ಕುಷ್ಟಗಿ: ಮಳೆಗಾಲ ಶುರುವಾದರೆ ಸಾಕು ತಾಲೂಕಿನ ರ್ಯಾವಣಕಿ ಹಾಗೂ ಜಾಲಿಹಾಳ ಗ್ರಾಮಸ್ಥರ ಪಾಡು ಹೇಳ ತೀರದಾಗಿದೆ.
ಹಲವು ದಶಕಗಳ ಸಮಸ್ಯೆ:ಮಳೆ ಬಂದ ಸಂದರ್ಭದಲ್ಲಿ ಜಾಲಿಹಾಳ ಹಾಗೂ ರ್ಯಾವಣಕಿ ಗ್ರಾಮಸ್ಥರು ಹಲವು ದಶಕಗಳಿಂದ ಈ ಸಮಸ್ಯೆ ಎದುರಿಸುತ್ತಿದ್ದು, ಇಲ್ಲಿಯವರೆಗೆ ಆಯ್ಕೆಯಾದ ಶಾಸಕರು ಹಾಗೂ ಸಂಸದರ ಗಮನಕ್ಕೆ ಇದ್ದರೂ ಈ ಕುರಿತು ಸೂಕ್ತ ಕ್ರಮಕ್ಕೆ ಮುಂದಾಗಿಲ್ಲ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
ಹಳ್ಳ ಬಂತೆಂದರೆ ಸಾಕು ರ್ಯಾವಣಕಿ ಗ್ರಾಮಸ್ಥರು ಜಾಲಿಹಾಳ ಗ್ರಾಮಕ್ಕೆ ಬರಲು ಸಾಧ್ಯವಾಗುವುದಿಲ್ಲ. ಸೇತುವೆ ನಿರ್ಮಾಣದ ಮೂಲಕ ನಿವಾಸಿಗಳ ಸಮಸ್ಯೆ ಇತ್ಯರ್ಥಗೊಳಿಸಲು ಸರ್ಕಾರ ಮುಂದಾಗಬೇಕಿದೆ.ಸಂಚಾರಕ್ಕೆ ಸಂಕಷ್ಟ:ಹಳ್ಳ ಬಂದ ಸಂದರ್ಭದಲ್ಲಿ ರ್ಯಾವಣಕಿ ಗ್ರಾಮದಲ್ಲಿ ಐದನೇ ತರಗತಿ ವರೆಗೆ ಶಿಕ್ಷಣ ವ್ಯವಸ್ಥೆಯಿದ್ದು, ಮುಂದಿನ ತರಗತಿಗೆ ದೋಟಿಹಾಳ ಹಾಗೂ ಶಿರಗುಂಪಿ ಗ್ರಾಮ ಆಶ್ರಯಿಸಿದ್ದಾರೆ. ಮಳೆ ಬಂದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಹಾಗೂ ರೈತರು ಮತ್ತು ಸಾರ್ವಜನಿಕರು ದೋಟಿಹಾಳ ಹಾಗೂ ಶಿರಗುಂಪಿ ಗ್ರಾಮಕ್ಕೆ ತೆರಳಲು ಜೀವ ಕೈಯಲ್ಲಿ ಹಿಡಿದು ಹಳ್ಳ ದಾಟಿ ಸಂಚಾರ ಮಾಡುವುದು ಅನಿವಾರ್ಯವಾಗಿದ್ದು, ಇದು ಕಷ್ಟದಾಯಕ ಸಂಚಾರವಾಗಿದೆ.
ಬುಧವಾರ ಹಾಗೂ ಶುಕ್ರವಾರ ರಾತ್ರಿ ಭಾರಿ ಮಳೆಯಾಗಿರುವ ಪರಿಣಾಮ ಹಳ್ಳ ರಸ್ತೆ ತುಂಬಾ ಹರಿಯಿತು. ಈ ವೇಳೆ ವಿದ್ಯಾರ್ಥಿಗಳ ಸಂಚಾರಕ್ಕೆ ಪರದಾಡಬೇಕಾಯಿತು. ಐದಾರು ವಿದ್ಯಾರ್ಥಿಗಳು ಒಟ್ಟಿಗೆ ಕೈಕೈ ಹಿಡಿದುಕೊಂಡು ಕಾಲ್ನಡಿಗೆ ಮೂಲಕ ಸಂಚರಿಸಿದರು ಎಂದು ಗ್ರಾಮಸ್ಥರು ತಿಳಿಸಿದರು.ನಮ್ಮ ಗ್ರಾಮಕ್ಕೆ ಸೇತುವೆ ನಿರ್ಮಿಸಿಕೊಡುವಂತೆ ಹಲವು ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದಿದ್ದರೂ ಸಹಿತ ಸೇತುವೆ ನಿರ್ಮಾಣಕ್ಕಾಗಿ ಮುಂದಾಗುತ್ತಿಲ್ಲ, ಮಳೆ ಬಂದ ಸಮಯದಲ್ಲಿ ಹಳ್ಳ ತುಂಬಿ ಹರಿಯುತ್ತದೆ. ಈ ವೇಳೆ ಸಂಚಾರ ದುಸ್ತರವಾಗಲಿದೆ. ಇದರಿಂದ ಶಾಲಾ ವಿದ್ಯಾರ್ಥಿಗಳು ಹಾಗೂ ರೈತಾಪಿ ಜನರಿಗೂ ಕಷ್ಟವಾಗುತ್ತದೆ ಎಂದು ಗ್ರಾಮದ ಯುವಕ ನಾಗರಾಜ ರ್ಯಾವಣಕಿ ಹೇಳಿದ್ದಾರೆ.
ಜಾಲಿಹಾಳ ಹಾಗೂ ರ್ಯಾವಣಕಿ ನಡುವಿನ ಹಳ್ಳದ ಸಮಸ್ಯೆ ನಮ್ಮ ಗಮನಕ್ಕೆ ಇದ್ದು, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಅನುದಾನಡಿಯಲ್ಲಿ ಮಂಜೂರು ಮಾಡಿಸುವ ಮೂಲಕ ಸೇತುವೆ ನಿರ್ಮಾಣಕ್ಕೆ ಕ್ರಮಕೈಗೊಳ್ಳುತ್ತೇನೆ ಎಂದು ಕುಷ್ಟಗಿ ಶಾಸಕರು ದೊಡ್ಡನಗೌಡ ಪಾಟೀಲ ತಿಳಿಸಿದ್ದಾರೆ.