ಜೀವನದ ಸತ್ಯವನ್ನು ಅರ್ಥಪೂರ್ಣವಾಗಿ ಬಹಳ ಸರಳವಾಗಿ ತಿಳಿಸಿದ ಬುದ್ದನ ತತ್ವಗಳು ಸೂರ್ಯ ಚಂದ್ರರು ಇರುವ ತನಕ ಪ್ರಸ್ತುತವಾಗಿರುತ್ತದೆ ಎಂದು ಗೃಹಸಚಿವ ಹಾಗೂ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಜಿ.ಪರಮೇಶ್ವರ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ತುಮಕೂರುಜೀವನದ ಸತ್ಯವನ್ನು ಅರ್ಥಪೂರ್ಣವಾಗಿ ಬಹಳ ಸರಳವಾಗಿ ತಿಳಿಸಿದ ಬುದ್ದನ ತತ್ವಗಳು ಸೂರ್ಯ ಚಂದ್ರರು ಇರುವ ತನಕ ಪ್ರಸ್ತುತವಾಗಿರುತ್ತದೆ ಎಂದು ಗೃಹಸಚಿವ ಹಾಗೂ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಜಿ.ಪರಮೇಶ್ವರ್ ತಿಳಿಸಿದರು. ನಗರದ ಹೊರವಲಯದ ಶ್ರೀ ಸಿದ್ಧಾರ್ಥ ನಗರದಲ್ಲಿ ಆಯೋಜಿಸಲಾಗಿದ್ದ ಬುದ್ಧ ಪೂರ್ಣಮಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಭಗವಾನ್ ಬುದ್ಧರು ಹುಟ್ಟಿದ, ಜ್ಞಾನೋದಯವಾದ, ಹಾಗೂ ಸಮಾಧಿ ಸ್ಥಿತಿಗೆ ತೆರಳಿದ ದಿನ ಇದಾಗಿದ್ದರಿಂದ ಈ ದಿನಕ್ಕೆ ಪ್ರಾಮುಖ್ಯತೆ ಬಂದಿದೆ. ಇಂದು ಜಗತ್ತು ದುಃಖದಲ್ಲಿ ಬಿದ್ದು ನರಳುತ್ತಿದೆ ಈ ದುಃಖದಿಂದ ಹೊರಬರಬೇಕು ಎಂದರೆ ಬುದ್ಧನ ಅಷ್ಟಾಂಗಮಾರ್ಗವನ್ನು ಪಾಲಿಸಬೇಕು ಆಗ ಮಾತ್ರ ಜಗತ್ತು ದುಃಖದಿಂದ ಹೊರಬರಲು ಸಾಧ್ಯ. ಬುದ್ಧನ ತತ್ವಗಳಲ್ಲಿ ಮನುಷ್ಯ ಮನುಷ್ಯನಿಗೆ ವ್ಯತ್ಯಾಸವಿಲ್ಲ, ಭೌದ್ಧ ಧರ್ಮದಲ್ಲಿ ಜಾತಿವ್ಯವಸ್ಥೆಯಿಲ್ಲ ಬುದ್ಧನ ಎದುರು ಎಲ್ಲರೂ ಸಮಾನರು. ಹಾಗಾಗಿ ಬುದ್ಧನ ವಿಚಾರಗಳು ಸಾಕಷ್ಟು ಪ್ರಚಾರವಾಗಬೇಕು. ಪ್ರತಿಯೊಬ್ಬರನ್ನೂ ತಲುಪಬೇಕು. ಹಾಗಾಗಿ ಇನ್ನು ಸಾವಿರ ವರ್ಷ ಹೋದರೂ ಕೂಡ ಸಿದ್ಧಾರ್ಥನ ಹೆಸರು ಅಜರಾಮರವಾಗಿ ಜಗತ್ತಿನಲ್ಲಿ ಉಳಿಯುತ್ತೆ ಎಂದು ಹೇಳಿದರು.
ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ನಂಜುಡಪ್ಪ ಮಾತನಾಡಿ, ಬುದ್ಧ ವಿಶ್ವದ ಬೆಳಕು. ಶಾಂತಿಮಂತ್ರವನ್ನು ಜಪಿಸಿದ ಮಹಾನ್ ಸಂತ ದೇಶದಲ್ಲಿ ಜಾತಿ ವ್ಯವಸ್ಥೆಯನ್ನು ಸುಧಾರಿಸಲು ಸಾಕಷ್ಟು ಸಮಾಜ ಸುಧಾರಕರು ಬಂದು ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಅದರಂತೆ ಬುದ್ಧ ಭಗವಾನರು ಸಮಾಜದಲ್ಲಿನ ತಾರತಮ್ಯವನ್ನು ಹೋಗಲಾಡಿಸಿ ಮನುಷ್ಯ ಮನುಷ್ಯನ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಲ್ಲರು ಸಮಾನರು ಎಂಬುದನ್ನು ತಿಳಿಸಿಕೊಟ್ಟರು. ವ್ಯಕ್ತಿಯು ಶಾಂತಿ ನೆಮ್ಮದಿಯಿಂದ ಇರಲು ಬೇಕಾದ ಮಾರ್ಗವನ್ನು ಬುದ್ಧರು ತಮ್ಮ ಅಷ್ಟಾಂಗ ಮಾರ್ಗದಲ್ಲಿ ತಿಳಿಸಿದ್ದಾರೆ ಇದನ್ನು ನಾವೆಲ್ಲರೂ ಅರ್ಥಮಾಡಿಕೊಂಡು ಈ ಮಾರ್ಗದಲ್ಲಿ ನಡೆಯಬೇಕು ಎಂದು ತಿಳಿಸಿದರು. ಸಂಸ್ಥೆಯ ಮಾರ್ಗದರ್ಶಕ ನರಸಿಂಗಪ್ಪ ಮಾತನಾಡಿ, ಇಂದು ನಾವು ಪಡೆಯುತ್ತಿರುವ ಶಿಕ್ಷಣ ಕೇವಲ ಒಂದು ವೃತ್ತಿಗಾಗಿ ಅಷ್ಟೇ. ನಿಜವಾದ ಶಿಕ್ಷಣ ನಮಗೆ ಇನ್ನು ದೊರೆತೇ ಇಲ್ಲ. ನಿಜವಾದ ಶಿಕ್ಷಣ ಹೇಗಿರಬೇಕು ಅಂದರೆ ಮಾನಸಿಕವಾದ ತೊಂದರೆಗಳನ್ನು ದೂರ ಮಾಡುವಂತಹ ಶಿಕ್ಷಣ ನಮಗೆ ಬೇಕು. ನಾವು ಹೆಚ್ಚು ದುಃಖಿಗಳಾಗಿರುವುದು ನಮ್ಮಲ್ಲಿರುವ ಅತಿಯಾದ ಆಸೆ, ಮೋಹ, ಇವೆಲ್ಲವುಗಳಿಂದ ಮುಕ್ತರಾದರೆ ಸದಾ ಆನಂದವಾಗಿರಬಹುದು. ಬುದ್ಧನ ತತ್ವಗಳು ಮನುಷ್ಯನು ಸನ್ನಡತೆಯಿಂದ ಬದುಕುವ ಮಾರ್ಗವನ್ನು ತೋರುತ್ತದೆ ಇದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಟ್ರಸ್ಟಿಗಳಾದ ಡಾ. ಎಸ್. ಆನಂದ್, ಸಾಹೇ ವಿವಿಯ ಕುಲಸಚಿವರಾದ ಡಾ. ಅಶೋಕ್ ಮೆಹೆತಾ, ತುಮಕೂರು ಜಿಲ್ಲಾಧಿಕಾರಿ ಶುಭಾಕಲ್ಯಾಣ್, ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ವೈದ್ಯಕೀಯ ಅಧೀಕ್ಷಕರಾದ ಡಾ.ವೆಂಕಟೇಶ್, ಎಸ್ ಎಸ್ ಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಮಹಾಂತೇಶ್ ಎಂ. ನಡಕಟ್ಟಿ, ಹಾಗೂ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು, ಶಾಲೆಗಳ ಮುಖ್ಯೋಪಾಧ್ಯಾಯರು, ಎಲ್ಲಾ ಭೋದಕ ಮತ್ತು ಭೋದಕೇತರ ಸಿಬ್ಬಂದಿಗಳು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.