ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ 35 ಡಿ.ಸೆ.ಗೆ ತಾಪಮಾನ ಏರಿಕೆಯಾಗಿದ್ದು, ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ. ದೇಹವನ್ನು ತಣಿಸಿಕೊಳ್ಳಲು ಎಲ್ಲೆಡೆ ಜನರು ಎಳನೀರು, ಕಲ್ಲಂಗಡಿ ಸೇರಿದಂತೆ ಮತ್ತಿತರ ತಂಪು ಪಾನೀಯಗಳನ್ನು ಸೇವಿಸುತ್ತಿದ್ದಾರೆ. ಸಾರ್ವಜನಿಕರು ತಾಪಮಾನ ಹೆಚ್ಚಾದ ಕಾರಣ ಲಘು ಉಪಾಹಾರ ಸೇವನೆ ಮಾಡುತ್ತಿದ್ದು ಹೆಚ್ಚಾಗಿ ಪಾನೀಯಗಳನ್ನು ಸೇವಿಸುತ್ತಿದ್ದಾರೆ. ದರ ಹೆಚ್ಚಾದರೂ ಪರವಾಗಿಲ್ಲ, ನಮಗೆ ಆರೋಗ್ಯ ಮುಖ್ಯ ಎಂದು ಕೆಲವರು ನೈಸರ್ಗಿಕ ಪಾನೀಯ ಎಳನೀರಿನ ಮೊರೆ ಹೋಗಿದ್ದಾರೆ.
ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ನಗರದಲ್ಲಿ ಗುಣಮಟ್ಟದ ಎಳನೀರು 50 ರು.ಗಳಿಂದ 80 ರೂ.ಗೆ ಮಾರಾಟವಾಗುತ್ತಿದೆ. ಜಿಲ್ಲೆಯಲ್ಲಿ ಸುಮಾರು 2.5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯುತ್ತಾರೆ. ಚಳಿಗಾಲದಲ್ಲಿ ಮಂಕಾಗಿದ್ದ ಎಳನೀರು ವ್ಯಾಪಾರ ಜೋರಾಗಿ ನಡೆಯುತ್ತಿದೆ. ಜನರು ಕೂಡ ಆರೋಗ್ಯ ದೃಷ್ಟಿಯಿಂದ ಹಾಗೂ ಬಿಸಿಲ ಪ್ರಭಾವಕ್ಕೆ ಎಳನೀರು ಬಳಕೆ ಹೆಚ್ಚಾಗಿ ಮಾಡುತ್ತಿದ್ದಾರೆ. ವ್ಯಾಪಾರಸ್ಥರು ಕಳೆದ ತಿಂಗಳಿಗೆ ಹೋಲಿಸಿದರೆ ಶೇ. 30ರಷ್ಟು ವ್ಯಾಪಾರವನ್ನು ಹೆಚ್ಚಳ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ತೆಂಗು ಬೆಳೆ ಕಡಿಮೆ ಇರುವುದರಿಂದ ನೆರೆಯ ಕೋಲಾರ, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ, ಮದ್ದೂರು, ಮಂಡ್ಯ, ಮೈಸೂರು, ಹಾಸನ, ಮಡಿಕೇರಿ, ಜಿಲ್ಲೆಗಳು ಮತ್ತು ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳಂ ರಾಜ್ಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಎಳನೀರು ಸರಬರಾಜಾಗುತ್ತಿದೆ.ಮಳೆಯ ಕೊರತೆ ಹಾಗೂ ರೋಗಬಾಧೆಯಿಂದ ಇಳುವರಿ ಕುಂಠಿತವಾಗಿ ಬೆಲೆ ಏರಿಕೆಯಾಗಿದೆ. ಏಷ್ಯಾದಲ್ಲೇ ದೊಡ್ಡ ಮಾರುಕಟ್ಟೆಯಾದ ಮದ್ದೂರು ಮಾರುಕಟ್ಟೆಯಲ್ಲಿ 40 ರು.ಗಳಿಂದ 50 ರು.ಗೆ ಎಳನೀರು ಸಿಗುತ್ತಿದ್ದು ಸಾಗಾಟ, ವ್ಯಾಪಾರಿಗಳ ಕೂಲಿ ಎಲ್ಲಾ ಸೇರಿ ನಗರದಲ್ಲಿ 70 ರು.