ಮಲೇಬೆನ್ನೂರು: ಗುತ್ತಿಗೆದಾರನ ಕಳ್ಳಾಟ- ಮನೆಮನೆಗೆ ಹರಿಯದ ಗಂಗೆ!

KannadaprabhaNewsNetwork |  
Published : Jun 21, 2025, 12:49 AM IST
ಹರಳಹಳ್ಳಿಯಲ್ಲಿನ ಅಪೂರ್ಣ ನೀರಿನ ಟ್ಯಾಂಕ್ | Kannada Prabha

ಸಾರಾಂಶ

ಜಲಜೀವನ್‌ ಮಿಷನ್‌ನಡಿ ಮನೆಮನೆಗೆ ಗಂಗೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಎಲ್ಲರ ಮನೆಗಳಿಗೆ ಕುಡಿಯುವ ನೀರು ತಲುಪಿಸುವ ಮೂಲಕ ಜಲ ಸಮಸ್ಯೆ ನಿವಾರಣೆ ಈ ಯೋಜನೆ ಮುಖ್ಯ ಉದ್ದೇಶ. ಆದರೆ, ಮಲೇಬೆನ್ನೂರು ವ್ಯಾಪ್ತಿಯ ಹರಳಹಳ್ಳಿ, ಬೆಳ್ಳೂಡಿ, ಬನ್ನಿಕೋಡು ಗ್ರಾಮ ಪಂಚಾಯಿತಿಗಳ ವ್ಯಾಪ್ತಿ ಗ್ರಾಮಗಳಲ್ಲಿ ಈ ಯೋಜನೆಗೆ ಗ್ರಹಣ ಹಿಡಿದಿದೆ. ಮನೆಗಳಿಗೆ ಜೀವಜಲ ತಲುಪದೇ ನಾಗರೀಕರು ಪರಿತಪಿಸುವಂತಾಗಿದೆ.

- ಮೂರ್ನಾಲ್ಕು ಗ್ರಾಪಂಗಳ ಕಾಮಗಾರಿಗೆಲ್ಲ ಒಬ್ಬನೇ ಗುತ್ತಿಗೆದಾರ! । ಅಧಿಕಾರಿಗಳು 20 ನೋಟಿಸ್‌ ನೀಡಿದರೂ ಉತ್ತರವಿಲ್ಲ

- ಮನೆಮನೆಗೆ ಗಂಗೆ ಕಾರ್ಯಕ್ರಮದಡಿ ಕುಡಿಯುವ ನೀರು ಕನಸಿದ್ದ ನಾಲ್ಕಾರು ಗ್ರಾಪಂ ಗ್ರಾಮಸ್ಥರ ಆಸೆಗೆ ಗುತ್ತಿಗೆದಾರ ತಣ್ಣೀರು

- - -

ಎಚ್.ಎಂ. ಸದಾನಂದ

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ಜಲಜೀವನ್‌ ಮಿಷನ್‌ನಡಿ ಮನೆಮನೆಗೆ ಗಂಗೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಎಲ್ಲರ ಮನೆಗಳಿಗೆ ಕುಡಿಯುವ ನೀರು ತಲುಪಿಸುವ ಮೂಲಕ ಜಲ ಸಮಸ್ಯೆ ನಿವಾರಣೆ ಈ ಯೋಜನೆ ಮುಖ್ಯ ಉದ್ದೇಶ. ಆದರೆ, ಮಲೇಬೆನ್ನೂರು ವ್ಯಾಪ್ತಿಯ ಹರಳಹಳ್ಳಿ, ಬೆಳ್ಳೂಡಿ, ಬನ್ನಿಕೋಡು ಗ್ರಾಮ ಪಂಚಾಯಿತಿಗಳ ವ್ಯಾಪ್ತಿ ಗ್ರಾಮಗಳಲ್ಲಿ ಈ ಯೋಜನೆಗೆ ಗ್ರಹಣ ಹಿಡಿದಿದೆ. ಮನೆಗಳಿಗೆ ಜೀವಜಲ ತಲುಪದೇ ನಾಗರೀಕರು ಪರಿತಪಿಸುವಂತಾಗಿದೆ.

