ಗಂಗಾವತಿ: ಮಾದಕ ದ್ರವ್ಯ ಸೇವನೆಯಿಂದ ಜೀವನ ಹಾಳಾಗುತ್ತದೆ ಎಂದು ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ವೆಂಕಟೇಶ ಚವ್ಹಾಣ ಹೇಳಿದರು.
ಮಾದಕ ದ್ರವ್ಯ ಸೇವನೆಯಿಂದ ಯುವಕರನ್ನು ತಪ್ಪು ದಾರಿಗೆ ತಳ್ಳುವ ಕೆಲವು ಘಟನೆ ನಡೆಯುತ್ತಿದ್ದು, ಅದರಿಂದ ದೂರವಿರಬೇಕು ಎಂದರು.
ಗ್ರಾಮೀಣ ಠಾಣೆಯಲ್ಲಿ ಹತ್ತು ಪ್ರಕರಣ ದಾಖಲಾಗಿ ಜೈಲು ಶಿಕ್ಷೆಯಾಗಿದೆ. ಇದರಿಂದ ಡ್ರಗ್ಸ್ ಸೇವನೆಯ ಯುವಕರು ಕುಟುಂಬ ಕೂಡ ತೊಂದರೆಗೆ ಸಿಲುಕಿಸಿ ವ್ಯಥೆಪಡುವ ಸಂಗತಿಗಳು ಜರುಗಿವೆ. ಭಾರತದಲ್ಲಿ ಎನ್ ಡಿ ಪಿ ಎಸ್ ಕಾಯ್ದೆ ಅಡಿಯಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಲಾಗುತ್ತದೆ.ಆದ್ದರಿಂದ ವಿದ್ಯಾರ್ಥಿಗಳು ಸಂಗೀತ, ಸಾಹಿತ್ಯ, ಆಟೋಟ ಮೂಲಕ ಆರೋಗ್ಯ ವೃದ್ಧಿಸಿಕೊಳ್ಳಬೇಕೆಂದು ತಿಳಿಸಿದರು.ಈ ಸಂದರ್ಭದಲ್ಲಿ ಹಾಜರಿದ್ದ ಗಂಗಾವತಿ ಗ್ರಾಮೀಣ ಠಾಣೆಯ ಪ್ರೋಫೆಷನರಿ ಪಿಎಸ್ಐ ಸುನಿತಾ ಮಾತನಾಡಿ, ಡ್ರಗ್ಸ್ ಪೀಡಿತರಿಂದ ಕೌಟುಂಬಿಕ ಕಲಹ ಜಾಸ್ತಿ ಆಗುತ್ತಿವೆ, ಸಮಾಜದಲ್ಲಿ ಕೆಟ್ಟ ವರ್ತನೆ ನಡೆದು ಗಂಭೀರ ಚಟವನ್ನಾಗಿ ಮಾಡಿಕೊಂಡು ಯುವಕರು ಹಾಳಾಗುತ್ತಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಮಾನಸ ಡಿ.ಎ. ಮಾತನಾಡಿ, ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರುವ ಬೇಡ ಬ್ರೋ ಎನ್ನುವ ಈ ಆಂದೋಲನ ಸರ್ಕಾರ ಪೊಲೀಸ್ ಇಲಾಖೆಯ ಮೂಲಕ ಅರ್ಥಪೂರ್ಣವಾಗಿ ಕೈಗೊಳ್ಳುತ್ತಿದೆ. ಓದು ಬರಹ ಆಟೋಗಳಿಗೆ ಹೆಚ್ಚಿನ ಆದ್ಯತೆ ಇರುವ ನಮ್ಮ ಮಹಾವಿದ್ಯಾಲಯ ಸ್ವಚ್ಛ ವಾತಾವರಣ ಕಲ್ಪಿಸಿದೆ. ಪರಿಶುದ್ಧ ಆರೋಗ್ಯ ನೀಡುವ ಮತ್ತು ಗುಣಮಟ್ಟದ ಶಿಕ್ಷಣ ನೀಡುತ್ತದೆ ಎಂದರು.