ಬಳ್ಳಾರಿ: ವಿಷಮುಕ್ತ ಭೂಮಿ ಹಾಗೂ ವಿಷಮುಕ್ತ ಆಹಾರದ ಮೂಲಕ ಆರೋಗ್ಯವಂತ ಮತ್ತು ಸಮೃದ್ಧ ಭಾರತ ಕಟ್ಟಲು ಸಾಧ್ಯ ಎಂದು ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘದ ಮುಖ್ಯಸ್ಥೆ ಚುಕ್ಕಿ ನಂಜುಂಡಸ್ವಾಮಿ ಅಭಿಪ್ರಾಯಪಟ್ಟರು.
ಸಾವಯವ ಕೃಷಿಯಲ್ಲಿ ರೈತರ ಶ್ರಮಕ್ಕೆ ತಕ್ಕ ಬೆಲೆ ದೊರೆಯಬೇಕು. ಕೃಷಿ ಉತ್ಪನ್ನಗಳ ಬೆಲೆ ನಿಗದಿಪಡಿಸುವಲ್ಲಿ ರೈತರ ಪಾತ್ರ ಮಹತ್ವದ್ದಾಗಿದ್ದು, ರೈತರು ತಮ್ಮ ಉತ್ಪನ್ನಗಳಿಗೆ ತಾವೇ ನ್ಯಾಯಯುತ ಬೆಲೆ ನಿಗದಿಪಡಿಸಿಕೊಳ್ಳುವ ವ್ಯವಸ್ಥೆ ನಿರ್ಮಾಣವಾಗಬೇಕು. ‘ನಮ್ಮ ಬೆಳೆ, ನಮ್ಮ ಬೆಲೆ, ನಮ್ಮ ಮಾರುಕಟ್ಟೆ’ ಎಂಬ ಪರಿಕಲ್ಪನೆಯೊಂದಿಗೆ ರೈತರು ಸಂಘಟಿತರಾಗಬೇಕು ಎಂದು ಕರೆ ನೀಡಿದರು.
ಮೇಯರ್ ಪಿ. ಗಾದೆಪ್ಪ ಮಾತನಾಡಿ, ರಾಸಾಯನಿಕ ಮುಕ್ತ ಆಹಾರ ಸೇವನೆಯಿಂದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಕ್ಯಾನ್ಸರ್, ಮಧುಮೇಹ, ರಕ್ತದೊತ್ತಡ ಸೇರಿದಂತೆ ಹಲವು ಕಾಯಿಲೆಗಳ ಹೆಚ್ಚಳಕ್ಕೆ ಆಹಾರ ಪದ್ಧತಿಯೂ ಪ್ರಮುಖ ಕಾರಣವಾಗುತ್ತಿದೆ. ಹೀಗಾಗಿ ಮಕ್ಕಳಿಗೆ ಬಾಲ್ಯದಿಂದಲೇ ಪೌಷ್ಟಿಕ, ನೈಸರ್ಗಿಕ ಹಾಗೂ ವಿಷಮುಕ್ತ ಆಹಾರ ನೀಡುವ ಕಾಳಜಿಯನ್ನು ಪೋಷಕರು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ನ್ಯೆಸರ್ಗಿಕ ಕೃಷಿ ಸಂತ ಶ್ರೀ ಸವಿತಾನಂದ ಸ್ವಾಮೀಜಿ ಮಾತನಾಡಿ, ವಿಷಮುಕ್ತ ಆಹಾರ ಪೂರೈಕೆ, ಮಣ್ಣಿನ ಆರೋಗ್ಯ, ಸುಸಜ್ಜಿತವಾದ ಪರಿಸರ ನಿರ್ಮಿಸಬೇಕಾದರೆ ಅದು ಕೇವಲ ಸಾವಯವ ಕೃಷಿಯಿಂದ ಮಾತ್ರ ಸಾಧ್ಯ. ರೈತರು ಸಾವಯವ ಕೃಷಿಯಲ್ಲಿ ತೊಡಗಬೇಕಾದರೆ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಇಂತಹ ರೈತ ಸಂತೆ ಆಯೋಜಿಸಬೇಕು. ಮುಂದೆ ನಡೆಯುವ ಸಾವಯವ ಕೃಷಿ ಅಭಿಯಾನಕ್ಕೆ ವೈಯಕ್ತಿಕವಾಗಿ ₹1 ಲಕ್ಷ ದೇಣಿಗೆ ನೀಡುವುದಾಗಿ ತಿಳಿಸಿದರು.
ಶ್ರೀ ಕಲ್ಯಾಣ ಸ್ವಾಮಿ ಹಾಗೂ ನಂದಿಪುರದ ಮಹೇಶ್ವರ ಸ್ವಾಮಿ, ಜಂಗಮರ ಹೊಸಳ್ಳಿಯ ಅಜಾತ ಶಂಭುಲಿಂಗ ಸ್ವಾಮೀಜಿ, ಕ್ರೈಸ್ತ ಧರ್ಮದ ಫಾದರ್ ಸಿರಿಲ್, ಕೃಷಿ ಇಲಾಖೆಯ ಉಪ ನಿರ್ದೇಶಕ ಮಂಜುನಾಥ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜೆ. ಶಂಕರ, ಕೆವಿಕೆ ಮುಖ್ಯಸ್ಥ ಡಾ. ಎಸ್. ರವಿ, ಸಾವಯವ ಕೃಷಿಕ ಹುಲಿಕೇರಿ ವಿಶ್ವೇಶ್ವರಯ್ಯ ಸಜ್ಜನ, ಕಲ್ಯಾಣ ಚೌಕಿ ಮಠದ ಬಸವರಾಜ ಶಾಸ್ತ್ರಿ, ಮಲ್ಲಿಕಾರ್ಜುನ ಇತರರಿದ್ದರು.50 ಮಳಿಗೆ, 150 ಉತ್ಪನ್ನಗಳು: ಗಾಂಧಿ ಭವನದಲ್ಲಿ ನಡೆದ ರೈತ ಸಂತೆಯಲ್ಲಿ ಬಳ್ಳಾರಿ, ಚಾಮರಾಜನಗರ, ಮಂಡ್ಯ, ಕೊಪ್ಪಳ, ರಾಯಚೂರು ಸೇರಿದಂತೆ ನಾನಾ ಭಾಗಗಳಿಂದ ಆಗಮಿಸಿದ ಸಾವಯವ ರೈತರಿಂದ 50ಕ್ಕೂ ಅಧಿಕ ಮಳಿಗೆಯನ್ನು ನಿರ್ಮಿಸಲಾಯಿತು. ಅಡುಗೆ ಮನೆಯಲ್ಲಿ ದಿನನಿತ್ಯ ಬಳಸುವ 150ಕ್ಕೂ ಅಧಿಕ ಆಹಾರ ಉತ್ಪನ್ನಗಳನ್ನು ಮಾರಾಟಕ್ಕೆ ಇಡಲಾಯಿತು. ನಗರ ಸೇರಿ ನಾನಾ ಭಾಗಗಳಿಂದ ನೂರಾರು ಜನ ಸಂತೆಯಲ್ಲಿ ಪಾಲ್ಗೊಂಡು ಉತ್ಪನ್ನಗಳನ್ನು ಖರೀದಿಸಿದರು.