ಕನ್ನಡಪ್ರಭ ವಾರ್ತೆ ಸೊರಬ
ಕಟ್ಟಡವನ್ನು ಯಾರು ಬೇಕಾದರೂ ಕಟ್ಟಬಹುದು. ಆದರೆ, ಆ ಕಟ್ಟಡದ ನೆರಳಿನ ಗೂಡಿನಲ್ಲಿ ಮಕ್ಕಳ ವ್ಯಕ್ತಿತ್ವ ಮತ್ತು ಬದುಕನ್ನು ಕಟ್ಟುವುದು ಕಷ್ಟದ ಕೆಲಸವಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.ತಾಲೂಕಿನ ಕಮರೂರು ಗ್ರಾಮದ ಶ್ರೀ ಸತ್ಯಾಸಾಯಿ ಸರ್ವನಿಕೇತನಮ್ ಆವರಣದಲ್ಲಿ ಶ್ರೀ ಸತ್ಯಸಾಯಿ ಲೋಕಸೇವಾ ಗುರುಕುಲಮ್‌ನ ಸಾಯಿ ಸ್ವಾಸ್ಥ್ಯ ಆರೋಗ್ಯ ಕೇಂದ್ರ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ದೈಹಿಕ, ಮಾನಸಿಕ ಆರೋಗ್ಯವನ್ನು ನೀಡುತ್ತಿರುವ ಶ್ರೀ ಸತ್ಯಾಸಾಯಿ ಲೋಕಸೇವಾ ಸಂಸ್ಥೆಯ ಕೇಂದ್ರ ತಾಲೂಕಿನ ಕಮರೂರು ಗ್ರಾಮೀಣ ಭಾಗದಲ್ಲಿ ಪ್ರಾರಂಭ ಆಗಿರುವುದು ನಮ್ಮೆಲ್ಲರ ಸೌಭಾಗ್ಯ. ನೊಂದವರ ಧ್ವನಿಯಾಗಿ ಸಮಾಜ ಕಾರ್ಯದ ಶ್ರೀ ಮಧುಸೂದನ ಗುರುಗಳ ಆಶೀರ್ವಾದದಲ್ಲಿ ಆ ಕೆಲಸ ಅಭೂತಪೂರ್ವವಾಗಿ ನಡೆಯುತ್ತಿದೆ. ಅವರ ಆದರ್ಶ ನಮ್ಮೆಲ್ಲರಲ್ಲೂ ಬರಬೇಕು. ಆಗ ಮಾತ್ರ ಭಾರತವನ್ನು ವಿಶ್ವಗುರುವಾಗಿ ಕಾಣುವುದಕ್ಕೆ ಸಾಧ್ಯವಿದೆ. ಶ್ರೀ ಸತ್ಯಾಸಾಯಿ ಬಾಬಾ ಸೇವಕನಾಗಿ ಈ ಸಂಸ್ಥೆಯ ಎಲ್ಲ ಸಮಾಜಮುಖಿ ಕಾರ್ಯಗಳಿಗೆ ಸಹಕಾರ ನೀಡುವುದಾಗಿ ತಿಳಿಸಿದರು.ಗುರುಕುಲಮ್ ಪ್ರಧಾನ ಪಾಲಕರಾದ ಶಿವಪ್ರಸಾದ ಭಟ್ ಅಧ್ಯಕ್ಷತೆ ವಹಿಸಿ, ಸಾಯಿ ಸ್ವಾಸ್ಥ್ಯ ಆರೋಗ್ಯ ಕೇಂದ್ರದಿಂದ ಬಡಜನರಿಗೆ ಅನುಕೂಲವಾಗಲಿದೆ. ಮುಂದಿನ 9 ತಿಂಗಳಿನಲ್ಲಿ ಸ್ವಾಮೀಜಿಗಳಿಂದ ಕೇಂದ್ರ ಉದ್ಘಾಟನೆಗೊಳ್ಳಲಿದೆ. ಸಂಸ್ಥೆಯ ಅನ್ನಪೂರ್ಣ ಪೌಷ್ಟಿಕ ಯೋಜನೆಯು ಈ ಕೇಂದ್ರದಲ್ಲಿ ಆರಂಭವಾಗಲಿದೆ. ಗರ್ಭಿಣಿಯರು ಇದರ ಲಾಭ ಪಡೆಯಬಹುದಾಗಿದೆ ಎಂದರು.
ಕಾರ್ಯದರ್ಶಿ ಬಿ.ಆರ್. ಧೃವ ಉಲ್ಲಾಸ್, ಬೆನ್ನೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಎಸ್.ಶೀಲ್ಪಾ ವೇದಿಕೆಯಲ್ಲಿ ಇದ್ದರು. ಈ ಸಂದರ್ಭದಲ್ಲಿ 2022-23ನೇ ಸಾಲಿನ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾರ್ಥಿ ಪುರಸ್ಕಾರ ನೀಡಲಾಯಿತು.ಸಮಾರಂಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಟಿ.ಡಿ. ಮೇಘರಾಜ, ತಾಲೂಕು ಅಧ್ಯಕ್ಷ ಪ್ರಕಾಶ ತಲಕಾಲಕೊಪ್ಪ, ಹೋಬಳಿ ಅಧ್ಯಕ್ಷ ರಾಜು ಕೆಂಚಿಕೊಪ್ಪ, ಶ್ರೀನಿವಾಸ ಭಟ್, ಮಧುರ ಭಟ್, ಮಂಜಪ್ಪ, ಶ್ರೀ ಸತ್ಯಾಸಾಯಿ ಸರ್ವನಿಕೇತನಮ್ ಸಂಸ್ಥೆಯ ಆಚಾರ್ಯರು, ಗುರು ಮಾತೆಯರು, ಸಿಬ್ಬಂದಿ, ಗ್ರಾಮಸ್ಥರು, ಸಂಸ್ಥೆ ವಿದ್ಯಾರ್ಥಿಗಳು ಇದ್ದರು.
ಕಾರ್ಯಕ್ರಮದಲ್ಲಿ ಗುರುಮಾತೆ ರೇಖಾ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.- - -
-20ಕೆಪಿಸೊರಬ03:ಸೊರಬ ತಾಲೂಕಿನ ಕಮರೂರು ಗ್ರಾಮದಲ್ಲಿ ಶ್ರೀ ಸತ್ಯಸಾಯಿ ಲೋಕ ಸೇವಾ ಗುರುಕುಲಮ್‌ನ ಸಾಯಿ ಸ್ವಾಸ್ಥ್ಯ ಆರೋಗ್ಯ ಕೇಂದ್ರ ಕಟ್ಟಡಕ್ಕೆ ಸಂಸದ ಬಿ.ವೈ. ರಾಘವೇಂದ್ರ ಗುದ್ದಲಿಪೂಜೆ ನೆರವೇರಿಸಿದರು.