ಕನ್ನಡಪ್ರಭ ವಾರ್ತೆ ವಿಜಯಪುರ
ಒಂದು ಸ್ಥಳ ಅಥವಾ ಪರಿಸರಕ್ಕೆ ಸಂಭಂದಿಸಿದ್ದಕ್ಕಿಂತ ಹೆಚ್ಚಾಗಿ ಜೀವನದ ಧಗೆಯನ್ನು ಆಧರಿಸಿ ಉತ್ತಮ ಕಲಾತ್ಮಕ ಹಾಗೂ ಕಮರ್ಶಿಯಲ್ ಚಿತ್ರವನ್ನು ಮಾಡಲಾಗಿದೆ. ಹುಟ್ಟು ಜೋಗುತಿ ಸಾಕುತಾಯಿ ಆಗಿದ್ದು, ಆಕೆಯ ಮಗನ ಆಧರಿಸಿ ಚಿತ್ರಕಥಾ ಹಂದರ ರಚಿಸಲಾಗಿದೆ ಎಂದು ಧಗೆ ಚಿತ್ರದ ನಿರ್ದೇಶಕ ಈಶ್ವರ ಕೆರನಳ್ಳಿ ಹೇಳಿದರು.ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪದ್ಮಶ್ರೀ ಪ್ರಶಸ್ತಿ ಪುರಸ್ಕ್ರತೆ ಮಂಜಮ್ಮ ಜೋಗುತಿಯವರು ಧಗೆ ಚಿತ್ರದಲ್ಲಿ ಜೊಗುತಿಯ ಪಾತ್ರ ಮಾಡಿದ್ದು, ಜೀವನದಲ್ಲಿನ ಧಗೆ ನಿವಾರಿಸಲು ಪರದಾಡುವ ಪಾತ್ರವಿದೆ. ಚಿತ್ರದಲ್ಲಿ ನಾನಾ ತಿರುವುಗಳನ್ನು ಅನುಭವಿಸಿ, ಸಮಾಜಕ್ಕೆ ವಿರುದ್ಧವಾಗಿ ಬದುಕುವ ಪಾತ್ರವನ್ನು ನಟ ಸಂಗಮೇಶ ಉಪಾಸೆ ಮಾಡಿದ್ದಾರೆ. ಅವರನ್ನು ಕಾಮಿಡಿ, ಕುಡುಕ, ಗಂಭೀರತೆ ವಿವಿಧತೆ ಪಾತ್ರಗಳು ಒಂದೇ ಚಿತ್ರದಲ್ಲಿ ತೋರಿಸಲಾಗಿದೆ. ಒಂದೂವರೆ ಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಿಸಲಾಗುತ್ತಿದ್ದು, ಸಮಾಜದಲ್ಲಿರುವ ಕೆಟ್ಟ ಮನಸ್ಥಿತಿಯುಳ್ಳ ವ್ಯಕ್ತಿಗಳನ್ನು ಸರಿಪಡಿಸುವ ಕಥಾ ಹಂದರವೇ ಈ ಧಗೆ ಚಿತ್ರವಾಗಿದೆ ಎಂದರು.
ಚಿತ್ರನಟ ಸಂಗಮೇಶ ಉಪಾಸೆ ಮಾತನಾಡಿ, ಧಗೆ ಚಿತ್ರದಲ್ಲಿ ಐದು ಹಾಡುಗಳಿದ್ದು, ಇನ್ನೆರಡು ತಿಂಗಳಿನಲ್ಲಿ ಶೂಟಿಂಗ್ ಪೂರ್ಣವಾಗಲಿದೆ. ವಿಜಯಪುರ, ಬಾಗಲಕೋಟೆಯಲ್ಲಿ ಸೇರಿದಂತೆ ಹೆಚ್ಚಾಗಿ ಹೊರ್ತಿ, ಹಳಗುಣಕಿ ಭಾಗದಲ್ಲಿ ಶೂಟಿಂಗ್ ಮಾಡಲಾಗಿದೆ. ಒಬ್ಬ ಕುಡುಕ ಮಗನು ಕೊನೆಗೆ ತಾಯಿಯ ಸೇವೆಗೆ ಮುಂದಾಗುವ ಕಥಾ ಹಂದರವನ್ನು ಧಗೆ ಚಿತ್ರ ಹೊಂದಿದೆ ಎಂದರು.ಮಂಜಮ್ಮ ಜೋಗುತಿ ಮಾತನಾಡಿ, ಧಗೆ ಚಿತ್ರದಲ್ಲಿ ಕಲಾವಿದರು ಉತ್ತರ ಕರ್ನಾಟಕದವರಾಗಿದ್ದು, ಚಿತ್ರದ ಶೂಟಿಂಗ್ ಕೂಡ ಇಲ್ಲಿಯೇ ಮಾಡಲಾಗಿದೆ. ಓರ್ವ ತೃತೀಯಲಿಂಗಿ ಸಹ ಸಮಾಜಕ್ಕೆ ಮಾದರಿಯಾಗಿ ಹೇಗೆ ಬದುಕಬೇಕು ಎಂದು ಈ ಚಿತ್ರದಲ್ಲಿ ತೋರಿಸಿದ್ದಾರೆ. ದಾರಿಬಿಟ್ಟ ಮಗನನ್ನು ಸರಿದಾರಿಗೆ ತರುವಂತಹ ಅದ್ಭುತ ಪಾತ್ರವನ್ನು ಈ ಚಿತ್ರದಲ್ಲಿ ನನಗೆ ಕೊಟ್ಟಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಚಿತ್ರನಟಿ ನೀತು ಮೈದರಗಿ, ನಿರ್ಮಾಪಕ ಮಡಿವಾಳಪ್ಪ ಗೋಗಿ ಇದ್ದರು.