ತೋಟಗಾರಿಕೆ ಕೋರ್ಸ್‌ ಅಧ್ಯಯನದಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ

KannadaprabhaNewsNetwork | Published : Jul 2, 2025 12:21 AM
ಚಿತ್ರ 3 | Kannada Prabha

ಸಾರಾಂಶ

ಹಿರಿಯೂರು ನಗರದ ತುಳಸಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕೃಷಿ ಶಿಕ್ಷಣ ಸುಗ್ಗಿ 2025ರ ಕಾರ್ಯಕ್ರಮವನ್ನು ಸಚಿವ ಡಿ.ಸುಧಾಕರ್ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ವಿದ್ಯಾರ್ಥಿ ಜೀವನ ಅತಿಮುಖ್ಯವಾಗಿದ್ದು ಕೃಷಿ, ತೋಟಗಾರಿಕೆಗೆ ಸಂಬಂಧಿಸಿದ ಕೋರ್ಸ್‌ಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿದ್ದು ಪ್ರತಿಯೊಬ್ಬರು ಇದರ ಸದುಪಯೋಗ ಪಡೆದು ಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ನಗರದ ತುಳಸಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಶಿವಮೊಗ್ಗ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕಾ ಮಹಾವಿದ್ಯಾಲಯ ಹಾಗೂ ಶಾಲಾ ಶಿಕ್ಷಣ ಇಲಾಖೆಯ ನೇತೃತ್ವದಲ್ಲಿ ಆಯೋಜಿಸಿದ್ದ ಕೃಷಿ ಶಿಕ್ಷಣ ಸುಗ್ಗಿ 2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಭಾಗದ ರೈತರ ಮಕ್ಕಳಿಗೆ ಹೆಚ್ಚು ಅನುಕೂಲವಾಗುವ ನಿಟ್ಟಿನಲ್ಲಿ 2010ರಲ್ಲಿ ತೋಟಗಾರಿಕೆ ಕಾಲೇಜು ಪ್ರಾರಂಭಿಸಿದ್ದು ನನ್ನ ಒತ್ತಾಸೆಯಿಂದ ಈ ಕಾಲೇಜಿನಲ್ಲಿ 2024 ರಿಂದ ಬಿಎಸ್‌ಸಿ ಕೃಷಿ ಪದವಿ ಕೋರ್ಸ್ ಆರಂಭವಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಈಗಾಗಲೇ ಕಾಲೇಜಿನ ಅಭಿವೃದ್ದಿಗೆ 50 ಲಕ್ಷ ರು. ಅನುದಾನ ನೀಡಿದ್ದು ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ. ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿದ್ದು ಕೃಷಿ ಜ್ಞಾನದ ಜತೆಗೆ ಕ್ರೀಡಾ ಸ್ಪೂರ್ತಿ ಹೆಚ್ಚಿಸಲು ಅತ್ಯಂತ ಸಹಕಾರಿಯಾಗಿದೆ ಎಂದರು.

ಶಿವಮೊಗ್ಗ ಕೃಷಿ ತೋಟಗಾರಿಕೆ ವಿವಿ ಕುಲಪತಿ ಡಾ.ಆರ್.ಸಿ.ಜಗದೀಶ್ ಮಾತನಾಡಿ, ಪಿಯುಸಿ ನಂತರ ಕೃಷಿ ಓದಿನಲ್ಲಿರುವ ಅವಕಾಶಗಳು, ರಾಷ್ಟ್ರ ಮಟ್ಟದಲ್ಲಿನ ಕೃಷಿ ಪದವಿ ಓದಲು ಇರುವ ಅವಕಾಶಗಳು, ಕೃಷಿ ಕೋಟಾದಲ್ಲಿ ಮೀಸಲಾದ ಪದವಿ ಅವಕಾಶಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದರು.

ಡಾ.ಪಿ.ಕೆ.ಬಸವರಾಜ ಮಾತನಾಡಿ, ವಿಶೇಷವಾಗಿ ಗ್ರಾಮೀಣ ಭಾಗದ ಮಕ್ಕಳಿಗೆ ಕೃಷಿ, ತೋಟಗಾರಿಕೆ ವಿಷಯಗಳ ಜತೆಗೆ ಸಿಯುಇಟಿ ರಾಷ್ಟ್ರ ಮಟ್ಟದ ಪ್ರವೇಶ ಪರೀಕ್ಷೆ ಬಗ್ಗೆ ಸೂಕ್ತ ಮಾಹಿತಿ ನೀಡಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಈ ವೇಳೆ ವಿವಿಧ ಕಾಲೇಜುಗಳಿಂದ ಸುಮಾರು 1200 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಸುರೇಶ್ ಡಿ.ಏಕಬೋಟೆ, ಕೆಶಿನಾಕೃತೋವಿವಿ ಆಡಳಿತ ಮಂಡಳಿ ಸದಸ್ಯ ಡಾ.ಬಿ.ಕೆ.ಕುಮಾರಸ್ವಾಮಿ, ಕುಲಸಚಿವ ಡಾ.ಕೆ.ಸಿ.ಶಶಿಧರ್, ಪಿಯು ಉಪನಿರ್ದೇಶಕ ಕೆ.ತಿಮ್ಮಯ್ಯ, ಸಹಪ್ರಾಧ್ಯಾಪಕ ಡಾ.ರವೀಶ್.ಎಸ್, ಡಾ.ಪ್ರೀತಿ ಮುಂತಾದವರು ಹಾಜರಿದ್ದರು.

PREV