ಗೆ ಮಾರಾಟ ಮಾಡಲಾಗುತ್ತಿದೆ.ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆ ಮಾಹಿತಿ ಅನುಸಾರ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಂಗಡಿ ಬೆಳೆಯಲಾಗುತ್ತಿಲ್ಲ. ಕೆಲ ರೈತರು ಅಲ್ಲಲ್ಲಿ ಮಾತ್ರ ಇದನ್ನು ಬೆಳೆಯುತ್ತಾರೆ. ಆದರೆ ಕಲ್ಲಂಗಡಿ ಬಳಸುವವರ ಪ್ರಮಾಣ ಹೆಚ್ಚಾಗಿಯೇ ಇದೆ. ಜಿಲ್ಲೆಯದೆಲ್ಲಾ ಎಂಟು ತಾಲೂಕಿನಲ್ಲಿ ವಿವಿಧ ಕಡೆಗಳಲ್ಲಿ ಕಲ್ಲಂಗಡಿ ಮಾರಾಟ ಸರ್ವೇ ಸಾಮಾನ್ಯವಾಗಿದೆ. ಜಿಲ್ಲೆಯಲ್ಲಿ ಅನ್ಯ ರಾಜ್ಯಗಳ ಕಲ್ಲಂಗಡಿ ಎಂಟ್ರಿ ಕೊಟ್ಟಿದ್ದು, ಬೇಡಿಕೆ ಪಡೆದುಕೊಂಡಿದೆ. ಇನ್ನೂ ಎಳನೀರು ಬಳಕೆ ಕೂಡ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಎಳನೀರು ದರ ಕೂಡ ಮತ್ತೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ.ಜಿಲ್ಲೆಯಲ್ಲಿ ಪ್ರಸುತ್ತ ಕಲ್ಲಂಗಡಿ ಬೆಳೆಗಾರರು ವಿರಳ. ಜತೆಗೆ ಕಲ್ಲಂಗಡಿ ಬೆಳೆಯುವ ವಿಧಾನ ಬಗ್ಗೆ ಮಾಹಿತಿ ಕೊರತೆ ಕೂಡ ಇದೆ. ಇದರಿಂದ ಗುಣಮಟ್ಟದ ಕಲ್ಲಂಗಡಿ ಸ್ಥಳೀಯವಾಗಿ ಸಿಗುತ್ತಿಲ್ಲ. ಪ್ರತಿ ವರ್ಷವೂ ಕೂಡ ಇದೇ ರೀತಿಯ ಸಮಸ್ಯೆ ಎದುರಾಗುತ್ತದೆ. ಇದರಿಂದ ಜಿಲ್ಲೆಯ ಕಲ್ಲಂಗಡಿ ವ್ಯಾಪರಸ್ಥರು ಆಂಧ್ರ, ತೆಲಂಗಾಣಗಳು ಸೇರಿದಂತೆ ಅನ್ಯ ರಾಜ್ಯಗಳ ಕಲ್ಲಂಗಡಿ ತರುತ್ತಿದ್ದು, ವಿವಿಧ ತಳಿಗಳ ಕಲ್ಲಂಗಡಿ ಜಿಲ್ಲೆಯಲ್ಲಿ ಮಾರಾಟವಾಗುತ್ತಿರುವುದು ಕಾಣಬಹುದಾಗಿದೆ. ಇನ್ನೂ ಕೆಂಪು ಕಲ್ಲಂಗಡಿ ಮಾತ್ರ ಎಂಟ್ರಿ ಕೊಟ್ಟಿದ್ದು, ಹಳದಿ, ಕೇಸರಿ ಕಲ್ಲಂಗಡಿ ಕೂಡ ಶೀಘ್ರದಲ್ಲಿ ಜಿಲ್ಲೆಯಲ್ಲಿ ಕಾಣಬಹುದಾಗಿದೆ.
ಬೆಳಿಗ್ಗೆ 8 ಗಂಟೆಯಾದರೆ ಬಿಸಿಲು ನೆತ್ತಿ ಸುಡುತ್ತಿದ್ದು ಮನೆಯಿಂದ ಹೊರಬರಲು ಜನರು ಹೆದರುತ್ತಿದ್ದಾರೆ. ಸೆಖೆಯಿಂದ ಪಾರ್ಕ್‌ಗಳಿಗೂ ಸಹ ವಾಕಿಂಗ್ ಹೋಗುವವರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದೆ. ಮನೆಗಳಲ್ಲಿ 24 ಗಂಟೆ ಎಸಿ, ಏರ್‌ಕೂಲರ್, ಫ್ಯಾನ್ ಚಾಲೂ ಆಗಿರುತ್ತವೆ. ಬೇಸಿಗೆ ಹಿನ್ನೆಲೆಯಲ್ಲಿ ಎಸಿ, ಏರ್‌ಕೂಲರ್, ಫ್ಯಾನ್‌ಗಳ ಬೇಡಿಕೆ ಹೆಚ್ಚಿದ್ದು, ವ್ಯಾಪಾರ ವಹಿವಾಟು ಭರದಿಂದ ಸಾಗಿದೆ.