ಹರಪನಹಳ್ಳಿ:ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡುವುದೇ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಎಸ್.ಜನಾರ್ದನ ಹೇಳಿದರು.ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿ.ಸಿ.ಟ್ರಸ್ಟ್ ಹಾಗೂ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ನಡೆದ ಗಾಂಧೀಸ್ಮೃತಿ ಮತ್ತು ಪಾನಮುಕ್ತ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ ಅ.2ರಿಂದ 15ರವರೆಗೆ ಮದ್ಯವರ್ಜನ ಶಿಬಿರ ಸೇರಿದಂತೆ ಅನೇಕ ಕಾರ್ಯಕ್ರಮಗಳು ಜರುಗಲಿದೆ. ವರ್ಷ ಪೂರ್ತಿ ಗಾಂಧಿ ಸ್ಮರಣೆ ನಡೆಯುತ್ತದೆ. ಈಗಾಗಲೇ ರಾಜ್ಯದಲ್ಲಿ 1800 ಶಿಬಿರಗಳನ್ನು ನಡೆದಿದ್ದು, ಈ ಪೈಕಿ 1.25 ಲಕ್ಷ ಜನರನ್ನು ಪಾನಮುಕ್ತರನ್ನಾಗಿ ಮಾಡಲಾಗಿದ್ದು ಇದರ ಕೀರ್ತಿ ಧರ್ಮಸ್ಥಳ ಸಂಘಕ್ಕೆ ಸಲ್ಲುತ್ತದೆ ಎಂದರು.ಗಾಂಧೀಜಿಯವರು ವ್ಯಸನಮುಕ್ತ ಸಮಾಜ ಹಳ್ಳಿಗಳ ಉದ್ದಾರ ಹಾಗೂ ಸ್ವಾಸ್ಥ್ಯ ಸಮಾಜ ನಿರ್ಮಾಣದ ಗುರಿಯನ್ನು ಹೊಂದಿದ್ದರು, ಈ ನಿಟ್ಟಿನಲ್ಲಿ ವಿರೇಂದ್ರ ಹೆಗಡೆಯವರು ಸಾಗುತ್ತಿದ್ದಾರೆ. ಜನರು ಇದಕ್ಕೆ ಸಹಕಾರ ನೀಡಬೇಕು ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅನ್ನ, ವಿದ್ಯೆ, ಅಭಯ, ಔಷಧಿ, ದಾನಗಳ ಮೂಲಕ ಜನರ ಸಹಭಾಗಿತ್ವದಲ್ಲಿ ಸಾಗುತ್ತಿದ್ದು ಕಷ್ಟದಿಂದ ದೂರ ಮಾಡಿ ಅವರಿಗೆ ಧೈರ್ಯ ತುಂಬಿ, ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಅನುಕೂಲ ಕಲ್ಪಿಸಿದೆ ಎಂದು ತಿಳಿಸಿದರು.ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ಪಿ.ಎಸ್. ಅರವಿಂದನ್ ಮಾತನಾಡಿ, ಗಾಂಧೀಜಿಯವರು ರಾಮರಾಜ್ಯದ ಕನಸು ಕಂಡಿದ್ದರು. ಇದನ್ನು ಈಡೇರಿಸಲು ಸರ್ಕಾರದಿಂದ ಆಗಲಿಲ್ಲ. ಬದಲಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ವಿರೇಂದ್ರ ಹೆಗಡೆಯವರಿಂದ ಬದಲಾಗುತ್ತಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಗೌರವ ಸಲಹೆಗಾರರಾದ ಫಾ.ಸಿಲ್ವೇಸ್ಟರ್ ಪಿರೇರಾ ಮಾತನಾಡಿ ಬಡವರು ಬಡತನ, ಮೂಢನಂಬಿಕೆಯಿಂದ ಹೊರಬಂದು ಉತ್ತಮ ಜೀವನ ನಡೆಸಲು ಧರ್ಮಸ್ಥಳ ಸಂಸ್ಥೆ ಹಲವಾರು ಕಾರ್ಯಕ್ರಮ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುತ್ತಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಗುಂಡಗತ್ತಿ, ಮಂಜುನಾಥ ಬಿ.ಜಿ.ಕುಸುಮಾ ಜಗದೀಶ ಮಾತನಾಡಿದರು.ತಾಲೂಕು ಯೋಜನಾಧಿಕಾರಿ ಸುಬ್ರಮಣ್ಯ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸದಸ್ಯರಾದ ಎಸ್.ಪಿ.ಲಿಂಬ್ಯಾನಾಯ್ಕ, ಜಿ.ಬಿ.ಸಿದ್ದಪ್ಪ, ಎನ್.ವಿಜಯಕುಮಾರ, ಹಾಲೇಶ್, ಎಚ್.ಎಂ.ತಿಪ್ಪೇಸ್ವಾಮಿ, ಸೇರಿದಂತೆ ಇತರರು ಇದ್ದರು.
ನಾನು ಹಲವಾರು ವರ್ಷಗಳಿಂದ ಕುಡಿತದ ಚಟಕ್ಕೆ ಅಂಟಿಕೊಂಡಿದ್ದೆ. ಆಗ ಜನ ನನ್ನನ್ನು ಮಾತನಾಡಿಸುತ್ತಿರಲಿಲ್ಲ; ಸೇರುತ್ತಿರಲಿಲ್ಲ. ಧರ್ಮಸ್ಥಳ ಸಂಘದ ಮದ್ಯವರ್ಜನ ಶಿಬಿರದಲ್ಲಿ ಪಾಲ್ಗೊಂಡೆ. ಅಲ್ಲಿ ನನಗೆ ಜಾಗೃತಿ ಮೂಡಿಸಿದ ಪರಿಣಾಮ ಕುಡಿತದಿಂದ ಮುಕ್ತನಾಗಿ, ಈಗ ಕುಟುಂಬದ ಜೊತೆಗೆ ಉತ್ತಮ ಜೀವನ ನಡೆಸುತ್ತಿದ್ದೇನೆ ಎನ್ನುತ್ತಾರೆ ಬೂದಿಹಾಳದ ಮದ್ಯವರ್ಜನ ಶಿಬಿರಾರ್ಥಿ ಅನುರಾಧ.