ಕನ್ನಡಪ್ರಭ ವಾರ್ತೆ ವಿಜಯಪುರ

ನಾನು ಕಾಂಗ್ರೆಸ್ ಪಕ್ಷದ ಅಧಿಕೃತ ಬಿಎಲ್ಎ-1 ಇದ್ದೇನೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಡೆಯವರು ಜೆಡಿಎಸ್‌ ನವರ ಕೈಕಾಲು ಹಿಡಿದು ಬಿಎಲ್‌ಎ-2 ಎಂದು ನೇಮಕ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಅಬ್ದುಲ್‌ ಹಮೀದ್ ಮುಶ್ರೀಫ್ ಯತ್ನಾಳ ಹೇಳಿಕೆಗೆ ಟಾಂಗ್ ನೀಡಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಬ್ದುಲ್‌ ಹಮೀದ್ ಮುಶ್ರೀಫ್ ಯಾರು ಎಂದು ನಗರ ಶಾಸಕ ಯತ್ನಾಳ ಪ್ರಶ್ನಿಸಿದ್ದಾರೆ. ನಾನು ಅಧಿಕೃತ ಇಎಲ್‌ಎ-1 ಇದ್ದೇನೆ, ಅವರೇ ಬಿಎಲ್‌ಎ-2 ಇದ್ದಾರೆ. ಯಾವುದೇ ಅಧಿಕೃತ ಆದೇಶ ಹೊಂದಿರದೆ ಇರುವವರು, ಸಿದ್ಧಸಿರಿ ನೌಕರರು ಎಸ್‌ಐಆರ್‌ ಫಾರ್ಮ್‌ಗಳನ್ನು ಇಟ್ಟುಕೊಂಡು ತಿರುಗುತ್ತಿದ್ದಾರೆ. ಅವರೆಲ್ಲ ಯಾರು?, ಯಾಕೆ ಅನಧಿಕೃತವಾಗಿ ವಾರ್ಡ್‌ಗಳಲ್ಲಿ ತಿರುಗಾಡುತ್ತಿದ್ದಾರೆ ಎಂಬುದರ ಕುರಿತು ಶಾಸಕರು ಉತ್ತರಿಸಬೇಕು. ಅಂತಹ ಅನಧಿಕೃತ ವ್ಯಕ್ತಿಗಳ ಮೇಲೆ ಮಹಾನಗರ ಪಾಲಿಕೆ ಆಯುಕ್ತರು ಪ್ರಕರಣ ದಾಖಲಸಿಬೇಕು ಎಂದು ಒತ್ತಾಯಿಸಿದರು.

ಕಳೆದ ಚುನಾವಣೆಯಲ್ಲಿ ನಾನು 86 ಸಾವಿರ ಮತ ಪಡೆದಿದ್ದು, ಅದರಲ್ಲಿ 25 ಸಾವಿರಕ್ಕೂ ಅಧಿಕ ಹಿಂದೂಗಳು ಮತಗಳಿವೆ. ಅವರ ಮತಗಳನ್ನು ಉಳಿಸಲು ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಅಧಿಕೃತವಾಗಿ ಭಾಗವಹಿಸಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.

ಈ ಹಿಂದೆ ಟ್ರೈನ್ ಗೆ ಬೆಂಕಿ ಹಚ್ಚಿದವರು ಇವರೇ. ಮಾತೆತ್ತಿದರೆ ಪಾಕಿಸ್ತಾನ ಎನ್ನುವ ಇವರು ಪಾಕಿಸ್ತಾನ ಏಜಂಟರಿದ್ರಾ? ಎಂದು ಪ್ರಶ್ನಿಸಿದರು. ಇಂತಹವರಿಗೆ ಯಾಕೆ ಪೊಲೀಸ್ ಭದ್ರತೆ ಕೊಟ್ಟಿದ್ದಾರೆ?, ಭದ್ರತೆಯನ್ನು ವಾಪಸ್ ಪಡೆಯಬೇಕು ಎಂದು ಗೃಹ ಸಚಿವರಿಗೆ ಮನವಿ ಮಾಡುತ್ತೇನೆ. ಇಂಡಿಯಾ-ಪಾಕಿಸ್ತಾನ, ಹಿಂದೂ‌-ಮುಸ್ಲಿಂ ಎಂದು ಜಗಳ ಹಚ್ಚುವುದು ಬಿಡಿ, ಮೊದಲು ನಗರದ ಅಭಿವೃದ್ಧಿ ಮಾಡಿ ಎಂದು ಸಲಹೆ ನೀಡಿದರು.


ನಗರದಲ್ಲಿ ಅವರು ಬೋಗಸ್ ವೋಟ್‌ ಮಾಡಿಲ್ಲ ಎಂದು ಯತ್ನಾಳರು ತಮ್ಮ ಮಕ್ಕಳನ್ನು ಮುಟ್ಟಿ ಹೇಳಲಿ, ನಾನು ಸಹ ಅವರು ಬೋಗಸ್ ವೋಟು ಮಾಡಿದ್ದಾರೆ ಎಂದು ನನ್ನ ಮಕ್ಕಳನ್ನು ಮುಟ್ಟಿ ಹೇಳುತ್ತೇನೆ. ಮಾಡೋದೆಲ್ಲಾ ಮಾಡಿ ಸತಿ ಸಾವಿತ್ರಿ ಪತಿ ಪಾವಿತ್ರ್ಯ ಎಂಬಂತೆ ಮಾಡುತ್ತಾರೆ ಎಂದು ಟಾಂಗ್‌ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಮಹಾದೇವ ರಾವಜಿ, ಅಪ್ಪು ಪೂಜಾರಿ, ಈರಪ್ಪ ಕುಂಬಾರ, ಫಯಾಜ್ ಕಲಾದಗಿ ಇದ್ದರು.ಶಾಸಕರು ಸಿದ್ಧಸಿರಿಯ ಹಣ ಬಳಕೆ ಮಾಡಿಕೊಂಡು ನಾನು ಹಾಕಿದ್ದ ಕೇಸ್ ನಡೆಯದಂತೆ ಮಾಡಿದ್ದಾರೆ. ನಗರದಲ್ಲಿ ಪಾಕಿಸ್ತಾನ ಧ್ವಜ ಹಾರಿಸಿದವರು ಯಾರು?, ಮೆರವಣಿಗೆ ಮಾಡಿದವರು ಯಾರು?, ಇದೆಲ್ಲ ಮಾಡಿದವರೇ ಬಸನಗೌಡರು. ಒಂದು ವೇಳೆ ಅವರು ಪಾಕಿಸ್ತಾನ ಧ್ವಜ ಹಾರಿಸಿಲ್ಲವಾದರೆ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಲಿ.

- ಅಬ್ದುಲ್‌ ಹಮೀದ್ ಮುಶ್ರೀಫ್ ಕಾಂಗ್ರೆಸ್ ಮುಖಂಡ