ಡಾ. ಬಾಬು ಜಗಜೀವನರಾಮ್ ಚರ್ಮ ಮತ್ತು ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ
ಬಳ್ಳಾರಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆಕನ್ನಡಪ್ರಭ ವಾರ್ತೆ ಬಳ್ಳಾರಿ
ರಾಜ್ಯದಲ್ಲಿ ಪರಿಶಿಷ್ಟ ಜಾತಿ ಒಳಮೀಸಲಾತಿ ಸಮೀಕ್ಷೆಯಿಂದ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿದ್ದವು. ಮೀಸಲಾತಿ ವರ್ಗೀಕರಣದಿಂದ ಪ್ರಸ್ತುತದಿಂದ ಹುದ್ದೆಗಳ ನೇಮಕ ಚಾಲನೆಗೊಂಡಿದ್ದು, ರಾಜ್ಯ ಸರ್ಕಾರವು ವಿವಿಧ ಇಲಾಖೆಗಳ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ವಿಶೇಷವಾದ ಮೀಸಲಾತಿ ಕಲ್ಪಿಸಿದೆ. ಹಾಗಾಗಿ ಕ್ರೀಡಾಪಟುಗಳು ಇದರ ಅವಕಾಶ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಡಾ. ಬಾಬು ಜಗಜೀವನರಾಮ್ ಚರ್ಮ ಮತ್ತು ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ ತಿಳಿಸಿದರು.ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ ಬಳ್ಳಾರಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದಲ್ಲಿನ ಕ್ರೀಡಾಪಟುಗಳಿಗೆ ಸೂಕ್ತ ತರಬೇತಿ, ವಸತಿ ನಿಲಯ ವ್ಯವಸ್ಥೆ ಸೇರಿದಂತೆ ಅವರನ್ನು ಪ್ರೋತ್ಸಾಹಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಯುವ ಸಮುದಾಯ ಪಠ್ಯದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ನಿರಂತರವಾಗಿ ಪಾಲ್ಗೊಳ್ಳಬೇಕು. ಕ್ರೀಡೆಯಿಂದ ಮಾತ್ರ ಸಮೃದ್ಧ ಆರೋಗ್ಯ ಹೊಂದಲು ಸಾಧ್ಯವಿದ್ದು ಈ ಬಗ್ಗೆ ಶಿಕ್ಷಕರು ಹಾಗೂ ಪೋಷಕರು ಸಹ ಪ್ರೋತ್ಸಾಹಿಸಬೇಕು. ಬಳ್ಳಾರಿ ಜಿಲ್ಲೆಯಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಅನೇಕ ಜನ ಕ್ರೀಡಾಪಟುಗಳಿದ್ದಾರೆ. ಕ್ರೀಡೆಗೆ ಬಳ್ಳಾರಿ ಜಿಲ್ಲೆ ಈ ಹಿಂದಿನಿಂದಲೂ ಹೆಸರಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಪಠ್ಯ ಚಟುವಟಿಕೆಗಳಿಂದ ಹೊರ ಬರುತ್ತಿಲ್ಲ. ಮೊಬೈಲ್ ಗೀಳಿನಿಂದ ದೈಹಿಕ ಚಟುವಟಿಕೆಗಳು ಸ್ಥಗಿತಗೊಂಡಂತೆ ಕಂಡು ಬರುತ್ತಿದೆ. ದುಶ್ಚಟಗಳಿಂದ ದೂರ ಇರಲು ಸಹ ಕ್ರೀಡೆ ಹೆಚ್ಚು ಪೂರಕವಾಗಲಿದೆ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದರು.ಬಳ್ಳಾರಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ ಮಾತನಾಡಿ, ಬೆಳೆ ಸಮೃದ್ಧಿಗೊಂಡರೆ ಉತ್ತಮ ಫಸಲು. ಮನುಷ್ಯ ಆರೋಗ್ಯದಿಂದಿದ್ದರೆ ಸದೃಢರಾಗಲು ಸಾಧ್ಯ. ಹಾಗಾಗಿ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಯುವಪೀಳಿಗೆಯ ಪಾತ್ರ ಬಹಳ ಮುಖ್ಯವಾಗಿದೆ. ಯುವಕರು ಕ್ರೀಡೆಗಳಲ್ಲಿ ಭಾಗವಹಿಸಿ ಸದೃಢರಾಗರಬೇಕು. ವಯಸ್ಸಿನಲ್ಲಿರುವಾಗಲೇ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಹೇಳಿದರು.
