ಉಡುಪಿ: ದುಷ್ಚಟಗಳಿಂದ ದೂರವಿದ್ದಾಗ ಮಾತ್ರ ಉತ್ತಮ ಆರೋಗ್ಯ, ಸ್ವಸ್ಥ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಮೂಳೆ ರೋಗ ತಜ್ಞ ಹಾಗೂ ಭಾರತೀಯ ವೈದ್ಯಕೀಯ ಸಂಘ (ಐ.ಎಂ.ಎ.) ಉಡುಪಿ ಕರಾವಳಿ ಅಧ್ಯಕ್ಷ ಡಾ.ಕೆ ಸುರೇಶ್ ಶೆಣೈ ಹೇಳಿದ್ದಾರೆ.
ಶುಕ್ರವಾರ ಇಲ್ಲಿನ ಐ.ಎಂ.ಎ, ಭವನದಲ್ಲಿ ಜಿಲ್ಲಾಡಳಿತ, ಐ.ಎಂ.ಎ., ವಿದ್ಯಾರತ್ನ ನರ್ಸಿಂಗ್ ಕಾಲೇಜು ಹಾಗೂ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಆಶ್ರಯದಲ್ಲಿ ನಡೆದ ಡಾ.ಮಹಾಂತ ಶಿವಯೋಗಿ ಸ್ವಾಮೀಜಿ ಜನ್ಮದಿನದ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಮನೋವೈದ್ಯ ಡಾ.ಪಿ.ವಿ. ಭಂಡಾರಿ ಉಪನ್ಯಾಸ ನೀಡಿ, ಒಮ್ಮೆ ದುಶ್ಚಟದ ಚಕ್ರವ್ಯೂಹದಲ್ಲಿ ಸಿಲುಕಿದರೆ ಅದರಿಂದ ಹೊರಬರುವುದು ಕಷ್ಟ. ಅನೇಕ ಜನರು ದುಶ್ಚಟಗಳಿಂದಲೇ ತಮ್ಮ ಪ್ರಾಣಗಳನ್ನು ಕಳೆದುಕೊಂಡರೆ, ಅನೇಕರು ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಾರೆ. ವ್ಯಸನಮುಕ್ತ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಪ್ರತಿಯೊಬ್ಬರೂ ಕೈಜೋಡಿಸಿದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಒಬ್ಬರಿಂದಲೇ ಸಮಾಜ ಬದಲಾವಣೆ ಮಾಡಲು ಆಗುವುದಿಲ್ಲ ಎಂದರು.ಇಂದು ಮೊಬೈಲಿನಲ್ಲಿ ಸೋಷಿಯಲ್ ಮೀಡಿಯ, ರೀಲ್‌ಗಳನ್ನು ವಿಪರೀತ ನೋಡುವುದು ಸಹ ಒಂದು ವ್ಯಸನವಾಗಿದೆ. ಇದರಿಂದ ದೂರವಿರಬೇಕು. ಅಗತ್ಯಕ್ಕಷ್ಟೇ ಮೊಬೈಲುಗಳನ್ನು ಬಳಕೆ ಮಾಡಬೇಕು. ಅವುಗಳಲ್ಲಿ ಸಿಗುವ ಅನೇಕ ಮಾಹಿತಿಗಳು ಸಹ ಸುಳ್ಳುಗಳಿಂದ ಕೂಡಿರುತ್ತವೆ. ಅವುಗಳಿಗೆ ಮಾರು ಹೋಗಬಾರದು ಎಂದರು.ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ ಪ್ರಾಸ್ತಾವಿಕವಾಗಿ ಮಾತನಾಡಿದರು.ವಿದ್ಯಾರತ್ನ ಕಾಲೇಜಿನ ಪ್ರಾಂಶುಪಾಲೆ ಡಾ.ಅನಿತಾ ಸಿ.ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಸಿಟಿ ಎಜುಕೇಷನ್ ಟ್ರಸ್ಟಿನ ಆಡಳಿತಾಧಿಕಾರಿ ರವಿ ಪಾಲನ್, ವಿದ್ಯಾರತ್ನ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಎಂ.ಕೆ ರಮೇಶ್, ವಿದ್ಯಾರತ್ನ ನರ್ಸಿಂಗ್ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು, ವಾರ್ತಾ ಇಲಾಖೆಯ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು. ಸಹಾಯಕ ಉಪನ್ಯಾಸಕಿ ಶ್ರೀಲತಾ ನಿರೂಪಿಸಿದರು. ರಂಜಿತಾ ವಂದಿಸಿದರು.