ಸೋಮರಡ್ಡಿ ಅಳವಂಡಿ
ಕೊಪ್ಪಳ:ಮಾರ್ಚ್ 31ರೊಳಗಾಗಿ ಮಂಡಿಸಬೇಕಿದ್ದ ಕೊಪ್ಪಳ ನಗರಸಭೆ ಬಜೆಟ್ ಏಪ್ರಿಲ್ ಮುಗಿಯುತ್ತಾ ಬಂದರೂ, ನಿಗದಿಯಾಗಿದ್ದ ದಿನ ಕಳೆದರೂ ಮಂಡನೆಯಾಗಿಲ್ಲ. .
ನಗರಸಭೆ ಅಧ್ಯಕ್ಷ ಅಮ್ಜಾದ್ ಪಟೇಲ್ ಮತ್ತು ಪೌರಾಯುಕ್ತ ಗಣಪತಿ ಪಾಟೀಲ್ ನಡುವಿನ ಶೀತಲ ಸಮರದಿಂದ ಆಡಳಿತ ಯಂತ್ರವೇ ಕುಸಿದಿದೆ. ಜತೆಗೆ ಖರ್ಚಿಗೂ, ಲೆಕ್ಕಕ್ಕೂ ತಾಳೆಯಾಗುತ್ತಿಲ್ಲ. ಖರ್ಚು ಮಾಡಿರುವುದಕ್ಕೆ ಲೆಕ್ಕ ನೀಡುವಂತೆ ಸದಸ್ಯರು ಪಟ್ಟು ಹಿಡಿದಿದ್ದು ಸಮಸ್ಯೆ ಬಿಗಡಾಯಿಸಿದೆ.ಬಜೆಟ್ ಮಂಡಿಸದೆ ಇರುವುದರಿಂದ ಜನರ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಹಾಗೂ ಸದಸ್ಯರು ಅಧ್ಯಕ್ಷರಿಗೆ ಆಕ್ಷೇಪ ಸಲ್ಲಿಸಿದ್ದರಿಂದ ವಾರದ ಹಿಂದೆ ಅನೌಪಚಾರಿಕವಾಗಿ ಸಭೆ ನಡೆಸಲಾಗಿತ್ತು. ಆಗ ಲೆಕ್ಕಪತ್ರದ ಕುರಿತು ತೀವ್ರ ಆಕ್ಷೇಪ ವ್ಯಕ್ತವಾಗಿದ್ದರಿಂದ ಈ ವರೆಗಿನ ಖರ್ಚಿನ ವಿವರದ ಲೆಕ್ಕ ನೀಡುವಂತೆ ಕೋರಿದ್ದರಿಂದ ಏ.9ರಂದು ನೀಡಲಾಗುವುದು. 16ರಂದು ಬಜೆಟ್ ಮಂಡಿಸಲಾಗುವುದು. 17ರಂದು ಸಾಮಾನ್ಯ ಸಭೆ ನಡೆಸಲಾಗುವುದು ಎಂದು ಪೌರಾಯುಕ್ತ ಗಣಪತಿ ಪಾಟೀಲ್ ಮತ್ತು ಅಧ್ಯಕ್ಷ ಅಮ್ಜಾದ್ ಪಟೇಲ್ ಹೇಳಿದ್ದರು. ಆದರೆ, ಅದರಂತೆ ಯಾವುದು ನಡೆಯಲಿಲ್ಲ. ಈಗ ಬಜೆಟ್ ದಿನವು ಮುಗಿದಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬಜೆಟ್ ಮಂಡಿಸುವ ಮೊದಲು ಲೆಕ್ಕಪತ್ರ ಒಪ್ಪಿಸಬೇಕು. ಕಳೆದ 16 ತಿಂಗಳಲ್ಲಿ ಬರೋಬ್ಬರಿ ₹ 15 ಕೋಟಿ ಖರ್ಚು ಮಾಡಿದ್ದು ಇದರ ಲೆಕ್ಕ ನೀಡುವಂತೆ ಸದಸ್ಯರು ಕೇಳುತ್ತಿದ್ದಾರೆ. ಆದರೆ, ವಿವರ ನೀಡಲು ಪೌರಾಯುಕ್ತರು ಹಿಂದೇಟು ಹಾಕುತ್ತಿರುವುದು ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಗಿದೆ. ಪೌರಾಯುಕ್ತರ ಅನುಮತಿಗಿಂತ ಇನ್ಯಾರದ್ದೋ ಅನುಮತಿಯಲ್ಲಿ ಹಣ ವ್ಯಯವಾಗಿದೆ. ಅದಕ್ಕೆ ಲೆಕ್ಕ ಇಲ್ಲದೆ ಇರುವುದು ಸಮಸ್ಯೆಯಾಗಿದೆ. ಇದರಿಂದಾಗಿಯೇ ಸಾಮಾನ್ಯ ಸಭೆ ನಡೆಯುತ್ತಿಲ್ಲ, ಬಜೆಟ್ ಮಂಡನೆಯಾಗುತ್ತಿಲ್ಲ ಎಂಬ ಆರೋಪವೂ ಕೇಳಿ ಬರುತ್ತಿದೆ.ಆಸ್ತಿ ತೆರಿಗೆ ಜಮೆ:
ಈ ನಡುವೆ ಸ್ವಯಂ ಘೋಷಿತ ಆಸ್ತಿ ತೆರಿಗೆ ಪಾವತಿಸಲು ಸಾರ್ವಜನಿಕರು ಸರದಿಯಲ್ಲಿ ನಿಲ್ಲುತ್ತಿದ್ದಾರೆ. ಇದೆಲ್ಲವೂ ಜಮೆಯಾದ ಮೇಲೆ ಹಾಗೂ ಈಗಾಗಲೇ ಮಾಡಿರುವ ವೆಚ್ಚಗಳ ಬಿಲ್ ಪಾವತಿಸಿಕೊಂಡ ಮೇಲೆಯೇ ಸಭೆ ಕರೆಯಬೇಕು ಎನ್ನುವ ತೀರ್ಮಾನವಾಗಿದೆ ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ಇನ್ನಿಲ್ಲದ ಕಾರಣ ಮತ್ತು ವಿವಾದ ಮುಂದಿಟ್ಟುಕೊಂಡು ಸಾಮಾನ್ಯ ಸಭೆ ಹಾಗೂ ಲೆಕ್ಕಪತ್ರ ನೀಡುವುದನ್ನು ಮುಂದೂಡಲಾಗಿದೆ.ಹಿಟ್ನಾಳ ಮೌನ:
ನಗರಸಭೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ವಿವಾದ ಭುಗಿಲೆದ್ದಿದೆ. ಸದಸ್ಯರು ಮತ್ತು ಅಧ್ಯಕ್ಷರ ನಡುವೆ ಶೀತಲ ಸಮರ ಏರ್ಪಟ್ಟಿದೆ. ಪರಸ್ಪರ ಹೊಂದಾಣಿಕೆ ಕೊರತೆಯಿಂದ ಆಡಳಿತ ವ್ಯವಸ್ಥೆ ಕುಸಿದುದಿದೆ. ಇದೆಲ್ಲಕ್ಕೂ ಪರಿಹಾರ ಕಂಡುಕೊಳ್ಳಬೇಕಾದ ಶಾಸಕ ರಾಘವೇಂದ್ರ ಹಿಟ್ನಾಳ ಮಾತ್ರ ಜಾಣಕುರುಡರಂತೆ ಇದ್ದಾರೆ. ಈ ಎರಡು ಸಮಸ್ಯೆಗಳನ್ನು ಇತ್ಯರ್ಥ ಮಾಡಬೇಕಾದ ಅವರು ಈ ವರೆಗೂ ಈ ಕುರಿತು ಮಾತನಾಡದೆ ಇರುವುದು ಸಹ ಚರ್ಚೆಯಾಗುತ್ತಿದೆ.