ಉತ್ತಮ ಕೃತಿಗಳಿಂದ ಆರೋಗ್ಯವಂತ ಸಮಾಜ ನಿರ್ಮಾಣ: ಡಾ.ತಲ್ಲೂರು

KannadaprabhaNewsNetwork |  
Published : Jun 21, 2025, 12:49 AM IST
19ಪುಸ್ತಕ | Kannada Prabha

ಸಾರಾಂಶ

ಮೂಲ್ಕಿಯ ಪುನರೂರು ಟೂರಿಸ್ಟ್ ಹೋಂ ಸಭಾಂಗಣದಲ್ಲಿ ಬುಧವಾರ ಲೇಖಕ ಹರಿಶ್ವಂದ್ರ ಪಿ. ಸಾಲಿಯಾನ್ ಮೂಲ್ಕಿ ಅವರ ‘ನುಡಿ ಮುತ್ತು’ ಕೃತಿಯ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ ಸಾಹಿತ್ಯ ಕೃತಿಗಳು ಲೇಖಕನ ಮನದಾಳದ, ಜೀವಾನಾನುಭವದ ಮಾತುಗಳಾಗಿರುತ್ತವೆ. ಆದ್ದರಿಂದ ಉತ್ತಮ ಕೃತಿಗಳಿಂದ ಆರೋಗ್ಯವಂತ ಸಮಾಜದ ನಿರ್ಮಾಣ ಸಾಧ್ಯ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದ್ದಾರೆ.

ಮೂಲ್ಕಿಯ ಪುನರೂರು ಟೂರಿಸ್ಟ್ ಹೋಂ ಸಭಾಂಗಣದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಲೇಖಕ ಹರಿಶ್ವಂದ್ರ ಪಿ. ಸಾಲಿಯಾನ್ ಮೂಲ್ಕಿ ಅವರ ‘ನುಡಿ ಮುತ್ತು’ ಕೃತಿ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಂದು ಪುಸ್ತಕ ಓದುವವರ ಸಂಖ್ಯೆ ವಿರಳವಾಗಿದೆ ನಿಜ, ಆದರೆ ಉತ್ತಮ ಕೃತಿಗಳನ್ನು ಓದುವವರು ಇದ್ದೇ ಇದ್ದಾರೆ. ಇಂದು ದಿನಾ ಬೆಳಗ್ಗೆ ವಾಟ್ಸಾಪ್ ನಲ್ಲಿ ನಿತ್ಯಜೀವನಕ್ಕೆ ಬೆಳಕನ್ನು ಚೆಲ್ಲುವ ನುಡಿಮುತ್ತುಗಳನ್ನು ಕಳುಹಿಸಿ, ಶುಭ ಕೋರುವುದು ಪರಿಪಾಠವಾಗಿದೆ ಎಂದ ಅವರು, ಮಕ್ಕಳಲ್ಲಿ ಬಾಲ್ಯದಲ್ಲಿಯೇ ನೈತಿಕತೆಯನ್ನು ಬೆಳೆಸಬೇಕು ಎನ್ನುವ ಉದ್ದೇಶದಿಂದ ಜಿಲ್ಲೆಯ ನೂರಾರು ಶಾಲಾ ಕಾಲೇಜುಗಳಿಗೆ ತೆರಳಿ 40,000ಕ್ಕೂ ಅಧಿಕ ಉತ್ತಮ ಕೃತಿಗಳನ್ನು ಉಚಿತವಾಗಿ ಹಂಚಿದ್ದೇನೆ. ಈ ಉದ್ದೇಶದಿಂದಲೇ ಹಲವಾರು ಕೃತಿಗಳನ್ನು ರಚಿಸಿ ಲೋಕಾರ್ಪಣೆ ಮಾಡಿದ್ದೇನೆ. ಈ ಕಾರ್ಯ ನನಗೆ ತುಂಬಾ ಸಂತೃಪ್ತಿ ನೀಡಿದೆ ಎಂದರು.

ಕೃತಿ ಬಿಡುಗಡೆಗೊಳಿಸಿದ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ, ಲೇಖಕರಿಗೆ ಪ್ರೋತ್ಸಾಹ ಮತ್ತು ಸಹಕಾರ ನೀಡುವ ಕೆಲಸವನ್ನು ಸಮಾಜ ಮಾಡಬೇಕು. ಸಾಹಿತಿಗಳು ಸರಸ್ವತಿ ಪುತ್ರರು, ಅವರನ್ನು ಬೆಳೆಸುವ ಕೆಲಸವನ್ನು ಲಕ್ಷ್ಮೀ ಪುತ್ರರು ಮಾಡಬೇಕು ಎಂದರು.ಯುವ ಲೇಖಕಿ ಶೆರೋನ್ ಶೆಟ್ಟಿ ಐಕಳ ಅವರು ಬರೆದ ‘ಮಹಾ ಕುಂಭಾಶ್ವಮೇಧ’ ಕೃತಿಯನ್ನು ಡಾ.ತಲ್ಲೂರು ಶಿವರಾಮ ಶೆಟ್ಟಿ ಬಿಡುಗಡೆಗೊಳಿಸಿದರು.

ವಿವಿಧ ಕ್ಷೇತ್ರಗಳ ಸಾಧಕರಾದ ಲಕ್ಷ್ಮಿನಾರಾಯಣ ಉಪಾಧ್ಯ, ಡಾ.ಅರುಣ್ ಕುಡ್ವ ಮೂಲ್ಕಿ, ವಾಮನ್ ಕೋಟ್ಯಾನ್ ನಡಿಕುದ್ರು, ಅಶೋಕ್ ಕುಮಾರ್ ಶೆಟ್ಟಿ, ಹರೀಂದ್ರ ಸುವರ್ಣ, ಪಿ.ವಿ.ಪ್ರದೀಪ್ ಕುಮಾರ್, ನಿಶಾಂತ್ ಶೆಟ್ಟಿ, ಲೇಖಕ ಹರಿಶ್ಚಂದ್ರ ಪಿ.ಸಾಲ್ಯಾನ್, ವಾಸು ಪೂಜಾರಿ ಚಿತ್ರಾಪು ಮೊದಲಾದವರು ಇದ್ದರು. ದಿನೇಶ್ ಶೆಟ್ಟಿ ಸ್ವಾಗತಿಸಿದರು. ಸತೀಶ್ ಕಿಲ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ರವಿಚಂದ್ರ ವಂದಿಸಿದರು

PREV

Recommended Stories

ಸ್ವಾತಂತ್ರ್ಯಕ್ಕಾಗಿ 6.72 ಲಕ್ಷ ಜನ ಮರಣ
ಸಿಡಿದೆದ್ದ ಧರ್ಮಸ್ಥಳ ಭಕ್ತ ಅಭಿಮಾನಿಗಳು