ಎಲ್ಲ ಗ್ರಾಮೀಣ ಭಾರತೀಯ ಮನೆಗಳಿಗೆ ವೈಯಕ್ತಿಕ ಮನೆಯ ನಳ ಸಂಪರ್ಕಗಳ ಮೂಲಕ ಸುರಕ್ಷಿತವಾಗಿ ಸಾಕಷ್ಟು ಕುಡಿಯುವ ನೀರನ್ನು ಒದಗಿಸುವ ಗುರಿ ಈ ಯೋಜನೆ ಪ್ರಮುಖ ಉದ್ದೇಶವಾಗಿದೆ. ಪ್ರತಿ ಮನೆಗಳು, ಶಾಲೆಗಳು, ಗ್ರಾಮ ಪಂಚಾಯಿತಿ ಕಟ್ಟಡ, ಅಂಗನವಾಡಿ ಕೇಂದ್ರ, ಆರೋಗ್ಯ ಕೇಂದ್ರ, ಸಮುದಾಯ ಮತ್ತು ಕ್ಷೇಮ ಕಟ್ಟಡಗಳಿಗೆ ನಲ್ಲಿಗಳ ಮೂಲಕ ನೀರು ಸರಬರಾಜು ಕಾರ್ಯಕ್ರಮವಿದು. ಜಲಜೀವನ್ ಮಿಶನ್‌ನಡಿ ಹರಳಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಳಹಳ್ಳಿ, ಸಂಕ್ಲೀಪುರ, ಮಲ್ಲನಾಯಕನಹಳ್ಲಿ, ಶ್ರೀನಿವಾಸ ನಗರ, ಗುಳದಹಳ್ಳಿ ಗ್ರಾಮಗಳಲ್ಲಿ ಪೈಪ್‌ಲೈನ್ ಮತ್ತು ನಳ ಅಳವಡಿಕೆ ಕಾರ್ಯ ಮುಕ್ತಾಯವಾಗಿದೆ. ಆದರೆ, ಇನ್ನೂ ನೀರು ಹರಿದಿಲ್ಲ.

ಹಾಲಿವಾಣ ಗ್ರಾಪಂ ವ್ಯಾಪ್ತಿಯ ಕೊಮಾರನಹಳ್ಳಿ, ಹಾಲಿವಾಣ, ಕೊಪ್ಪ ಹಾಗೂ ಕುಣಿಬೆಳಕೆರೆ ಗ್ರಾಪಂ ವ್ಯಾಪ್ತಿಯ ನಂದಿತಾವರೆ, ಕುಣಿಬೆಳಕೆರೆ, ಭಾಸ್ಕರ ಕ್ಯಾಂಪ್‌ ಇನ್ನಿತರ ಗ್ರಾಮಗಳಲ್ಲಿ ಯೋಜನೆ ಜಾರಿಯಾಗಿದೆ. ಆದರೆ, ಗ್ರಾಪಂಗಳಲ್ಲಿ ಯೋಜನೆ ಕಾಮಗಾರಿಗಳು ಮಾತ್ರ ಮುಗಿದಿಲ್ಲ, ಜನರ ಅಸಮಾಧಾನವೂ ತಣಿದಿಲ್ಲ. ವಿಚಿತ್ರವೆಂದರೆ, ಮೂರ್ನಾಲ್ಕು ಗ್ರಾಪಂಗಳ ಕಾಮಗಾರಿಗಳೆಲ್ಲ ಒಬ್ಬನೇ ಗುತ್ತಿಗೆದಾರ ಪಡೆದಿದ್ದು, ಮನೆಮನೆಗಳಿಗೆ ಎಂದು ನೀರು ಬರುವುದೋ ಎಂದು ಗ್ರಾಮಸ್ಥರು ಕನವರಿಸುತ್ತಿದ್ದಾರೆ.

