ಕನ್ನಡಪ್ರಭ ವಾರ್ತೆ ಅಥಣಿ
ಇಲ್ಲಿನ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಸೋಮವಾರ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ಟ್ರಸ್ಟ್, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜಿಲ್ಲಾ ಜನಜಾಗೃತಿ ವೇದಿಕೆಯ ಟ್ರಸ್ಟ್ ಸೇರಿದಂತೆ ಸ್ಥಳೀಯ ವಿವಿಧ ಸಂಘ ಸಂಸ್ಥೆಗಳ ಮತ್ತು ದಾನಿಗಳ ಸಹಯೋಗದಲ್ಲಿ ಆಯೋಜಿಸಿದ್ದ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಎಲ್ಲರ ಮನಸ್ಸುಗಳನ್ನು ಕಟ್ಟುವ ಮೂಲಕ ಆರೋಗ್ಯವಂತ ಮತ್ತು ಸ್ವಾಸ್ಥ ಸಮಾಜವನ್ನು ಕಟ್ಟಲು ಶ್ರಮಿಸುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಸ್ಪೂರ್ತಿಯಾಗಬಲ್ಲ ಅನೇಕ ಕಾರ್ಯಕ್ರಮಗಳನ್ನು ಡಾ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯು ಉತ್ತಮ ರೀತಿಯಲ್ಲಿ ಕೆಲಸವನ್ನು ಮಾಡುತ್ತಿದೆ ಎಂದರು.
ರಾಘವೇಂದ್ರ ಸ್ವಾಮಿ ಮಠದ ಅಧ್ಯಕ್ಷ ಅನಿಲರಾವ್ ದೇಶಪಾಂಡೆ ಮಾತನಾಡಿ, ಕುಡಿತದ ಚಟಕ್ಕೆ ಅಂಟಿಕೊಂಡಿರುವ ವ್ಯಕ್ತಿ ಮನೆಯಲ್ಲಿ ಕವಿದಿರುವ ಅಂಧಕಾರವನ್ನು ಅಳಿಸುವ ಪುಣ್ಯದ ಕಾರ್ಯ ಮಾಡುತ್ತಿರುವ ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆ ಆ ಕುಟುಂಬದ ನೆಮ್ಮದಿ ಮತ್ತು ಪರಿವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಜಿಲ್ಲೆ ವ್ಯಾಪ್ತಿಯಲ್ಲಿ 72ಕ್ಕೂ ಅಧಿಕ ಶಿಬಿರಾರ್ಥಿಗಳಿಗೆ ವಿಶೇಷ ಮಾರ್ಗದರ್ಶನ ನೀಡುತ್ತಿದೆ. ಉತ್ತಮ ಸಮಾಜ ನಿರ್ಮಾಣದ ಸತ್ಕಾರ್ಯಗಳಿಗೆ ನಮ್ಮ ದೇವಸ್ಥಾನದ ಸಭಾಂಗಣ ಯಾವತ್ತೂ ತೆರೆದ ಮನೆಯಾಗಿದೆ ಎಂದು ಹೇಳಿದರು.ಯೋಜನೆಯ ಜಿಲ್ಲಾ ನಿರ್ದೇಶಕಿ ಲೀಲಾವತಿ ಪ್ರಾಸ್ತಾವಿಕವಾಗಿ ಮಾತನಾಡಿ, ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಹಾಗೂ ಜನಜಾಗೃತಿ ವೇದಿಕೆಯ ಮೂಲಕ ನಡೆಯುವ ಅನೇಕ ಸಮಾಜಮುಖಿ ಕಾರ್ಯಕ್ರಮ, ಮದ್ಯವರ್ಜನ ಶಿಬಿರ ಅನುಷ್ಠಾನ, ಮದ್ಯವರ್ಜನ ಶಿಬಿರದ ರೂಪುರೇಷೆಯ ಬಗ್ಗೆ ತಿಳಿಸಿದರು.