ಉಡುಪಿ: ಮಕ್ಕಳು, ಯುವಜನತೆಯಲ್ಲಿ ನೈತಿಕತೆಯ ಸಂದೇಶ ಬಿತ್ತುವಲ್ಲಿ ಪುರಾಣಗಳು ಹೆಚ್ಚು ಪರಿಣಾಮಕಾರಿಯಾಗಿವೆ. ಪುರಾಣ ಪ್ರಸಂಗಗಳ ಯಕ್ಷಗಾನ ನಾಟಕಗಳಲ್ಲಿ ಅಡಕವಾಗಿರುವ ಸತ್ಯ, ಧರ್ಮ, ನಿಷ್ಠೆ, ಪ್ರಾಮಾಣಿಕತೆ ಮೊದಲಾದ ಮೌಲ್ಯಗಳು ಯುವಜನತೆಯಲ್ಲಿ ನೈತಿಕ ಪ್ರಜ್ಞೆಯನ್ನು ಬಡಿದೆಬ್ಬಿಸುವ ಶಕ್ತಿಯನ್ನು ಹೊಂದಿವೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದ್ದಾರೆ.ಇಲ್ಲಿನ ಉಪ್ಪೂರಿನ ಶ್ರೀರಾಮಾಂಜನೇಯ ದೇವಸ್ಥಾನದಲ್ಲಿ ಮಣಿಪಾಲ ಗುರುವಸಂತಿ ಸಾಂಸ್ಕೃತಿಕ ವೇದಿಕೆಯ ದಶಮಾನೋತ್ಸವ ಪರ್ವದಲ್ಲಿ ಜಯರಾಮ್ ಮಣಿಪಾಲ ಅವರ ‘ಬಿಕ್ರಮ ಭಜರಂಗಿ’ ಪೌರಾಣಿಕ ನಾಟಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಶ್ರೀ ರಾಮಾಂಜನೇಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪರಮೇಶ್ವರ ಮುದ್ದೋಡಿ ಶುಭಾಶಂಸನೆಗೈದರು. ಉಷಾ ಮ್ಯಾರೇಝ್ ಬ್ಯುರೋದ ಎಂ.ಡಿ. ಸುಗುಣ ಕುಮಾರ್, ಪರ್ಕಳ ಶ್ರೀ ದುರ್ಗಾಪರಮೇಶ್ವರಿ ಕೋಅಪರೇಟಿವ್ ಸೊಸೈಟಿ ಅಧ್ಯಕ್ಷ ಅಶೋಕ್ ಕಾಮತ್ ಕೊಡಂಗೆ, ಸಿವಿಲ್ ಇಂಜಿನಿಯರ್ ಪರಮೇಶ್ವರ ಪರ್ಕಳ, ಉಡುಪಿ ತಾ.ಪಂ. ಮಾಜಿ ಸದಸ್ಯ ಸತ್ಯಾನಂದ ನಾಯಕ್, ಉಡುಪಿ ತಾಲೂಕು ಕಸಾಪ ಅಧ್ಯಕ್ಷ ರವಿರಾಜ್ ಎಚ್.ಪಿ., ರಾಮಾಂಜನೇಯ ದೇವಳದ ಅಧ್ಯಕ್ಷ ಕೆ.ಪಿ.ನಾಯಕ್, ಸಂಗೀತ ವಿದ್ವಾನ್ ಪಾಡಿಗಾರ್ ಲಕ್ಷ್ಮೀನಾರಾಯಣ ಉಪಾಧ್ಯ ಉಪಸ್ಥಿತರಿದ್ದರು.
ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹಾಗೂ ಸುಗುಣ ಕುಮಾರ್ ಅವರಿಗೆ ಅಭಿನಂದನೆ ನಡೆಯಿತು. ಸಂತೋಷ್ ಸಗ್ರಿ ನಿರೂಪಿಸಿದರು. ಜಯರಾಮ ಮಣಿಪಾಲ ವಂದಿಸಿದರು.