19 ನೋಟಿಸ್ ನೀಡಿದರೂ ಸ್ವೀಕರಿಸದ ಗುತ್ತಿಗೆದಾರರು:

ಗ್ರಾಮೀಣ ಭಾಗದ ಶೇ.೮೦ರಷ್ಟು ಭಾಗ ನಾಗರೀಕರಿಗೆ ನೀರು ತಲುಪಿಸುವ ಗುರಿ ಈಡೇರಿಸದೇ ಗುತ್ತಿಗೆ ಪಡೆದವರು ನಾಪತ್ತೆಯಾಗಿದ್ದಾರೆ. ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಗುತ್ತಿಗೆದಾರರಿಗೆ ೧೯ ನೋಟಿಸ್ ನೀಡಿದ್ದರೂ, ಸ್ಪಂದಿಸದೇ ಮೊಂಡುತನ ಪ್ರದರ್ಶನ ಮಾಡುತ್ತಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಮನೆಮನೆಗೆ ಗಂಗೆ ಕಾರ್ಯಕ್ರಮ ಯಶಸ್ವಿಗೆ ಹಿನ್ನಡೆ ಪರಿಣಾಮ ಮನೆಗಳಿಗೆ ಅಳವಡಿಸಿದ ನಲ್ಲಿಗಳೂ ಇಲ್ಲದಾಗುತ್ತಿವೆ.

ಈ ಮಧ್ಯೆ ನಲ್ಲಿ ನೀರು ಪೂರೈಕೆಯಿಂದ ಮೀಟರ್ ಓಡುತ್ತದಲ್ಲ ಎಂಬ ಭಯವೂ ಕೆಲ ನಾಗರೀಕರಲ್ಲಿ ಕಾಡುತ್ತಿದೆ, ಚಾನಲ್ ನೀರು ಬಂದ್ ಆದಾಗ ದನಕರುಗಳ ಮೈ ತೊಳೆಯಲು ಮುಂದೆ ಏನಪ್ಪ ಮಾಡೋದು ಎಂಬ ಯೋಚನೆ ಗ್ರಾಮಸ್ಥರಲ್ಲಿ ಶುರುವಾಗಿದೆ. ಇದರ ಮಧ್ಯೆಯೇ ಪೈಪ್‌ಗಳ ಬೈಪಾಸ್ ಮೂಲಕ ನೀರು ಪಡೆಯಲು ಕೆಲ ನಿವಾಸಿಗಳು ಹುನ್ನಾರ ನಡೆಸಿದ್ದಾರೆ. ಮಲೇಬೆನ್ನೂರು ಸಮೀಪದ ಬೆಳ್ಳೂಡಿ, ಬನ್ನಿಕೋಡು ಮತ್ತಿತರೆ ಗ್ರಾಮ ಪಂಚಾಯಿತಿಗಳಲ್ಲಿ ಕೈಗೊಂಡ ಜಲಜೀವನ್ ಮಿಶನ್ ಕಾಮಗಾರಿಯೂ ಇದೇ ರೀತಿ ಸ್ಥಗಿತವಾಗಿದೆ ಎಂಬುದು ಗ್ರಾಮಸ್ಥರ ಆರೋಪ.

- - -

(ಕೋಟ್ಸ್‌) ಮಲ್ಲನಾಯ್ಕನಹಳ್ಳಿ ಗ್ರಾಮದಲ್ಲಿ ಜಲಜೀವನ್ ಮಿಷನ್‌ ಕಾಮಗಾರಿ ಪೂರ್ಣವಾಗಿದೆ. ಸಂಕ್ಲೀಪುರದಲ್ಲಿ ಶೇ.೮೦ ಕಾಮಗಾರಿ ಪೂರ್ಣವಾಗಿದೆ. ಆದರೆ, ಹರಳಹಳ್ಳಿ, ಗುಳದಹಳ್ಳಿಯಲ್ಲಿ ಗ್ರಾಮಗಳಲ್ಲಿ ಶೇ.೫೦ರಷ್ಟು ಕಾಮಗಾರಿ ಮಾತ್ರ ನಡೆದಿದೆ. ಕಳೆದ ಒಂದೂವರೆ ವರ್ಷದಿಂದ ಹೆಚ್ಚುವರಿ ನೀರಿನ ಟ್ಯಾಂಕ್ ಕಾಮಗಾರಿ ನಡೆಯದೇ ಯೋಜನೆ ಅಪೂರ್ಣವಾಗಿದೆ. ಈ ಕುರಿತು ಮೇಲಾಧಿಕಾರಿಗೆ ವರದಿ ಸಲ್ಲಿಸಿದ್ದೇವೆ.

