ರಾಮನಗರ: ನಗರದ ಎಲ್ಲಾ ವಾರ್ಡುಗಳಲ್ಲಿ ಮೂಲಸೌಕರ್ಯಗಳ ಸಮಸ್ಯೆ ಇದೆ. ಹಂತಹಂತವಾಗಿ ಎಲ್ಲಾ ಕೊರತೆಗಳನ್ನು ನೀಗಿಸುವ ಮೂಲಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಶಯದಂತೆ ರಾಮನಗರವನ್ನು ಮಾದರಿ ನಗರವನ್ನಾಗಿ ರೂಪಿಸಲಾಗುವುದು ಎಂದು ನಗರಸಭಾಧ್ಯಕ್ಷ ಕೆ.ಶೇಷಾದ್ರಿ ಹೇಳಿದರು.
ನಗರದಲ್ಲಿ 1, 22, 23, 24, 25 ಮತ್ತು 31ನೇ ವಾರ್ಡುಗಳು ಅತಿ ದೊಡ್ಡ ವಿಸ್ತೀರ್ಣವನ್ನು ಹೊಂದಿವೆ. ಈ ವಾರ್ಡಿನಲ್ಲಿ ಹೊಸ ಹೊಸ ಬಡಾವಣೆಗಳು ತಲೆ ಎತ್ತುತ್ತಿದ್ದು, ಮೂಲ ಸೌಕರ್ಯಗಳ ಕೊರತೆ ಇದೆ. ಆ ಕೊರತೆಗಳನ್ನು ನೀಗಿಸಲು ಪ್ರತಿ ವಾರ್ಡಿಗೆ 25 ಕೋಟಿ ರು. ಅನುದಾನವೂ ಸಾಕಾಗುವುದಿಲ್ಲ. ಆದರೂ ಅತ್ಯಗತ್ಯವಾಗಿ ಆಗಬೇಕಾಗಿರುವ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದೇವೆ ಎಂದು ಹೇಳಿದರು.
ನಗರದ ಎಲ್ಲಾ ವಾರ್ಡುಗಳಲ್ಲಿ ನಗರೋತ್ಥಾನ, ಯುಡಿಎಫ್, ಅಲ್ಪಸಂಖ್ಯಾತರ ಕಲ್ಯಾಣ ನಿಧಿ ಮತ್ತು ನಗರಸಭಾ ನಿಧಿಯನ್ನು ಬಳಸಿಕೊಂಡು ಅಭಿವೃದ್ದಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಜನರ ಬೇಡಿಕೆಗಳನ್ನು ಆಧರಿಸಿ, ಅವಶ್ಯಕವಿರುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಹಂತ ಹಂತವಾಗಿ ಎಲ್ಲಾ ಮೂಲ ಸೌಕರ್ಯಗಳ ಕೊರತೆಯನ್ನು ನೀಗಿಸಲಾಗುವುದು. ಡಿಕೆಶಿ ಅವರ ಆಶಯದಂತೆ ಮಾದರಿ ನಗರವನ್ನಾಗಿ ರೂಪಿಸಲು ಸಾರ್ವಜನಿಕರ ಸಹಕಾರವೂ ಅತ್ಯಗತ್ಯವಾಗಿ ಬೇಕಾಗಿದೆ ಎಂದು ತಿಳಿಸಿದರು.ಮಾದರಿ ನಗರವನ್ನಾಗಿ ರೂಪಿಸಲು ಸಂಕಲ್ಪ ಮಾಡಿದ್ದೇವೆ. ಈ ವಿಚಾರದಲ್ಲಿ ಮುಂದಿಟ್ಟ ಹೆಜ್ಜೆಯನ್ನು ಹಿಂತೆಗೆಯುವುದಿಲ್ಲ. ಜನರು ನಿರಾಶರಾಗಬಾರದು ಎಂದು ಕೆ.ಶೇಷಾದ್ರಿ ಹೇಳಿದರು.
ನಗರಸಭೆ ಸದಸ್ಯೆ ವಿಜಯ ಕುಮಾರಿ, ಮುಖಂಡರಾದ ವೇದ ಮೂರ್ತಿ, ದೀಪು, ವಿಜಯ್ ಕುಮಾರ್, ರಂಗಸ್ವಾಮಿ, ಎಇ ವಿಶ್ವನಾಥ್, ನಿರ್ಮಲಾ, ಗುತ್ತಿಗೆದಾರ ಗೋವಿಂದ ಮತ್ತಿತರರು ಹಾಜರಿದ್ದರು.
ರಾಮನಗರದ ಅರ್ಚಕರಹಳ್ಳಿಯಲ್ಲಿ ರಸ್ತೆ ನಿರ್ಮಾಣಕ್ಕೆ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಭೂಮಿ ಪೂಜೆ ನೆರವೇರಿಸಿದರು.