ಹೊಸಪೇಟೆ: ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಯುವ ಜನತೆ ಹೆಚ್ಚೆಚ್ಚು ತೊಡಗಿಸಿಕೊಳ್ಳುವುದರಿಂದ; ದೇಶವನ್ನು ಸದೃಢವಾಗಿ ಕಟ್ಟಲು ಸಾಧ್ಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಹೇಳಿದರು.ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಬಿಜೆಪಿ ಯುವ ಮೋರ್ಚಾ ವಿಶೇಷ ಜಿಲ್ಲಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸಕಾರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಂಡು ದೇಶದ ಪ್ರಗತಿ ಬಗ್ಗೆ ಚಿಂತಿಸುವ ಯುವಕರು ನಾಯಕರಾಗುತ್ತಾರೆ. ಇಂತಹ ನಾಯಕರುಗಳನ್ನು ಬೆಳೆಸಲು ಬಿಜೆಪಿ ವೇದಿಕೆಯಾಗಿದೆ. ಅಲ್ಲದೇ ಪಕ್ಷ ನಿಷ್ಠೆ, ಪ್ರಾಮಾಣಿಕತೆಯಿಂದ ಯಾರು ಪಕ್ಷದಲ್ಲಿ ದುಡಿಯುತ್ತಾರೋ ಅಂತವರಿಗೆ ಪಕ್ಷ ಎಂದಿಗೂ ಕೈ ಬಿಡುವುದಿಲ್ಲ. ಹೀಗಾಗಿ ಜಿಲ್ಲಾ ಯುವ ಮೋರ್ಚಾದ ಎಲ್ಲ ಪದಾಧಿಕಾರಿಗಳು ಪರಿಣಾಮಕಾರಿ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು ಎಂದರು.ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಿಚಿಡಿ ಕೊಟ್ರೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಕ್ಷ ನೀಡಿರುವ ಯುವ ಚೌಪಾಲ್, ನಮೋ ಯುವ ಭಾರತ್, ಗೋಡೆ ಬರಹ ಸೇರಿ ಹಲವು ಜವಾಬ್ದಾರಿಯನ್ನು ಈಗಾಗಲೇ ಯುವ ಮೋರ್ಚಾದ ಹೂವಿನ ಹಡಗಲಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ ಹಾಗೂ ಹೊಸಪೇಟೆಯ ಮಂಡಳ ಪದಾಧಿಕಾರಿಗಳು ತುಂಬ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ದೇಶದ ವಿಚಾರ ಅಂತ ಬಂದಾಗ ಬಿಜೆಪಿ ಯುವ ಮೋರ್ಚಾ ಸದಾ ಮುಂದೆ ನಿಲ್ಲುತ್ತದೆ. ಜೊತೆಗೆ ಮುಂದಿನ ದಿನಗಳಲ್ಲಿ ಸಾಮಾಜಿಕ ಅನ್ಯಾಯಗಳ ವಿರುದ್ಧ ಹೋರಾಡಲು ಸಶಕ್ತ ಯುವ ಪಡೆ ಸಿದ್ದವಾಗಬೇಕಿದೆ ಎಂದರು.ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಅಡವಿಸ್ವಾಮಿ ಹೀರೆಮಠ ಮಾತನಾಡಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್. ರಾಘವೇಂದ್ರ, ಮಂಡಳ ಅಧ್ಯಕ್ಷ ಶಂಕರ್ ಮೇಟಿ, ಜಿಲ್ಲಾ ಯುವ ಮೋರ್ಚಾದ ಪದಾಧಿಕಾರಿಗಳಾದ ಕೆಎಚ್ ಎಂ. ಸಚಿನ್, ವಿನೋದ್ ಜಾಡರ್, ಸೂರಿ ಬಂಗಾರು, ಸಂಗಮೇಶ್ ಕಡೆಮನಿ, ನಂದಿ ವಿಕ್ರಮ್, ಶ್ರೀಕಾಂತ್ ಪೂಜಾರ್, ದೀವಾಕರ್ ಗೌಡ, ಅಜಯ್ ಕುಮಾರ್, ಪುನೀತ್ ಕುಮಾರ್, ವ್ಯಾಸರಾಜ್, ಅಯ್ಯಾಳಿ ರಾಜು, ಸಂಪತ್ ಮೂರ್ತಿ, ಹನುಮ ನಾಯ್ಕ ಮತ್ತಿತರರಿದ್ದರು.