- ಶಾಂತಪ್ಪ, ಪಿಡಿಒ, ಹರಳಹಳ್ಳಿ ಗ್ರಾಪಂ.

ಮನೆಮನೆಗೆ ಗಂಗೆ ಕಾರ್ಯಕ್ರಮ ಜಾರಿಯ ನಂಬಿಕೆಯಿಂದ ಇರುವ ಹಳೆಯ ನೀರಿನ ಟ್ಯಾಂಕ್ ಸಹ ಕೆಡವಿದ್ದೇವೆ. ಈಗ ಯೋಜನೆ ಹಿನ್ನಡೆಯಿಂದ ಗ್ರಾಮದಲ್ಲಿ ಕುಡಿಯುವ ನೀರಿಗೆ ಭಾರಿ ಸಮಸ್ಯೆಯಾಗಿದೆ. ಈ ಸಂಕಷ್ಟ ಯಾರಿಗೆ ಹೇಳಬೇಕು? ಮತದಾರರು ಗ್ರಾಮ ಸದಸ್ಯರ ಮನೆಗಳ ಬಳಿ ಬಂದು ತಮ್ಮ ತೊಂದರೆ ಹೇಳುತ್ತಾರೆ. ಈ ಸಮಸ್ಯೆ ಬಗೆಹರಿಸೋದು ಹೇಗೆಪ್ಪ ಎಂಬುದೇ ದೊಡ್ಡ ಯೋಚನೆಯಾಗಿದೆ. ಪರ್ಯಾಯ ವ್ಯವಸ್ಥೆ ಮಾಡಲಿಕ್ಕೆ ಸರ್ಕಾರದಿಂದ ಅನುದಾನವೂ ಬರುತ್ತಿಲ್ಲ. ಬೋರ್‌ಗಳ ನೀರೇ ಗತಿಯಾಗಿದೆ.

- ಶ್ರೀನಿವಾಸ್, ಸದಸ್ಯ, ಹರಳಹಳ್ಳಿ ಗ್ರಾಪಂ. ಅಪೂರ್ಣಗೊಂಡಿರುವ ಜಲಜೀವನ್ ಮಿಶನ್ ಕಾಮಗಾರಿ ಕುರಿತು ಪ್ರಶ್ನಿಸಲು ಸಂಬಂಧಿಸಿದ ಗುತ್ತಿಗೆದಾರರಿಗೆ ಫೋನ್ ಮಾಡಿದರೆ ಅವರು ಕರೆಗಳನ್ನೇ ಸ್ವೀಕರಿಸಲ್ಲ. ನೋಂದಣಿ ಅಂಚೆ ಮೂಲಕ ೨೦ ಬಾರಿ ನೋಟಿಸ್ ಜಾರಿ ಮಾಡಲಾಗಿದೆ. ಅವರು ನೋಟಿಸ್‌ ಸ್ವೀಕರಿಸದ ಕಾರಣ ಪತ್ರಗಳು ಕಚೇರಿಗೆ ವಾಪಸ್‌ ಬರುತ್ತಿವೆ.

- ಜಾಕೀರ್, ಸಹಾಯಕ ಎಂಜಿನಿಯರ್‌, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ.

- - -

-ಚಿತ್ರ-೧: ಹರಳಹಳ್ಳಿಯಲ್ಲಿರುವ ಅಪೂರ್ಣ ಕಾಮಗಾರಿಯ ನೀರಿನ ಟ್ಯಾಂಕ್.

-ಚಿತ್ರ-೨: ನಳಕ್ಕೆ ಹಾಕಿರುವ ನೀರಿನ ಪೈಪ್.

PREV

Recommended Stories

ಹೆತ್ತವರ ಕನಸು ನನಸಾಗಿಸುವುದೇ ಮಕ್ಕಳ ಗುರಿಯಾಗಿರಲಿ: ಸಚಿವೆ ಹೆಬ್ಬಾಳ್ಕರ್
ರಾಜ್ಯದ ಅರ್ಥ ವ್ಯವಸ್ಥೆ ಆರೋಗ್ಯವಂತವಾಗಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್