ಬುದ್ಧನ ತತ್ವಾದರ್ಶಗಳು ನಮ್ಮೆಲ್ಲರಿಗೆ ದಾರಿದೀಪ: ಶಾಸಕ ಲಕ್ಷ್ಮಣ ಸವದಿ

KannadaprabhaNewsNetwork |  
Published : Jul 23, 2024, 12:36 AM IST
ಅಥಣಿ ಪಟ್ಟಣದ ಕನಕ ನಗರದ ಬುದ್ಧ ವಿಹಾರ  ಉದ್ಯಾನವನ ಹಾಗೂ ಭಗವಾನ್ ಬುದ್ಧನ ಮೂರ್ತಿ ಲೋಕಾರ್ಪಣೆಗೊಳಿಸಿ  ಶಾಸಕ ಲಕ್ಷ್ಮಣ ಸವದಿ ಮಾತನಾಡಿದರು. | Kannada Prabha

ಸಾರಾಂಶ

ಬುದ್ಧನ ಶಾಂತಿ ಸಂದೇಶ, ಬಸವಣ್ಣನ ಸಮಾನತೆಯ ಸಂದೇಶ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ಬುದ್ಧನ ಶಾಂತಿ ಸಂದೇಶ, ಬಸವಣ್ಣನ ಸಮಾನತೆಯ ಸಂದೇಶ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಈ ಇಬ್ಬರು ಮಹಾತ್ಮರ ಸಂದೇಶಗಳನ್ನು ಡಾ.ಬಿ.ಆರ್. ಅಂಬೇಡ್ಕರ್ ಅವರು ನಮ್ಮ ಸಂವಿಧಾನದಲ್ಲಿ ಅಳವಡಿಸುವ ಮೂಲಕ ದೇಶಕ್ಕೆ ಶ್ರೇಷ್ಠವಾದ ಗ್ರಂಥವನ್ನು ನೀಡಿದ್ದಾರೆ. ಈ ತ್ರಿಮೂರ್ತಿಗಳು ಹಾಕಿಕೊಟ್ಟ ಮಾರ್ಗದಲ್ಲಿ ನಡೆದಾಗ ನಮ್ಮ ಬದುಕು ಸುಂದರವಾಗುತ್ತದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಪಟ್ಟಣದ ಕನಕ ನಗರದಲ್ಲಿ ಮಹಾತಪಸ್ವಿ ಬುದ್ಧ ವಿಹಾರ ಉದ್ಘಾಟನೆ ಹಾಗೂ ಭಗವಾನ್ ಬುದ್ಧರ ಮೂರ್ತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಗೌತಮ ಬುದ್ಧ ಬೌದ್ದ ಧರ್ಮ ಮೂಲಕ ವಿಶ್ವಕ್ಕೆ ಶಾಂತಿ, ಸಮಾನತೆ, ಜ್ಞಾನ, ಮಾನವೀಯತೆ ಸಂದೇಶ ಸಾರಿದ ಮಹಾಜ್ಞಾನಿ ಆಗಿದ್ದಾರೆ. ಅವರ ಜೀವನ ಸಂದೇಶ ಮುಂದಿನ ಪೀಳಿಗೆಗೆ ನೀಡುವ ಜವಾಬ್ದಾರಿ ನಮ್ಮ ಮೇಲಿದೆ.ಅಂತಹ ಮಹಾನ್‌ ಜ್ಞಾನಿ ಬುದ್ಧನ ಮೂರ್ತಿ ಉದ್ಘಾಟನೆ ಮಾಡುತ್ತಿರುವುದು ನನ್ನ ಸೌಭಾಗ್ಯ ಎಂದ ಅವರು ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ವಿಚಾರಧಾರೆಗಳು ನಮ್ಮೆಲ್ಲರ ಬದುಕಿಗೆ ದಾರಿದೀಪವಾಗಿವೆ ಎಂದು ಹೇಳಿದರು.

