ಕನ್ನಡಪ್ರಭ ವಾರ್ತೆ ಮುಧೋಳ
ನಗರದ ಹೃದಯ ಭಾಗದಲ್ಲಿರುವ 19 ಎಕರೆ 9 ಗುಂಟೆ ವಿಸ್ತೀರ್ಣದ ಕೆರೆ ಉದ್ಯಾನವನಕ್ಕೆ ಇತ್ತೀಚೆಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಸಚಿವರು, ಸುಂದರ ಉದ್ಯಾನವನಕ್ಕೆ ಬೇಕಾದ ಅಗತ್ಯತೆಗಳು ಮತ್ತು ಬೇಡಿಕೆಗಳ ಬಗ್ಗೆ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕಳೆದ ಮೂರು ದಶಕಗಳ ಹಿಂದೆ ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ಅವರು ಉದ್ಘಾಟಿಸಿದ್ದ ಈ ಉದ್ಯಾನವನ್ನು ನವೀಕರಿಸಲು ಸಚಿವರು ಚುರುಕು ಮುಟ್ಟಿಸಿದ್ದಾರೆ.
ಉದ್ಯಾನವನದ ದ್ವಾರಕ್ಕೆ ಪ್ರಸಿದ್ಧ ಬೇಟೆ ನಾಯಿಯ ಪ್ರತಿಮೆ, ಕೊಡ ಹೊತ್ತಿರುವ ಮಹಿಳೆಯ ಪ್ರತಿಮೆ, ಕೆರೆಗೆ ತೂಗು ಸೇತುವೆ, ತಿನಿಸು ಕಟ್ಟೆ, ಕಾಫಿ ಸೆಂಟರ್, ಮಕ್ಕಳ ಆಟಕ್ಕೆ ವಿವಿಧ ಬಗೆಯ ಸಾಮಗ್ರಿಗಳು, ಸಂಗೀತ ಕಾರಂಜಿ, ವೃದ್ಧರಿಗೆ ಕಾಲ ಕಳೆಯಲು ಪ್ರತ್ಯೇಕ ಹಿರಿಯರ ಕಟ್ಟೆ ಹಾಗೂ ವಿವಿಧ ಬಗೆಯ ಹೂವಿನ ತೋಟ ಸೇರಿದಂತೆ ಹಲವು ಆಕರ್ಷಣೆಗಳನ್ನು ಅಳವಡಿಸಲಾಗುವುದೆಂದು ತಿಳಿಸಿದ್ದಾರೆ.ಕೆರೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅತಿಕ್ರಮಣವಾಗಿರುವ ಜಾಗಗಳನ್ನು ತೆರವುಗೊಳಿಸಿ, ಸರ್ವೇ ಮಾಡಿಸಿ ತಂತಿ ಬೇಲಿ ಹಾಕಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆಂದು ಸ್ಪಷ್ಟಪಡಿಸಿದ ಸಚಿವರು, ಪ್ರಸ್ತುತ ತೋಟಗಾರಿಕೆ ಇಲಾಖೆಯಿಂದ ವಾರ್ಷಿಕವಾಗಿ ₹1.80 ಲಕ್ಷ ಹಾಗೂ ಉದ್ಯಾನವನ ಅಭಿವೃದ್ಧಿಗೆ ₹50 ಲಕ್ಷ ಲಭ್ಯವಿದೆ. ನಗರ ಪ್ರಾಧಿಕಾರದಿಂದ ಕೆರೆ ಅಭಿವೃದ್ಧಿಗೆ ₹1.30 ಲಕ್ಷ ನಿಗದಿಪಡಿಸಲಾಗಿದೆ. ಇದರೊಂದಿಗೆ ಸಣ್ಣ ನೀರಾವರಿ ಇಲಾಖೆಯಿಂದಲೂ ಕೆರೆ ಅಭಿವೃದ್ಧಿಗೆ ಅನುದಾನ ತರುವುದಾಗಿ ಭರವಸೆ ನೀಡಿದರು. ಜನರ ಬಹುದಿನಗಳ ಬೇಡಿಕೆ ಈಡೇರಿಸಲು ಉತ್ಸಾಹವಿರುವುದಾಗಿ ಅವರು ತಿಳಿಸಿದರು.