ತೆರೆದ ಏರಿ ಬದಲು ಮುಚ್ಚಿದ ನಾಲೆ ನಿರ್ಮಿಸಿ: ಒತ್ತಾಯ

KannadaprabhaNewsNetwork | Published : Oct 5, 2024 1:36 AM

ಸಾರಾಂಶ

ತಾಲೂಕಿನ ಕಂಚಾಘಟ್ಟ ಮತ್ತು ಮಾದೀಹಳ್ಳಿ ಗ್ರಾಮದ ಮೂಲಕ ಹಾಯ್ದು ಹೋಗುವ ಎತ್ತಿನಹೊಳೆ ಯೋಜನೆಯ ತೆರೆದ ಏರಿ ನಾಲೆಯ ಬದಲಾಗಿ ಸಿಮೆಂಟ್ ಛಾವಣಿ ಮಾಡಿ ಮುಚ್ಚಿದ ನಾಲೆಯನ್ನು ಮಾಡಿಕೊಡಲು ಕಂಚಾಘಟ್ಟ ಮತ್ತು ಮಾದೀಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತಿಪಟೂರು

ತಾಲೂಕಿನ ಕಂಚಾಘಟ್ಟ ಮತ್ತು ಮಾದೀಹಳ್ಳಿ ಗ್ರಾಮದ ಮೂಲಕ ಹಾಯ್ದು ಹೋಗುವ ಎತ್ತಿನಹೊಳೆ ಯೋಜನೆಯ ತೆರೆದ ಏರಿ ನಾಲೆಯ ಬದಲಾಗಿ ಸಿಮೆಂಟ್ ಛಾವಣಿ ಮಾಡಿ ಮುಚ್ಚಿದ ನಾಲೆಯನ್ನು ಮಾಡಿಕೊಡಲು ಕಂಚಾಘಟ್ಟ ಮತ್ತು ಮಾದೀಹಳ್ಳಿ ಗ್ರಾಮಸ್ಥರು ಜಿಲ್ಲೆಯ ಸಂಸದರು ಹಾಗೂ ಕೇಂದ್ರ ಸಚಿವ ಸೋಮಣ್ಣನವರು, ಶಾಸಕ ಕೆ. ಷಡಕ್ಷರಿಯವರು ಮತ್ತು ವಿಶ್ವೇಶ್ವರಯ್ಯ ಜಲನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದ್ದಾರೆ. ಈ ಬಗ್ಗೆ ಪತ್ರಿಕೆ ಜೊತೆ ಸಂಬಂಧಿಸಿದ ಪತ್ರಗಳ ಬಗ್ಗೆ ಮಾತನಾಡಿದ ಗ್ರಾಮಸ್ಥರು, ನಮ್ಮ ಗ್ರಾಮಗಳ ಜಮೀನುಗಳಲ್ಲಿ ಎತ್ತಿನಹೊಳೆಯ ತೆರೆದ ನಾಲೆಯು ಹಾಯ್ದು ಹೋಗುತ್ತಿದ್ದು ಸಂಬಂದಿಸಿದ ಜಮೀನುಗಳ ಮಾಲೀಕರುಗಳಿಗೆ ಭೂ ಸ್ವಾದೀನದ ಪರಿಹಾರ ಅವಾರ್ಡ್ ನೋಟೀಸನ್ನು ವಿತರಿಸಲಾಗಿದೆ. ಸದರಿ ಎತ್ತಿನಹೊಳೆ ಯೋಜನೆಯ ನಾಲೆಯನ್ನು ತೆರೆದ ಏರಿನಾಲೆ ರೂಪದಲ್ಲಿ ಮಾಡಲಾಗವುದೆಂಬ ವಿಷಯ ತಿಳಿದು ಬಂದಿರುತ್ತದೆ. ಎತ್ತಿನಹೊಳೆ ತೆರೆದ ನಾಲೆಯು ಹಾಯ್ದು ಹೋಗುವ ಪ್ರದೇಶದಲ್ಲಿ ಗ್ರಾಮಗಳ ಜನರ ತೋಟ, ಹೊಲಗಳು ಸೇರಿದಂತೆ ಶಾಲೆ, ಅಂಗನವಾಡಿಗಳು ಇದ್ದು ನಾಲೆಯ ಎರಡು ಭಾಗಗಳಲ್ಲಿ ಈಗಾಗಲೆ ಲೇ ಔಟ್‌ಗಳು ಮತ್ತು ವಸತಿ ಗೃಹಗಳು ನಿರ್ಮಾಣವಾಗಿರುತ್ತವೆ. ಮುಖ್ಯವಾಗಿ ನಮ್ಮ ಗ್ರಾಮಗಳ ಹಾಗೂ ನೂತನ ಲೇಔಟ್‌ಗಳಲ್ಲಿ ನಿರ್ಮಾಣವಾಗಿರುವ ಮನೆಗಳ ಜನ, ಜಾನುವಾರುಗಳು ಸಹ ನಾಲೆ ಅಕ್ಕಪಕ್ಕದಲ್ಲೇ ಯಾವಾಗಲೂ ಓಡಾಡಬೇಕಾಗಿದ್ದು ಅನಿವಾರ್ಯ ಕಾರಣಗಳಿಂದ ಪ್ರಾಣಹಾನಿಯಾಗುವ ಸಂಭವವು ಹೆಚ್ಚಾಗಿರುತ್ತದೆ. ಇದಲ್ಲದೆ ನಮ್ಮ ಗ್ರಾಮಗಳು ತಿಪಟೂರು ನಗರಕ್ಕೆ ಹೊಂದಿಕೊಂಡಿದ್ದು ವಾಹನ ಸಂಚಾರ ಸಹ ದಟ್ಟವಾಗಿರುವುದರಿಂದ ಮುಂದೆ ತೊಂದರೆಯಾಗಲಿದೆ. ಸದರಿ ಯೋಜನೆಯ ನಾಲೆಯು ನಮ್ಮ ಗ್ರಾಮಗಳಿಂದ ಮುಂದಿನ ಗ್ರಾಮವಾದ ಹಳೇಪಾಳ್ಯ ಗ್ರಾಮದ ಮೂಲಕ ಹಾಯ್ದು ಹೋಗುತ್ತಿದ್ದು ನಮ್ಮ ಗ್ರಾಮಗಳ ರೀತಿಯೇ ಅಲ್ಲಿಯೂ ತೊಂದರೆಯಾಗುವುದನ್ನ ಮನಗಂಡ ಇಲಾಖೆ ಅಲ್ಲಿ ಮಾತ್ರ ಈಗಾಗಲೇ ತೆರೆದ ನಾಲೆಯ ಬದಲಾಗಿ ಸಿಮೆಂಟಿನ ಛಾವಣಿ ಮಾಡಿ ಮುಚ್ಚಿದ ನಾಲೆಯನ್ನು ಮಾಡಲಾಗುತ್ತಿದೆ. ಆದರೆ ನಮ್ಮ ಗ್ರಾಮಗಳನ್ನು ವಿಶ್ವೇಶ್ವರಯ್ಯ ಜಲ ನಿಗಮ ಇಲಾಖೆಯು ನಿರ್ಲಕ್ಷ್ಯ ಮಾಡಿರುವುದರಿಂದ ನಮ್ಮ ಗ್ರಾಮಗಳಾದ ಕಂಚಾಘಟ್ಟ ಮತ್ತು ಮಾದಿಹಳ್ಳಿ ಗ್ರಾಮಗಳ ಪ್ರದೇಶದಲ್ಲಿಯೂ ಮುಚ್ಚಿದ ನಾಲೆಯನ್ನು ಮಾಡಬೇಕೆಂದು ಸರ್ಕಾರ ಮತ್ತು ಜಲ ನಿಗಮವನ್ನು ಒತ್ತಾಯಿಸಿ ಮಾಡಿಸಿ ಕೊಡಬೇಕೆಂದು ಜನಪ್ರತಿನಿದಿಗಳು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಕೇಂದ್ರ ಸಚಿವ ಸೋಮಣ್ಣ ಸೂಚನೆ : ಗ್ರಾಮಸ್ಥರು ನೀಡಿರುವ ಮನವಿಯನ್ನು ಪರಿಗಣಿಸಿರುವ ಕೇಂದ್ರ ರೈಲ್ವೆ ಮತ್ತು ರಾಜ್ಯ ಸಚಿವರಾದ ವಿ. ಸೋಮಣ್ಣನವರು ಹಾಗೂ ಇಲ್ಲಿನ ಶಾಸಕ ಕೆ. ಷಡಕ್ಷರಿಯವರು ಎರಡೂ ಗ್ರಾಮಗಳ ಗ್ರಾಮಸ್ಥರ ಮನವಿಯಂತೆ, ಕಂಚಾಘಟ್ಟ ಮತ್ತು ಮಾದಿಹಳ್ಳಿ ಗ್ರಾಮಗಳಲ್ಲಿ ಹಾಯ್ದು ಹೋಗುವ ತೆರೆದ ನಾಲೆಗೆ ಸಿಮೆಂಟ್ ಛಾವಣಿ ಒದಗಿಸಿ ಮುಚ್ಚಿದ ನಾಲೆಯನ್ನು ಮಾಡುವಂತೆ ಸರ್ಕಾರ ಹಾಗೂ ನೀರಾವರಿ ಸಚಿವರೂ ಆಗಿರುವ ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್‌ರವರಿಗೆ ಪತ್ರ ಬರೆದು ಗಮನ ಸೆಳೆದು ಒತ್ತಾಯಿಸಿದ್ದಾರೆ.

Share this article