೨ ವಾರದ ನಂತರ ಬೆಳೆಯ ವಸ್ತು ಸ್ಥಿತಿ ಹಾಗೂ ಮಳೆಯ ಪ್ರಮಾಣ ಅರಿತುಕೊಂಡು ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಲಾಗುವುದು.
ಮುಂಡಗೋಡಕ್ಕೆ ಭೇಟಿ, ನಗರೋತ್ಥಾನ ಯೋಜನೆಯ ವಿವಿಧ ಕಾಮಗಾರಿ ಪರಿಶೀಲನೆ
ಕನ್ನಡಪ್ರಭ ವಾರ್ತೆ ಮುಂಡಗೋಡ
೨ ವಾರದ ನಂತರ ಬೆಳೆಯ ವಸ್ತು ಸ್ಥಿತಿ ಹಾಗೂ ಮಳೆಯ ಪ್ರಮಾಣ ಅರಿತುಕೊಂಡು ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಹೇಳಿದರು.
ಬುಧವಾರ ಪಟ್ಟಣಕ್ಕೆ ಭೇಟಿ ನೀಡಿ ಮಳೆ-ಬೆಳೆ ಸೇರಿದಂತೆ ವಿವಿಧ ವಿಷಯಗಳ ಪ್ರಗತಿ ಪರಿಶೀಲನೆ ನಡೆಸಿ ನಗರೋತ್ಥಾನ ಯೋಜನೆಯಡಿ ಕೈಗೊಂಡ ವಿವಿಧ ಕಾಮಗಾರಿ ಪರಿಶೀಲಿಸಿ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು.
ಪ್ರಸಕ್ತ ಸಾಲಿನಲ್ಲಿ ಮಳೆ ಕೊರತೆಯಾಗಿರುವುದರಿಂದ ಇಲ್ಲಿ ಬೆಳೆಯಲಾದ ಭತ್ತ, ಗೋವಿನ ಜೋಳ, ಶುಂಠಿ ಮುಂತಾದ ಬೆಳೆಗಳು ಕುಂಠಿತವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಗದ್ದೆಗಳೆಲ್ಲ ಹಸಿರಾಗಿಯೇ ಕಾಣುತ್ತಿರುವುದರಿಂದ ಈಗಲೇ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದರೆ ಪ್ರಯೋಜನವಾಗುವುದಿಲ್ಲ. ಹಾಗಾಗಿ ಸ್ವಲ್ಪ ದಿನದ ನಂತರ ಸಮೀಕ್ಷೆ ನಡೆಸಲಾಗುವುದೆಂದು ತಿಳಿಸಿದರು.
ಎಸ್ಐಆರ್ ಶೇ. ೫೨ರಷ್ಟು ಪ್ರಗತಿ:
ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಶೇ. ೫೨ರಷ್ಟು ಪೂರ್ಣಗೊಂಡಿದ್ದು, ಸ್ಥಳಿಯವಾಗಿ ಉತ್ತಮ ಸಾರ್ವಜನಿಕವಾಗಿ ಏನಾದರೂ ದೂರುಗಳಿದ್ದರೆ ೧೯೫೦ಗೆ ಕರೆ ಮಾಡಿ ತಿಳಿಸಬಹುದು ಎಂದು ತಿಳಿಸಿದರು. ಬಳಿಕ ತಹಸೀಲ್ದಾರ ಕಚೇರಿ ಅಭಿಲೇಖಾಲಯಕ್ಕೆ ಪರಿಶೀಲಿಸಿ ತದನಂತರ ರೈತರು ಹಾಗೂ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಶಿರಸಿ ಉಪ ವಿಭಾಗಾಧಿಕಾರಿ ಚಂದ್ರಶೇಖರ, ತಹಸೀಲ್ದಾರ ಎಸ್.ಎ. ಪ್ರಸಾದ ಮುಂತಾದವರರಿದ್ದರು.ಸಿಬ್ಬಂದಿ ಬದಲಾಯಿಸುವಂತೆ ಮನವಿ:
ತಾಲೂಕಿನ ಕರಗಿನಕೊಪ್ಪ ಮೊರಾರ್ಜಿ ವಸತಿ ಶಾಲೆಯ ಸಿಬ್ಬಂದಿಗಳನ್ನು ಬದಲಾಯಿಸುವಂತೆ ಆಗ್ರಹಿಸಿ ಶಾಲೆಯ ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದವರು ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾಗೆ ಮನವಿ ಸಲ್ಲಿಸಿದರು.ಸಿಬ್ಬಂದಿ ಮಾಡುವ ಲೋಪದಿಂದಾಗಿ ಶಾಲೆಯ ವ್ಯವಸ್ಥೆ ಸಂಪೂರ್ಣ ಹದಗೆಟ್ಟುಹೋಗಿದೆ. ಅದಕ್ಕೆ ಸಂಬಂಧಪಟ್ಟಂತೆ ಕಾವಲುಗಾರ, ಸ್ವಚ್ಛತಾ ಸಿಬ್ಬಂದಿ, ಅಡುಗೆ ಸಿಬ್ಬಂದಿ, ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು ಹಾಗೂ ಡಿ ಗ್ರೂಪ್ ಸಿಬ್ಬಂದಿಗಳೆಲ್ಲರೂ ಪ್ರಾಚಾರ್ಯರು, ನಿಲಯ ಪಾಲಕ ಮತ್ತು ಶಿಕ್ಷಕರ ಮಾತು ಕೇಳದೆ ಮನಬಂದಂತೆ ವರ್ತಿಸುತ್ತಾರೆ. ಮುಂದಿನ ದಿನಗಳಲ್ಲಿ ಶಾಲೆ ವ್ಯವಸ್ಥಿತವಾಗಿ ನಡೆಯಬೇಕಾದರೆ ತಕ್ಷಣ ಈ ಸಬ್ಬಂದಿಗಳನ್ನು ಏಜನ್ಸಿಗೆ ಹಿಂತಿರುಗಿಸಿ ಹೊಸ ಸಿಬ್ಬಂದಿಯನ್ನು ನೇಮಕ ಮಾಡಬೇಕು. ಅಲ್ಲದೇ, ಸುಮಾರು ೩೫೦ ಮಕ್ಕಳು ವ್ಯಾಸಂಗ ಮಾಡುವ ಇಲ್ಲಿ ಖಾಯಂ ಸಿಬ್ಬಂದಿ ಕೊರತೆಯಿಂದ ತೀವ್ರ ತೊಂದರೆಯಾಗುತ್ತಿದ್ದು, ತಕ್ಷಣ ಬೇರೆ ಕಡೆಯವರನ್ನು ಇಲ್ಲಿಗೆ ವರ್ಗಾವಣೆ ಅಥವಾ ನಿಯೋಜನೆ ಮಾಡುವ ಮೂಲಕ ಖಾಯಂ ಹುದ್ದೆಗಳನ್ನು ಭರ್ತಿ ಮಾಡಬೇಕು. ಇಲ್ಲದಿದ್ದರೆ. ನಮ್ಮನ್ನಾದರೂ ಬೇರೆ ಕಡೆಗೆ ಸ್ಥಳಾಂತರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲ ಆನಂದ ಚಿಕ್ಕೋಡಿ, ನಿಲಯ ಪಾಲಕಿ ನೇತ್ರಾವತಿ ಕರಿಯಣ್ಣವರ, ಶಿಕ್ಷಕರಾದ ಅಶ್ವಿನಿ ಗುಡಿಮನಿ, ಅರುಣಕುಮಾರ, ಗಂಗಾಧರ ಮುಂತಾದವರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.