ತಾಲೂಕಿಗೊಂದು ರಂಗಮಂದಿರ ನಿರ್ಮಿಸಿ

KannadaprabhaNewsNetwork | Published : May 14, 2024 1:00 AM

ಸಾರಾಂಶ

ಹೊಸಕೋಟೆ: ಅಕಾಲಿಕ ಮಳೆಯಿಂದ ನಾಟಕಗಳ ಪ್ರದರ್ಶನಕ್ಕೆ ಅಡ್ಡಿಯಾಗುತ್ತಿದ್ದು ಕಲಾವಿದರಿಗೆ ಲಕ್ಷಾಂತರ ರುಪಾಯಿ ನಷ್ಟವಾಗುತ್ತಿದ್ದು ಪ್ರತಿ ತಾಲೂಕಿನಲ್ಲಿ ರಂಗಮಂದಿರ ನಿರ್ಮಿಸಬೇಕೆಂದು ದೊಡ್ಡಗಟ್ಟಿಗನಬ್ಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ತಿಳಿಸಿದರು.

ಹೊಸಕೋಟೆ: ಅಕಾಲಿಕ ಮಳೆಯಿಂದ ನಾಟಕಗಳ ಪ್ರದರ್ಶನಕ್ಕೆ ಅಡ್ಡಿಯಾಗುತ್ತಿದ್ದು ಕಲಾವಿದರಿಗೆ ಲಕ್ಷಾಂತರ ರುಪಾಯಿ ನಷ್ಟವಾಗುತ್ತಿದ್ದು ಪ್ರತಿ ತಾಲೂಕಿನಲ್ಲಿ ರಂಗಮಂದಿರ ನಿರ್ಮಿಸಬೇಕೆಂದು ದೊಡ್ಡಗಟ್ಟಿಗನಬ್ಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ತಿಳಿಸಿದರು.

ತಾಲೂಕಿನ ಪೂಜೇನ ಅಗ್ರಹಾರ ಗ್ರಾಮದಲ್ಲಿ ರೇಣುಕಾ ಯಲ್ಲಮ್ಮದೇವಿ ನಾಟಕ ಮಂಡಳಿ ಹಮ್ಮಿಕೊಂಡಿದ್ದ ಕುರುಕ್ಷೇತ್ರ ಪೌರಾಣಿಕ ನಾಟಕ ಸಮಾರಂಭದಲ್ಲಿ ಮಾತನಾಡಿದ ಅವರು, ಆಧುನಿಕತೆಯ ಪರಿಣಾಮದಿಂದ ರಂಗಭೂಮಿ ಕಲೆ ಅವನತಿಯಂಚಿನಲ್ಲಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಯುವಕರ ಚಿತ್ತ ರಂಗಭೂಮಿಯತ್ತ ನಾಟಿದ್ದು ನಾಟಕ ಪ್ರದರ್ಶನಕ್ಕೆ 3 ಲಕ್ಷಕ್ಕೂ ಹೆಚ್ಚು ವೆಚ್ಚ ತಗಲುತಿದೆ. ಅಕಾಲಿಕ ಮಳೆ ಬಂದರೆ ಸಾಕಷ್ಟು ನಷ್ಟ ಉಂಟಾಗುತಿದ್ದು ಇದನ್ನು ತಪ್ಪಿಸಲು ಪ್ರತಿ ತಾಲೂಕಿಗೊಂದು ರಂಗಮಂದಿರ ನಿರ್ಮಾಣವಾದರೆ ನಾಟಕ ಪ್ರದರ್ಶನ ಯಾವುದೆ ಅಡಚಣೆಯಿಲ್ಲದೆ ಸಾಗುವುದಲ್ಲದೆ ವೆಚ್ಚಗಳು ಕೂಡ ಕಡಿಮೆಯಾಗುತ್ತದೆ ಎಂದರು.

ತಾಲೂಕು ಕಲಾವಿದರ ಸಂಘದ ನಿರ್ದೇಶಕ ನಟರಾಜ್ ಮಾತನಾಡಿ, ತಾಲೂಕಿನಲ್ಲಿ 2380ಕ್ಕೂ ಹೆಚ್ಚು ನೋಂದಾಯಿತ ಹವ್ಯಾಸಿ ಮತ್ತು ವೃತ್ತಿ ನೋಂದಾಯಿತ ಕಲಾವಿದರಿದ್ದು 120ಕ್ಕೂ ಹೆಚ್ಚು ರಂಗಭೂಮಿ ನಾಟಕ ತಂಡಗಳು 20 ನಿರ್ದೇಶಕರು ಹಾಗೂ 10 ಜನ ಮಹಿಳಾ ವೃತ್ತಿ ಕಲಾವಿದರು ಸೇರಿದಂತೆ 50ಕ್ಕೂ ಹೆಚ್ಚು ಸಂಗೀತ ನಿರ್ದೇಶಕರಿದ್ದಾರೆ. ಆದರೆ ತಾಲೂಕಿನಲ್ಲಿ ಒಂದೂ ರಂಗಮಂದಿರ ಇಲ್ಲವಾಗಿದೆ. ರಾತ್ರಿ ವೇಳೆ ನಿದ್ದೆಗೆಟ್ಟು ನಾಟಕ ವೀಕ್ಷಿಸಲು ಪ್ರೇಕ್ಷಕರ ಕೊರತೆಯೂ ಇದೆ. ಆದ್ದರಿಂದ ನಗರಸಭೆಯಾಗಲಿ ಅಥವಾ ಸರ್ಕಾರವಾಗಲಿ ಸುಸಜ್ಜಿತ ರಂಗಮಂದಿರ ನಿರ್ಮಿಸಿದರೆ ನಿರಾತಂಕವಾಗಿ ಇನ್ನೂ ಹೆಚ್ಚಿನ ಪ್ರದರ್ಶನಕ್ಕೆ ಅನುಕೂಲವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಕರುಣೆಯ ಗೋಡೆ ರಾಜ್ಯಾಧ್ಯಕ್ಷ ಚೇತನ್, ಹೋರಾಟಗಾರ ಗಿಡ್ಡಪ್ಪನಹಳ್ಳಿ ದೇವರಾಜ್, ಗ್ರಾಪಂ ಮಾಜಿ ಅಧ್ಯಕ್ಷ ಎಸ್‌ಟಿಬಿ ಮುನಿರಾಜು ಇತರರಿದ್ದರು.

13 ಹೆಚ್‌ಎಸ್‌ಕೆ 1

ಹೊಸಕೋಟೆ ತಾಲೂಕಿನ ಪೂಜೇನ ಅಗ್ರಹಾರದಲ್ಲಿ ಕುರುಕ್ಷೇತ್ರ ನಾಟಕ ಸಮಾರಂಭದಲ್ಲಿ ಹಿರಿಯ ಕಲಾವಿದರು ಗ್ರಾಪಂ ಅಧ್ಯಕ್ಷ ಸುರೇಶ್ ಮತ್ತು ಇತರರನ್ನು ಸನ್ಮಾನಿಸಲಾಯಿತು.

Share this article