ಬುದ್ಧನ ತತ್ವಾದರ್ಶಗಳು ಸರ್ವಕಾಲಕ್ಕೂ ಅನ್ವಯ

KannadaprabhaNewsNetwork |  
Published : Apr 16, 2026, 01:15 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್ 2   | Kannada Prabha

ಸಾರಾಂಶ

ಚಳ್ಳಕೆರೆ ತಾಲೂಕಿನ ಭೀಮನಕೆರೆಯಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣ ಹಾಗೂ ಉಪಾಸಕಿ ಪೋಲಮ್ಮ ಅವರ ಪುಣ್ಯಾನುಮೋದನೆ ಕಾರ್ಯಕ್ರಮದಲ್ಲಿ ಕಸವನಹಳ್ಳಿ ಶಿವಣ್ಣ ಮಾತನಾಡಿದರು. ಭೀಮನಕೆರೆ ಶಿವಮೂರ್ತಿ, ಹುಲ್ಲೂರು ಕುಮಾರಸ್ವಾಮಿ, ಡಾ.ಬಿ.ಎಂ. ಗುರುನಾಥ್ ಇದ್ದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಅಹಿಂಸಾ ಮಾರ್ಗದ ಮೂಲಕ ನಡೆಯುವ ಜನರು ತಮ್ಮ ನಡುವಿನ ಆಂತರಿಕ ಮತ್ತು ಬಾಹ್ಯ ಸಂಘರ್ಷಗಳನ್ನು ಬದಿಗೊತ್ತಿ ಶಾಂತಿಯುತ ಬದುಕಿಗೆ ಅಣಿಯಾಗಬೇಕು ಎಂದು ಚಿಂತಕ ಕಸವನಹಳ್ಳಿ ಶಿವಣ್ಣ ಹೇಳಿದರು.

ತಾಲೂಕಿನ ಭೀಮನಕೆರೆಯಲ್ಲಿ ಬುಧವಾರ ದಲಿತ ಮಾನವ ಹಕ್ಕುಗಳ ವೇದಿಕೆವತಿಯಿಂದ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಹಾಗೂ ಉಪಾಸಕಿ ಪೋಲಮ್ಮ ಅವರ ಪುಣ್ಯಾನುಮೋದನೆ ಕಾರ್ಯಕ್ರಮದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಬುದ್ಧನ ಅಹಿಂಸಾ ತತ್ವಗಳು ಮತ್ತು ಸಮಾಜ ಕುರಿತು ಮಾತನಾಡಿದ ಅವರು, ಈ ಜಗತ್ತಿನ ಅಸಮಾನತೆಗೆ ಶ್ರೀಮಂತರು ಹಾಗೂ ಖಾಸಗಿ ವ್ಯಕ್ತಿಗಳ ಅಪರಿಮಿತ ಸಂಪತ್ತು ಕಾರಣ ಎಂದು ಬುದ್ಧ ಹೇಳಿದ್ದ. ಅಸಮಾನ ಹಂಚಿಕೆಯಿಂದಾಗಿ ಸಮಾಜದಲ್ಲಿ ಜನರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ.

ಆಸೆಯೇ ದುಃಖಕ್ಕೆ ಮೂಲ ಕಾರಣ ಎಂದು ಹೇಳಿದ ಗೌತಮ ಬುದ್ಧನ ತತ್ವಗಳನ್ನು ಅರಿಯಬೇಕು. ದುರಾಸೆಗೆ ಯಾರೂ ಕೂಡ ಮಾರು ಹೋಗಬಾರದು. ಸರಳ ಜೀವನ ರೂಢಿಸಿಕೊಂಡು ಪಂಚಶೀಲ ತತ್ವಗಳನ್ನು ಅಳವಡಿಸಿಕೊಂಡು ಬುದ್ಧ, ಬಸವ, ಅಂಬೇಡ್ಕರ್ ಮಾರ್ಗದಲ್ಲಿ ಸಾಗಬೇಕಿದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್ ಮಾತನಾಡಿ, ತಳಸಮುದಾಯಗಳ ಜನರು ಜಾತ್ರೆ, ಪರಿಷೆ ಎಂಬಿತ್ಯಾದಿ ಆಚರಣೆಗಳನ್ನು ಮಾಡುವ ಮೂಲಕ ಸಾಲಗಾರರಾಗುತ್ತಿದ್ದಾರೆ. ಅಂಬೇಡ್ಕರ್ ಅವರ ಹೋರಾಟದ ಋಣದಲ್ಲಿ ಬದುಕುತ್ತಿರುವ ನಾವುಗಳು ಹೆಚ್ಚು ಪುಸ್ತಕಗಳನ್ನು ಓದುವ ಮೂಲಕ ಜ್ಞಾನಾರ್ಜನೆ ಪಡೆದುಕೊಳ್ಳಬೇಕು. ಅನ್ನ ದೇವರ ಮುಂದೆ ಇನ್ನು ದೇವರು ಉಂಟೇ ಎಂಬುದನ್ನು ಅರಿತು ದುಡಿದುಣ್ಣುವ ಕಡೆಗೆ ನಾವು ಮನಸ್ಸು ಮಾಡಬೇಕು ಎಂದರು.

ಹಿರಿಯ ಉಪಾಸಕ, ವಕೀಲ ಬೆನಕನಹಳ್ಳಿ ಚಂದ್ರಣ್ಣ ಮಾತನಾಡಿ, ದಲಿತರು ಬುದ್ದಗುರುವಿನ ತ್ರಿಚರಣ ಮತ್ತು ಪಂಚಶೀಲ ತತ್ವಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಸಾಮಾಜಿಕ ಹೋರಾಟಗಾರ ಪರಮೇಶ ಮೌರ್ಯ ಮಾತನಾಡಿ, ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲಾರ. ಅಂತಹವರು ದೈಹಿಕ ಮತ್ತು ಮಾನಸಿಕ ಗುಲಾಮಗಿರಿಗೆ ಒಳಗಾಗುತ್ತಾನೆ. 139 ದೇಶಗಳಲ್ಲಿ ಅಂಬೇಡ್ಕರ್ ಅವರ ಜಯಂತಿ ಆಚರಣೆ ಮಾಡುತ್ತಿವೆ. ಇಂತಹ ವಿಮೋಚಕನ ಹಾದಿಯಲ್ಲಿ ಹೋಗಬೇಕು ಎಂದರು.

ಮನುಸ್ಮೃತಿಯ ಸಂವಿಧಾನದಿಂದ ಹೊರಬಂದು ಬಾಬಾ ಸಾಹೇಬರ ಸಂವಿಧಾನದ ಅಡಿಯಲ್ಲಿ ನಾವು ಜೀವಿಸುತ್ತಿದ್ದೇವೆ. ಅಂತಹ ಮನುಸ್ಮೃತಿಯನ್ನು ಸುಟ್ಟು ಹಾಕಿದ ಅಂಬೇಡ್ಕರ್ ಅಸಮಾನತೆಯನ್ನು ನೀಗಲು ಅವಿರತ ಹೋರಾಟವನ್ನು ನಾವು ಮರೆಯಬಾರದು ಎಂದು ತಿಳಿಸಿದರು. ಒಳಮೀಸಲಾತಿ ಹೋರಾಟಗಾರ ಹುಲ್ಲೂರು ಕುಮಾರಸ್ವಾಮಿ ಹಾಗೂ ಟಿ.ವಿಜಯಕುಮಾರ್ ಅವರಿಗೆ ಜಿಲ್ಲಾಡಳಿತ ಡಾ.ಅಂಬೇಡ್ಕರ್ ಪ್ರಶಸ್ತಿ ನೀಡಿದ ಕಾರಣ ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು. ದಲಿತ ಮಾನವ ಹಕ್ಕುಗಳ ಹೋರಾಟಗಾರ ಭೀಮನಕೆರೆ ಶಿವಮೂರ್ತಿ, ಹೊನ್ನೂರ ಸ್ವಾಮಿ, ಟಿ. ವಿಜಯಕುಮಾರ್ ಮಾತನಾಡಿದರು.

ಅಖಿಲ ಭಾರತ ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಎನ್.ಪ್ರಕಾಶ್, ಲಕ್ಷ್ಮಮ್ಮ, ಬೂದಿಹಳ್ಳಿ ಹೊನ್ನೂರಸ್ವಾಮಿ, ನನ್ನಿವಾಳ ನಾಗರಾಜ್, ಕಾಂಗ್ರೆಸ್ ಮುಖಂಡ ನವೀದ್, ನೆಲಗೇತನಹಟ್ಟಿ ನಾಗರಾಜ್, ದೊಡ್ಡ ಉಳ್ಳಾರ್ತಿ ರಾಜಣ್ಣ, ಬಿ.ಎಸ್.ಯೋಗರಾಜು, ಗಾಂಧೀನಗರ ಚಂದ್ರಣ್ಣ, ಬೆಸ್ಕಾಂ ತಿಪ್ಪೇಸ್ವಾಮಿ, ಬಂಗ್ಲೆ ಶ್ರೀನಿವಾಸ್, ಹನುಮಂತರಾಯ, ಯತ್ತಿನಹಟ್ಟಿ ಓಬಳೇಶ್, ಮಂಜು, ಶಿವಣ್ಣ ಮತ್ತಿತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿರುದ್ಯೋಗಿಗಳಿಗೆ ಉದ್ಯೋಗ ಮೇಳ ವರದಾನ
ಗ್ರಾಮದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಕೆರೆಗಳ ಪಾತ್ರ ಅತಿಮುಖ್ಯ