ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಇಲ್ಲಿನ ವಿದ್ಯಾ ಪ್ರಸಾರಕ ಮಂಡಳದ ಎಸ್. ಆರ್. ನರಸಾಪೂರ ಕಲಾ ಮತ್ತು ಎಂ.ಬಿ. ಶಿರೂರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬುಧವಾರ ನಡೆದ ಕಾಲೇಜಿನ 43ನೇ ವಾರ್ಷಿಕೋತ್ಸವ ಮತ್ತು ಅಂತಿಮ ವರ್ಷದ ಬಿಎ ಹಾಗೂ ಬಿಕಾಂ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಾನವೀಯತೆ, ಪ್ರಾಮಾಣಿಕತೆ, ಸಹನೆ, ಕರುಣೆ ಮುಂತಾದ ಜೀವನ ಮೌಲ್ಯಗಳು ಇಲ್ಲದೆ ಹೋದಲ್ಲಿ ಮನುಷ್ಯ ಮತ್ತು ಪ್ರಾಣಿಗಳಿಗೆ ವ್ಯತ್ಯಾಸವೇ ಇರುವುದಿಲ್ಲ. ಆದ್ದರಿಂದ ಮನುಷ್ಯ ಪರರಿಗೆ ಉಪಕಾರ ಮಾಡುವ ನಿಟ್ಟಿನಲ್ಲಿ ಬದುಕಬೇಕು. ಗಾಂಧೀಜಿ, ಶಾಸ್ತ್ರೀಜಿ, ವಿಶ್ವೇಶ್ವರಯ್ಯ, ಅಬ್ರಾಹಿಂ ಲಿಂಕನ್ ಮುಂತಾದವರ ದೃಷ್ಟಾಂತ ನೀಡುವ ಮೂಲಕ ಅವರು ಅಳವಡಿಸಿಕೊಂಡಿದ್ದ ಜೀವನ ಮೌಲ್ಯಗಳಿಂದ ಜನತೆ ಅಂತವರನ್ನು ಜನರು ಈಗಲೂ ಸ್ಮರಿಸುತ್ತಾರೆ. ಜೀವನ ಕ್ರಿಯಾಶೀಲವಾಗಿದ್ದು, ನಕಾರಾತ್ಮಕ ವಿಚಾರಗಳಿಂದ ದೂರವಿರಬೇಕು ಎಂದು ಹೇಳಿದರು.ಸಾಮಾಜಿಕ ಜಾಲತಾಣಗಳು ಬದುಕನ್ನು ಸುಗಮಗೊಳಿಸಿರಬಹುದು. ಆದರೆ ಸಂಕೀರ್ಣತೆ ಹೆಚ್ಚಾಗಿ ಜೀವನ ಮೌಲ್ಯಗಳನ್ನು ಮರೆಯುತ್ತಿದ್ದೇವೆ ಎಂದು ವಿಷಾದಿಸಿದ ಅವರು, ವಿದ್ಯಾರ್ಥಿಗಳು ಕನ್ನಡ ಭಾಷೆ, ನಾಡು-ನುಡಿಯ ಬಗೆಗೂ ಆಸಕ್ತಿ ಮತ್ತು ಅಭಿಮಾನ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.
ಪದವಿ ನಂತರ ವಿದ್ಯಾರ್ಥಿಗಳ ಜವಾಬ್ದಾರಿ ಇನ್ನಷ್ಟು ಹೆಚ್ಚಲಿದೆ. ಆಗ ಇಲ್ಲಿ ಪಡೆದ ಜ್ಞಾನ, ಕಲಿಕಾ ಅನುಭವಗಳು ನೆರವಿಗೆ ಬರಬಹುದು. ಸಂಸ್ಥೆಯ ಮೌಲ್ಯಗಳನ್ನು ಎತ್ತಿ ಹಿಡಿದು, ಒಳ್ಳೆಯ ನಾಗರಿಕರಾಗಿ ಸಮಾಜಕ್ಕೆ ಸೇವೆ ಸಲ್ಲಿಸುವಂತೆ ತಿಳಿಸಿದರು.
ಸಂಯೋಜಕ ಡಾ.ಎಸ್.ಎಸ್.ಹಂಗರಗಿ ವರದಿವಾಚನ ಮಾಡಿದರು. ಉಪನ್ಯಾಸಕ ಎಂ.ಡಿ.ಕೋರವಾರ ಪರಿಚಯಿಸಿದರು. ಉಪನ್ಯಾಸಕ ಕೆ.ಜಿ. ಲಮಾಣಿ ನಿರೂಪಿಸಿದರು. ವಿದ್ಯಾರ್ಥಿ ಪ್ರಧಾನ ಕಾರ್ಯದರ್ಶಿ ದಿಲ್ಶಾದ ನದಾಫ ವಂದಿಸಿದರು.