ಹನುಮಸಾಗರ: ಶಿಕ್ಷಣದ ಬಗ್ಗೆ ಪಾಲಕರಲ್ಲಿ ಅಪಾರ ಕಾಳಜಿ ಮತ್ತು ಮಹತ್ವವಿದ್ದು, ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸಾಕಷ್ಟು ಶ್ರಮಿಸುತ್ತಿದ್ದಾರೆ. ಆ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಬೇಕಾದರೆ ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ಕಠಿಣ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿ ಜೀವನದಲ್ಲಿ ಉನ್ನತ ಸಾಧನೆ ಮಾಡಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ಪ್ರತಿಯೊಂದು ಸಮಾಜದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿದ್ದು, ಅವರಿಗೆ ಉತ್ತಮ ಶಿಕ್ಷಣದ ಅವಕಾಶ ಕಲ್ಪಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಮಗು ಶೈಕ್ಷಣಿಕವಾಗಿ ಬೆಳೆಯುವುದರಿಂದ ಅದರ ಭವಿಷ್ಯ ಮಾತ್ರವಲ್ಲ, ಸಮಾಜ ಮತ್ತು ದೇಶದ ಅಭಿವೃದ್ಧಿಗೂ ಕೊಡುಗೆ ನೀಡಲು ಸಾಧ್ಯವಾಗುತ್ತದೆ. ಹನುಮಸಾಗರ ಭಾಗದಲ್ಲಿ ಸರ್ಕಾರಿ ಪದವಿ (ಡಿಗ್ರಿ) ಕಾಲೇಜಿನ ಅವಶ್ಯಕತೆ ಹೆಚ್ಚಿದ್ದು, ಅದನ್ನು ಮಂಜೂರು ಮಾಡಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಡಿಡಿಪಿಯು ಜಗದೀಶ ಮಾತನಾಡಿ, ಸರ್ಕಾರಿ ಶಾಲೆ-ಕಾಲೇಜು ಸಾರ್ವಜನಿಕರು ತಮ್ಮ ಸ್ವಂತ ಆಸ್ತಿಯಂತೆ ಕಾಪಾಡಿಕೊಳ್ಳಬೇಕು. ದೇಶಸೇವೆ ಎನ್ನುವುದು ಕೇವಲ ದೊಡ್ಡ ಕೆಲಸಗಳಿಂದ ಮಾತ್ರವಲ್ಲ, ನಮ್ಮ ಸುತ್ತಲಿನ ಸರ್ಕಾರಿ ಆಸ್ತಿ ಸಂರಕ್ಷಿಸುವುದು ದೇಶಸೇವೆಯ ಒಂದು ಭಾಗವಾಗಿದೆ. ಮಕ್ಕಳಲ್ಲಿ ನಾಗರಿಕ ಪ್ರಜ್ಞೆ ಬೆಳೆಸುವುದು ಇಂದಿನ ಅಗತ್ಯವಾಗಿದೆ. ಕೊಪ್ಪಳ ಜಿಲ್ಲೆಯ ಪದವಿ ಪೂರ್ವ ಶಿಕ್ಷಣವು ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.ಕಾಲೇಜಿನ ಪ್ರಾಚಾರ್ಯ ಭೀಮಪ್ಪ ಗೊಲ್ಲರ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಕಾಲೇಜು ನಿರಂತರ ಪ್ರಗತಿ ಸಾಧಿಸುತ್ತಿದ್ದು, ಹಿಂದೆ ಇದ್ದ ಶ್ರೇಯಾಂಕಕ್ಕಿಂತ ಉತ್ತಮ ಸ್ಥಾನಕ್ಕೆ ಏರಿಕೆಯಾಗಿದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಪರಿಶ್ರಮದಿಂದ ಸಂಸ್ಥೆ ಉತ್ತಮ ಸಾಧನೆ ದಾಖಲಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಫಲಿತಾಂಶ ತರುವ ಗುರಿಯೊಂದಿಗೆ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದರು.