. ಅಂಬೇಡ್ಕರ್‌ ಹಾಗೂ ಯೋಗದಿಂದಾಗಿ ಭಾರತವು ವಿಶ್ವಪ್ರಸಿದ್ಧಿಯಾಗಿದೆ. ಅಂಬೇಡ್ಕರ್‌ ಅವರ ಕೇವಲ ಭಾರತವಲ್ಲ, ಇಡೀ ವಿಶ್ವದ ಸ್ವತ್ತಾಗಿದ್ದಾರೆ ಎಂದರು.

ಪ್ರತಿಯೊಂದು ದೇಶವು ಬುದ್ಧ, ಬಸವ, ಅಂಬೇಡ್ಕರ್‌ ಅವರ ತತ್ವ ಪಾಲಿಸಿದರೆ ಯುದ್ಧ ಇಲ್ಲದಂತಾಗುತ್ತದೆ. ಅಮೆರಿಕಾ, ಇಸ್ರೇಲ್‌, ಇರಾನ್‌, ರಷ್ಯಾ, ಉಕ್ರೇನ್‌ ಮತ್ತಿತರ ದೇಶಗಳಿಗೆ ಇನ್ನಾದರೂ ಬುದ್ಧಿ ಬರಲಿ ಎಂದು ಅವರು ಆಶಿಸಿದರು.

ಸಮಾಜ ಸೇವಕ ಅಹಿಂದ ಜವರಪ್ಪ ಮಾತನಾಡಿ, ಅಂಬೇಡ್ಕರ್‌ ಅವರು ಅತ್ಯುತ್ತಮವಾದ ಸಂವಿಧಾನ ಕೊಟ್ಟಿದ್ದರೂ, ಅವರ ವಿಚಾರಧಾರೆಗಳು ವ್ಯಾಪಕವಾಗಿ ಹರಡಿದ್ದರೂ ಇನ್ನೂ ದೌರ್ಜನ್ಯ. ದಬ್ಬಾಳಿಕೆ ನಿಂತಿಲ್ಲ. ಅನ್ಯಾಯವನ್ನು ಪ್ರಶ್ನೆ ಮಾಡದ ಪರಿಸ್ಥಿತಿ ಇದೆ ಎಂದು ವಿಷಾದಿಸಿದರು.

ರಮಾಬಾಯಿ ಅಂಬೇಡ್ಕರ್‌ ಸರ್ವೋದಯ ಮಹಿಳಾ ಒಕ್ಕೂಟವು ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಸಾಂಸ್ಕೃತಿಕ, ಕ್ರೀಡಾ, ಪ್ರತಿಭಾ ಪುರಸ್ಕಾರ ಮತ್ತಿತರ ಚಟುವಟಿಕೆಗಳನ್ನು ನಡೆಸುವುದರ ಜೊತೆಗೆ ಅಂಬೇಡ್ಕರ್‌ ಹಾಗೂ ರಮಾಬಾಯಿ ಅವರ ವಿಚಾರಧಾರೆಗಳನ್ನು ಜನಮನಕ್ಕೆ ತಲುಪಿಸುತ್ತಿದೆ ಎಂದು ಅವರು ಶ್ಲಾಘಿಸಿದರು.

ಸಂವಿಧಾನದ ಪ್ರಕಾರ ನಮ್ಮ ಹಕ್ಕು ಹಾಗೂ ಶಿಕ್ಷಣ ಪಡೆಯಲು ಸಂಘಟಿತ ಹೋರಾಟ ನಡೆಸಬೇಕು ಎಂದು ಅವರು ಕರೆ ನೀಡಿದರು.

ಮಾಜಿ ಮೇಯರ್‌ ಪುರುಷೋತ್ತಮ್‌ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್‌ ಅವರು ಸಮಾನತೆಗಾಗಿ ದೊಡ್ಡ ಕ್ರಾಂತಿಯನ್ನೇ ಮಾಡಿದ್ದಾರೆ. ಪ್ರತಿಯೊಬ್ಬರೂ ಶಿಕ್ಷಣ ಪಡೆಯುವ ಮೂಲಕ ಸ್ವಾಭಿಮಾನಿ ಸತ್ಪ್ರಜೆ ಆಗಬೇಕು. ತನ್ಮೂಲಕ ಹೊಸ ಸಮಾಜ ನಿರ್ಮಾಣ ಮಾಡಬೇಕು ಎಂದರು.

ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳೇ ಕಳೆದರೂ ಇನ್ನೂ ಶ್ರೇಣಿಕೃತ ವ್ಯವಸ್ಥೆ, ಅಸಮಾನತೆ ಇರುವುದು ಪ್ರತಿಯೊಬ್ಬರೂ ತಲೆತಗ್ಗಿಸಬೇಕಾದ ಸಂಗತಿ ಎಂದರು.

ಅಂಬೇಡ್ಕರ್‌ ಅವರ ಸಾಧನೆಗೆ ರಮಾಬಾಯಿ ಅವರು ಕೂಡ ಕಾರಣ. ಇದನ್ನು ಮಹಿಳೆಯರು ಅರ್ಥ ಮಾಡಿಕೊಳ್ಳಬೇಕು. ಎಲ್ಲರಿಗೂ ಶಿಕ್ಷಣ ಹಾಗೂ ಆರೋಗ್ಯ ಸೇವೆ ಉಚಿತವಾಗಿ ಸಿಗಬೇಕು ಎಂದು ಹೇಳಿದರು.

ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಕಾನೂನು ದುರುಪಯೋಗ ತಪ್ಪಿಸುವುದು ಪ್ರತಿಯೊಬ್ಬರ ಹೊಣೆಗಾರಿಕೆ ಆಗಿದೆ. ಈ ಕೆಲಸ ಆಗದಿದ್ದಲ್ಲಿ ದೇಶ ಸರ್ವನಾಶ ಆಗುತ್ತದೆ ಎಂದು ಅವರು ಎಚ್ಚರಿಸಿದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಮಾತನಾಡಿದರು. ರಮಾಬಾಯಿ ಅಂಬೇಡ್ಕರ್ ಸರ್ವೋದಯ ಮಹಿಳಾ ಒಕ್ಕೂಟದ ಅಧ್ಯಕ್ಷೆ ಲೀಲಾವತಿ ಯಾಲಕ್ಕಯ್ಯ ಬುದ್ಧಗೀತೆ ಮತ್ತು ಪ್ರಾರ್ಥನೆ ನೆರವೇರಿಸಿದರು. ಸಂವಿಧಾನ ಪೀಠಿಕೆ ಬೋಧಿಸಿದರು. ಕಾರ್ಯದರ್ಶಿ ಎಂ. ಹೇಮಲತಾ ಸ್ವಾಗತಿಸಿದರು. ಕಮಲಾ, ಶ್ವೇತಾ, ಸುಮತಿ, ಮಹದೇವಮ್ಮ, ಕೋಮಲಾ, ಶಕುಂತಲಾ ಶ್ರೀಧರ್‌, ಭಾಗ್ಯವತಿ ನಾಡಗೀತೆ ಹಾಡಿದರು. ಶ್ವೇತಾ ಅಂಬೇಡ್ಕರ್‌ ಕುರಿತು ಸ್ವರಚಿತ ಕವನ ಓದಿದರು.

ಎಸ್ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಗಳಿಸಿರುವ ಜಿ. ದೀಪ್ತಿ, ಎಂ.ಆರ್. ಹೇಮಂತ್‌, ಚಂದನಾ ಹಾಗೂ ಎಂ. ಭುವನ್‌ ಅವರಿಗೆ ಇದೇ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ನೀಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿ.ಕೆ.ಶಿವಕುಮಾರ್‌ಗೆ ಮುಖ್ಯಮಂತ್ರಿ ಗಾದಿ: ಹರಕೆ ತೀರಿಸಿದ ಅಭಿಮಾನಿ
ನಾಳೆಯಿಂದ ಶಾಲೆ ಆರಂಭ