ಕನ್ನಡಪ್ರಭ ವಾರ್ತೆ ವಿಜಯಪುರ

2026ರ ನಾನಾ ರಾಷ್ಟ್ರೀಯ ಶ್ರೇಯಾಂಕಗಳಲ್ಲಿ ಗಮನಾರ್ಹ ಸಾಧನೆ ದಾಖಲಿಸುವ ಮೂಲಕ ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯ ದೇಶದ ಪ್ರಮುಖ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ. ಈ ಸಾಧನೆ ವಿಶ್ವವಿದ್ಯಾಲಯದ ಶೈಕ್ಷಣಿಕ ಗುಣಮಟ್ಟ, ಅತ್ಯುತ್ತಮ ಬೋಧನೆ ಮತ್ತು ಕಲಿಕೆ, ಸಂಶೋಧನೆ ಹಾಗೂ ನಾವೀನ್ಯತೆ, ಆರೋಗ್ಯ ಸೇವೆಗಳು, ಕ್ಲಿನಿಕಲ್ ತರಬೇತಿ, ಆಧುನಿಕ ಮೂಲಸೌಕರ್ಯ ಹಾಗೂ ವಿದ್ಯಾರ್ಥಿ-ಕೇಂದ್ರಿತ ಶಿಕ್ಷಣದತ್ತ ಇರುವ ಬದ್ಧತೆ ಪ್ರತಿಬಿಂಬಿಸುತ್ತದೆ.

ರಾಷ್ಟ್ರೀಯ ಮಾಧ್ಯಮ ಶ್ರೇಯಾಂಕಗಳು 2026: 2026ರ ರಾಷ್ಟ್ರೀಯ ಶ್ರೇಯಾಂಕಗಳಲ್ಲಿ ಬಿ.ಎಲ್‌.ಡಿ.ಇ ವಿಶ್ವವಿದ್ಯಾಲಯ ಇಂಡಿಯಾ ಟುಡೇ-ಎಂ.ಡಿ.ಆರ್‌.ಎ ಶ್ರೇಯಾಂಕದಲ್ಲಿ 15ನೇ ಸ್ಥಾನ, ಔಟ್‌ಲುಕ್-ಐಕೇರ್ ಶ್ರೇಯಾಂಕದಲ್ಲಿ 10ನೇ ಸ್ಥಾನ, ಹಾಗೂ ದಿ ವೀಕ್-ಹನ್ಸಾ ಶ್ರೇಯಾಂಕದಲ್ಲಿ 5ನೇ ಸ್ಥಾನ ಪಡೆದಿದೆ. ವಿಶ್ವವಿದ್ಯಾಲಯದ ಶ್ರೀ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು ಸಹ ಉತ್ತಮ ಸಾಧನೆ ಮಾಡಿದ್ದು, ಔಟ್‌ಲುಕ್-ಐಕೇರ್‌ ಶ್ರೇಯಾಂಕದಲ್ಲಿ 9ನೇ ಸ್ಥಾನ ಹಾಗೂ ದಿ ವೀಕ್-ಹನ್ಸಾ ಶ್ರೇಯಾಂಕದಲ್ಲಿ 17ನೇ ಸ್ಥಾನ ಗಳಿಸಿದೆ. ಔಟ್‌ಲುಕ್-ಐಕೇರ್‌ ರಾಷ್ಟ್ರೀಯ ಶ್ರೇಯಾಂಕದಲ್ಲಿ, ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ ಭಾರತದ ಅಗ್ರ 20 ಕಾಲೇಜುಗಳಲ್ಲಿ 4ನೇ ಸ್ಥಾನ ಪಡೆದುಕೊಂಡಿದೆ. ಶ್ರೀ ಸಂಗನಬಸವ ಮಹಾಸ್ವಾಮೀಜಿ ಫಾರ್ಮಸಿ ಕಾಲೇಜು ಭಾರತದ ಅಗ್ರ 20 ಕಾಲೇಜುಗಳಲ್ಲಿ 2ನೇ ಸ್ಥಾನ ಪಡೆದಿದೆ.

ಐಐಆರ್‌ಎಫ್ 2026: ಅಂತಾರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ-2026ರಲ್ಲಿ ಬಿ.ಎಲ್‌.ಡಿ.ಇ ವಿಶ್ವವಿದ್ಯಾಲಯ ರಾಷ್ಟ್ರೀಯ ಮಟ್ಟದಲ್ಲಿ 65ನೇ ಸ್ಥಾನ, ಖಾಸಗಿ ವಿಶ್ವವಿದ್ಯಾಲಯಗಳ ಪೈಕಿ 45ನೇ ಸ್ಥಾನ‌ ಹಾಗೂ ಕರ್ನಾಟಕದಲ್ಲಿ 7ನೇ ಸ್ಥಾನ ಗಳಿಸಿದೆ. ಶ್ರೀ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು ರಾಷ್ಟ್ರೀಯ ಮಟ್ಟದಲ್ಲಿ 115ನೇ ಸ್ಥಾನ,‌ ರಾಜ್ಯದಲ್ಲಿ 29ನೇ ಸ್ಥಾನ ಮತ್ತು ದಕ್ಷಿಣ ಭಾರತದಲ್ಲಿ 70ನೇ ಸ್ಥಾನ ಪಡೆದಿದೆ. ಶ್ರೀ ಬಿ.ಎಂ.ಪಾಟೀಲ ನರ್ಸಿಂಗ್ ಕಾಲೇಜು ರಾಷ್ಟ್ರೀಯ ಮಟ್ಟದಲ್ಲಿ 50ನೇ ಸ್ಥಾನ, ರಾಜ್ಯದಲ್ಲಿ 11ನೇ ಸ್ಥಾನ ಮತ್ತು ದಕ್ಷಿಣ ಭಾರತದಲ್ಲಿ 30ನೇ ಸ್ಥಾನ ಗಳಿಸಿದೆ.

ರಾಷ್ಟ್ರೀಯ ಹಸಿರು ವಿಶ್ವವಿದ್ಯಾಲಯ ಶ್ರೇಯಾಂಕ 2026: 2026ರ ರಾಷ್ಟ್ರೀಯ ಹಸಿರು ವಿಶ್ವವಿದ್ಯಾಲಯ ಶ್ರೇಯಾಂಕದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿವಿ 7ನೇ ಸ್ಥಾನ ಪಡೆದಿದ್ದು, ವಿಶ್ವವಿದ್ಯಾಲಯ 100 ಅಂಕಗಳಲ್ಲಿ 93.6 ಅಂಕ ಗಳಿಸಿ ಪ್ರತಿಷ್ಠಿತ ಗೋಲ್ಡ್ ರೇಟಿಂಗ್ ತನ್ನದಾಗಿಸಿಕೊಂಡಿದೆ.


ಈ ಸಾಧನೆಗೆ ಬಿ.ಎಲ್‌.ಡಿ.ಇ ಸಂಸ್ಥೆ ಅಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಹಾಗೂ ಡೀಮ್ಡ್ ವಿವಿ ಕುಲಾಧಿಪತಿ ಬಿ.ಎಂ.ಪಾಟೀಲರು ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಮತ್ತು ಆಡಳಿತ ಸಿಬ್ಬಂದಿಗೆ ಅಭಿನಂದಿಸಿದ್ದಾರೆ.