ಮನುಷ್ಯ ಸದೃಢನಾಗಬೇಕಾದರೆ ಆಹಾರ ಮುಖ್ಯ. ಯಾರೂ ಹಸಿವಿನಿಂದ ಬಳಲಬಾರದು ಎನ್ನುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆ ಅನ್ನಭಾಗ್ಯ ಮೂಲಕ ಅಕ್ಕಿ ನೀಡುತ್ತಿದೆ. ನಿರುದ್ಯೋಗ ಯುವಕರಿಗೆ ಯುವನಿಧಿ ಮೂಲಕ ಸಹಾಯಧನ ನೀಡುತ್ತಿದೆ ಎಂದು ತಿಳಿಸಿದರು.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಗ್ರೇಸಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಏರ್ಪಡಿಸಿದ್ದ 400 ಮೀ ಓಟ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ಮತ್ತು ಪ್ರಮಾಣಪತ್ರ ವಿತರಿಸಲಾಯಿತು.ವಾಲಿಬಾಲ್, ಕಬಡ್ಡಿ, ಖೋ-ಖೋ, ಫುಟ್ಬಾಲ್ (ಪುರುಷರಿಗೆ ಮಾತ್ರ), ಥ್ರೋಬಾಲ್, ಬಾಲ್ ಬ್ಯಾಡ್ಮಿಂಟನ್, ಬ್ಯಾಡ್ಮಿಂಟನ್, ಬ್ಯಾಸ್ಕೆಟ್ ಬಾಲ್, ಹಾಕಿ, ಹ್ಯಾಂಡ್‌ಬಾಲ್, ಟೇಬಲ್ ಟೇನ್ನಿಸ್, ಕುಸ್ತಿ ಮತ್ತು ಯೋಗಾ. ಟೆನ್ನಿಸ್, ನೆಟ್‌ಬಾಲ್ ಮತ್ತು ಈಜು ಸೇರಿದಂತೆ ವಿವಿಧ ಕ್ರೀಡೆಗಳು ಜರುಗಿದವು. ಜಿಲ್ಲೆಯ ವಿವಿಧ ತಾಲೂಕು ಮಟ್ಟದ ದಸರಾ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ವಿಜೇತರಾದ ಕ್ರೀಟಾಪಟುಗಳಿಗೆ ಬಳ್ಳಾರಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಆನ್‌ಲೈನ್ ಮೂಲಕ ನೋಂದಣಿ ವ್ಯವಸ್ಥೆ ಮಾಡಲಾಗಿತ್ತು.
ಈ ವೇಳೆ ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಶಶಿಧರ್ ಕೆಲ್ಲೂರ, ಹಾಕಿ ತರಬೇತುದಾರ ಜಾಕೀರ್, ಕ್ರೀಡಾಪಟು ಶಮೀನಾ ಜೆ. ಇಲಾಖೆಯ ಸಿಬ್ಬಂದಿ ವರ್ಗ ಸೇರಿದಂತೆ ತರಬೇತುದಾರರು, ಬಳ್ಳಾರಿ ಜಿಲ್ಲಾ ವ್ಯಾಪ್ತಿಯ ಕ್ರೀಡಾಪಟುಗಳು ಭಾಗವಹಿಸಿದ್ದರು.