ಅಥಣಿ ಮತಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರ ಹೆಚ್ಚಿನ ಅನುದಾನ ನೀಡುತ್ತಿದ್ದು, ಕೊಟ್ಟಲಗಿ ಅಮ್ಮಾಜೇಶ್ವರಿಯತ ನೀರಾವರಿ ಯೋಜನೆ ಕಾಮಗಾರಿ ಈಗಾಗಲೇ ಆರಂಭಗೊಂಡಿದ್ದು, ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಮಕ್ಕಳಿಗೆ ಮತ್ತು ರೈತರ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಕೇಂದ್ರೀಯ ಮಹಾವಿದ್ಯಾಲಯಕ್ಕೆ ಮಂಜೂರಾತಿ ಪಡೆದುಕೊಳ್ಳಲಾಗಿದ್ದು, ಶೀಘ್ರವೇ ಪ್ರವೇಶ ಪ್ರಕ್ರಿಯೆ ಆರಂಭಿಸಿ ತರಗತಿ ಆರಂಭಿಸಲಾಗುವುದು. ಅಥಣಿ ಮತಕ್ಷೇತ್ರದಲ್ಲಿ ಮೂರು ಸರ್ಕಾರಿ ಪ್ರೌಢಶಾಲೆ ಸ್ಥಾಪನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅಥಣಿ ಪಟ್ಟಣದಲ್ಲಿ ಬಡ ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರಿ ಪ್ರೌಢಶಾಲೆ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಬೀದರ್‌ ಬಿಕ್ಕು ಸಂಘದ ಬಂತೆ ವರಜ್ಯೋತಿ ಮಹಾಥೇರೋ ಆಶೀರ್ವಚನ ನೀಡಿ, ಯಾರು ಧ್ಯಾನ ಮಾಡುತ್ತಾರೋ ಅವರು ಬುದ್ಧರಾಗುತ್ತಾರೆ. ಯಾರು ಅಧ್ಯಯನ ಮಾಡುತ್ತಾರೋ ಅವರು ಅಂಬೇಡ್ಕರ್ ಆಗುತ್ತಾರೆ. ಅತ್ಯಂತ ಶಾಂತಿ ಪ್ರಿಯರಾದ ಬುದ್ಧನ ಸಂದೇಶಗಳು ನಮ್ಮೆಲ್ಲರಿಗೆ ಆದರ್ಶವಾಗಿವೆ ಎಂದರು.

ಬುದ್ಧ ವಿಹಾರ ಸೇವಾ ಸಂಘದ ಅಧ್ಯಕ್ಷ ಶಿವಾನಂದ ದೊಡ್ಡಮನಿ ಪ್ರಸ್ತಾಪಿಕವಾಗಿ ಮಾತನಾಡಿದರು.

ಸಮಾರಂಭದಲ್ಲಿ ಮುಖಂಡರಾದ ಅಶೋಕ ಪರಾಂಜಪೆ, ಪುರಸಭಾ ಸದಸ್ಯ ರಾವಸಾಬ ಐಹೊಳೆ, ವಕೀಲರ ಸಂಘದ ಕಾರ್ಯದರ್ಶಿ ಮಿತೇಶ ಪಟ್ಟಣ, ಪುರಸಭೆ ಮುಖ್ಯ ಅಧಿಕಾರಿ ಅಶೋಕ ಗುಡಿಮನಿ, ಮುಖಂಡರಾದ ಶಶಿ ಸಾಲ್ವೆ, ದತ್ತಾ ವಾಸ್ಟರ, ಕಲ್ಲೇಶ ಮಡ್ಡಿ, ಸುಶಾಂತ್ ಪಟ್ಟಣ, ರಮೇಶ ಪಟ್ಟಣ, ಪರಶುರಾಮ ತುಬಚಿ, ಸಂತೋಷ ಸಾವಡಕರ, ರವಿ ಬಂಗಾರಿ, ವೇದಾ ಪಟ್ಟಣ. ಆರತಿ ಶಿವಶರಣ, ರೂಪಾ ಕಾಂಬಳೆ, ಸವಿತಾ ಕಾಂಬಳೆ, ಬುದ್ಧ ವಿಹಾರ ಸೇವಾ ಸಂಘದ ಪದಾಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶಿವಾನಂದ ದೊಡಮನಿ ಸ್ವಾಗತಿಸಿದರು. ಶಿವಾನಂದ ಮೇಲ್ಗಡೆ, ಕೈಲಾಸ ಮದಭಾವಿ ನಿರೂಪಿಸಿದರು. ಪರಶುರಾಮ ಚುಬಚಿ ವಂದಿಸಿದರು.

ಪುರಸಭೆ ಸದಸ್ಯರು ಮತ್ತು ಮುಖ್ಯ ಅಧಿಕಾರಿ ಸೇರಿ ಇಲ್ಲಿನ ಬುದ್ಧ ವಿಹಾರದ ಅಭಿವೃದ್ಧಿಗಾಗಿ ವಿಶೇಷ ಅನುದಾನ ಒದಗಿಸಬೇಕು. ನಾನೂ ಸಹ ಸರ್ಕಾರದಿಂದ ಹೆಚ್ಚಿನ ಅನುದಾನ ಒದಗಿಸಲು ಪ್ರಯತ್ನ ಮಾಡುತ್ತೇನೆ. ಜೊತೆಗೆ ಸ್ವಂತ ಖರ್ಚಿನಿಂದ ಕಂಚಿನ ಬುದ್ಧನ ಮೂರ್ತಿ ನೀಡುತ್ತೇನೆ.

- ಲಕ್ಷ್ಮಣ ಸವದಿ, ಶಾಸಕರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