ಭಗವಾನ್ ಬುದ್ಧರ ಜಯಂತಿ ಆಚರಣೆ
ಶಾಂತಿ ಮತ್ತು ಜ್ಞಾನದ ಜ್ಯೋತಿಯನ್ನು ಬೆಳಗಿಸಿ ಜಗತ್ತಿನ ಕೋಟಿ ಕೋಟಿ ಜನರ ಹೃದಯವನ್ನು ಗೆದ್ದಂತಹ ವಿಶ್ವ ಶಾಂತಿ ಪ್ರತಿಪಾದಕ ಭಗವಾನ್ ಬುದ್ಧ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.ಜಿಲ್ಲಾಡಳಿತದಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ಸೋಮವಾರ ನಡೆದ ಭಗವಾನ್ ಬುದ್ಧರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕ್ರಿ.ಪೂ. ಆರನೇ ಶತಮಾನದಲ್ಲಿ ಕಪಿಲವಸ್ತು ರಾಜ್ಯದ ದೊರೆಯಾಗಿದ್ದ ಶುದ್ಧೋದನ ಹಾಗೂ ಮಾಯಾದೇವಿ ಪುತ್ರನಾಗಿ ಜನಿಸಿದವರು ಸಿದ್ಧಾರ್ಥ.ಮುಂದೆ ಒಬ್ಬ ಮಹಾ ಯೋಗ ಪುರುಷನಾಗುತ್ತಾನೆ, ಸನ್ಯಾಸಿಯಾಗುತ್ತಾನೆ ಎನ್ನುವ ಭವಿಷ್ಯ ನುಡಿ ಕೇಳಿದ ಮಹಾರಾಜ ಏನಾದರೂ ಮಾಡಿ ಮಗನನ್ನು ತನ್ನ ಉತ್ತರಾಧಿಕಾರಿಯನ್ನಾಗಿ ಮಾಡಬೇಕು. ಆತ ಸನ್ಯಾಸಿಯಾಗಬಾರದು ಎಂದು ಬಯಸಿ ಆತನಿಗೆ ವಿವಾಹ ಮಾಡುತ್ತಾನೆ. ಮಗುವೂ ಜನಿಸುತ್ತದೆ. ಆದರೂ ಆತ ಯೋಗ ಪುರುಷನಾಗುವುದನ್ನು ತಪ್ಪಿಸಲು ಸಾಧ್ಯವಾಗಲಿಲ್ಲ ಎಂದರು.
ಅಂದಿನ ಪ್ರಾಪಂಚಿಕ ವ್ಯವಸ್ಥೆಯಲ್ಲಿ ವೃದ್ಧಾಪ್ಯ, ರೋಗಿಷ್ಟ ಮತ್ತು ಶವವನ್ನು ಹೊತ್ತೊಯ್ಯುತ್ತಿದ್ದ ದೃಶ್ಯ ಗಮನಿಸಿ ಆತನಲ್ಲಿ ಜ್ಞಾನೋದಯವಾಗಿ ಈ ಮೂರು ಎಲ್ಲರ ಜೀವನದಲ್ಲೂ ಬರುವಂತಹವು ಎಂದು ಅರಿತು ಆಸೆಯೇ ದುಃಖಕ್ಕೆ ಮೂಲ ತನಗೇಕೆ ಈ ರಾಜ ವೈಭವ ಎಂದು ಎಲ್ಲವನ್ನೂ ತ್ಯಾಗ ಮಾಡುತ್ತಾರೆ. ಬೋಧಿವೃಕ್ಷದ ಕೆಳಗೆ ಸುದೀರ್ಘಕಾಲ ತಪಸ್ಸನ್ನಾಚರಿಸಿ ಯೋಗ, ಯೋಗ್ಯತೆ ಸಾಧಿಸಿದ ಸಿದ್ಧಾರ್ಥ ಭಗವಾನ್ ಬುದ್ಧನಾಗುತ್ತಾರೆ ಎಂದರು.ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಬುದ್ಧ ಎಂದರೆ ಅಲಂಕಾರದ ವಸ್ತುವಲ್ಲ, ಬುದ್ಧನನ್ನು ತತ್ತ್ವದೊಡನೆ ಪ್ರತಿಷ್ಠಾಪನೆ ಮಾಡಿಕೊಂಡರೆ ಮಾತ್ರ ಆ ಬುದ್ಧತ್ವಕ್ಕೆ ಬೆಲೆ ಬರುತ್ತದೆ. ಆ ಬುದ್ಧನಿಗೆ ನಾವು ಶರಣಾಗಬೇಕಾಗುತ್ತದೆ. ಬುದ್ಧನ ತತ್ತ್ವಗಳೆಂದರೆ ಕನ್ನಡಿಯೊಳಗಿನ ಗಂಟಿನಂತಲ್ಲ, ಇತರರಿಗೆ ಹಾನಿ ಮಾಡಬೇಡಿ, ಜೀವನದ ಉದ್ದೇಶವನ್ನು ಸರಿಯಾಗಿಟ್ಟುಕೊಳ್ಳಿ. ಪ್ರೀತಿ ಮಾರ್ಗವನ್ನು ಅನುಸರಿಸಿ. ಇತರರನ್ನು ತನ್ನಂತೆ ಭಾವಿಸಿ, ನಿಮ್ಮನ್ನು ನೀವೇ ಜಯಿಸಿ ಎಂದವರು ಬೋಧಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ, ಉಪ ವಿಭಾಗಾಧಿಕಾರಿ ದೇವರಾಜ್, ತಹಸೀಲ್ದಾರ್ ರೇಷ್ಮ ಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್ ಭಾಗವಹಿಸಿದ್ದರು. 12 ಕೆಸಿಕೆಎಂ 2
ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಸೋಮವಾರ ನಡೆದ ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಬುದ್ಧನ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು.