ಹರಿಹರ ಜಾತ್ರೆಯಲ್ಲಿ ಎತ್ತುಗಳು, ಬೆಲ್ಲದ ಬಂಡಿ ಮೆರವಣಿಗೆ

KannadaprabhaNewsNetwork |  
Published : Mar 21, 2025, 12:36 AM IST
27 ಹೆಚ್‍ಆರ್‍ಆರ್ 427 ಹೆಚ್‍ಆರ್‍ಆರ್ 4 ಎಹರಿಹರ: ಗ್ರಾಮದೇವತೆ ಊರಮ್ಮ ದೇವಿಯ ಮೂರನೇ ದಿನದ ಉತ್ಸವದ ಅಂಗವಾಗಿ ನಗರದ ಕಸಬಾ ಭಾಗದ ರೈತರಿಂದ ಆಕರ್ಷಕ ಎತ್ತುಗಳು ಮತ್ತು ಅಲಂಕೃತ ಬೆಲ್ಲದ ಬಂಡಿಯ ಮೆರವಣಿಗೆ ನಡೆಯಿತು. | Kannada Prabha

ಸಾರಾಂಶ

ಗ್ರಾಮ ದೇವತೆ ಊರಮ್ಮ ದೇವಿ ಉತ್ಸವದ 3ನೇ ದಿನ ಗುರುವಾರ ನಗರದ ಕಸಬಾ ಭಾಗದ ರೈತರಿಂದ ಆಕರ್ಷಕ ಎತ್ತುಗಳು ಮತ್ತು ಅಲಂಕೃತ ಬೆಲ್ಲದ ಬಂಡಿಯ ಮೆರವಣಿಗೆ ನಡೆಸಿದರು.

- ಶಿಬಾರ ವೃತ್ತ, ಕುರುಬರಗೇರಿ ವೃತ್ತದಲ್ಲಿ ರೈತರು, ಯುವಕರಿಗೆ ಮಜ್ಜಿಗೆ ವಿತರಣೆ । - - - ಕನ್ನಡಪ್ರಭ ವಾರ್ತೆ ಹರಿಹರ ಗ್ರಾಮ ದೇವತೆ ಊರಮ್ಮ ದೇವಿ ಉತ್ಸವದ 3ನೇ ದಿನ ಗುರುವಾರ ನಗರದ ಕಸಬಾ ಭಾಗದ ರೈತರಿಂದ ಆಕರ್ಷಕ ಎತ್ತುಗಳು ಮತ್ತು ಅಲಂಕೃತ ಬೆಲ್ಲದ ಬಂಡಿಯ ಮೆರವಣಿಗೆ ನಡೆಸಿದರು.

ನಗರದ ಜೋಡು ಬಸವೇಶ್ವರ ದೇವಸ್ಥಾನದಿಂದ ಸಂಜೆ ಆರಂಭವಾದ ಮೆರವಣಿಗೆ ಹೊಸ ಭರಂಪುರ ಬಡಾವಣೆ ಊರಮ್ಮ ದೇವಸ್ಥಾನದಲ್ಲಿ ಊರಮ್ಮದೇವಿಗೆ ಪೂಜೆ ಸಲ್ಲಿಸಿ, ಎತ್ತುಗಳ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಹಳ್ಳಿಕಾರ್ ಮತ್ತು ವಿವಿಧ ತಳಿಯ ಎತ್ತುಗಳನ್ನು ಆಕರ್ಷಕವಾಗಿ ಸಿಂಗರಿಸಲಾಗಿತ್ತು. ಎತ್ತುಗಳ ಕೋಡುಗಳಿಗೆ ಬಣ್ಣ ಬಳಿದು, ರಿಬ್ಬನ್, ಮೊಗಡಾ, ಮೂಗುದಾರ, ಕೊರಳಗಂಟೆ, ಗೊಂಡ್ಯಾ, ಕೊರಳಪಟ್ಟಿ, ಬಣ್ಣದ ಬಲೂನು, ಮಿಂಚು ಪಟ್ಟಿ ಸೇರಿದಂತೆ ವಿವಿಧ ವರ್ಣರಂಜಿತ ವಸ್ತುಗಳಿಂದ ಸಿಂಗಾರ ಮಾಡಿದ್ದು ನೋಡುಗರ ಕಣ್ಮನ ಸೆಳೆದವು.

ಜೋಡೆತ್ತಿನ ಬೆಲ್ಲದ ಬಂಡೆಗಳನ್ನು ಸಹ ವಿವಿಧ ರೀತಿಯಲ್ಲಿ ಅಲಂಕಾರ ಮಾಡಿ, ಮೆರವಣಿಗೆ ನಡೆಸಿದ್ದು, ಉತ್ಸವಕ್ಕೆ ಮೆರುಗು ತಂದಿತು. ಭಾಜಾಭಜಂತ್ರಿ, ತಮಟೆ ಬಡಿತದೊಂದಿಗೆ ರೈತರು, ಯುವಕರು ಹೆಜ್ಜೆ ಹಾಕಿ ಕುಣಿದು ಸಂಭ್ರಮಿಸಿದರು.

ಹರಿಹರ ಮತ್ತು ವಿವಿಧ ತಾಲೂಕುಗಳಿಂದ ಆಗಮಿಸಿದ್ದ ದಷ್ಟಪುಷ್ಟ ವಿವಿಧ ತಳಿಯ ಎತ್ತುಗಳ ಮೆರವಣಿಗೆ ವಿಶೇಷತೆ ಮೆರೆಯಿತು. ಮಹಿಳೆಯರು, ಮಕ್ಕಳು, ಹಿರಿಯರು ಮತ್ತು ಹಬ್ಬಕ್ಕೆ ಆಗಮಿಸಿದ ಬೀಗರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಮೆರವಣಿಗೆ ಸಾಗುವುದನ್ನು ಕಂಡರು. ಶಿಬಾರ ವೃತ್ತ ಹಾಗೂ ಕುರುಬರಗೇರಿ ವೃತ್ತದಲ್ಲಿ ರೈತರಿಗೆ ಮತ್ತು ಯುವಕರಿಗೆ ಮಜ್ಜಿಗೆ ವಿತರಣೆ ನಡೆಯಿತು.

ಮೆರವಣಿಗೆಯು ಹೊಸ ಭರಂಪುರ, 108 ಲಿಂಗೇಶ್ವರ ದೇವಸ್ಥಾನ, ಶಿಬಾರ ವೃತ್ತ, ಹೊಸಪೇಟೆ ಬೀದಿ, ಕುರುಬರಗೇರಿ ವೃತ್ತ, ಮರಾಠಗಲ್ಲಿ, ಮುಖ್ಯ ರಸ್ತೆ, ರಾಣಿ ಚೆನ್ನಮ್ಮ ವೃತ್ತ, ಶಿವಮೊಗ್ಗ ರಸ್ತೆ ಮಹಜೇನಹಳ್ಳಿ ಗ್ರಾಮದ ಭಾಗಕ್ಕೆ ತೆರಳಿತು. ಅನಂತರ ಪುನಃ ರಾಣಿ ಚೆನ್ನಮ್ಮ ವೃತ್ತಕ್ಕೆ ಆಗಮಿಸಿ ದೇವಸ್ಥಾನ ರಸ್ತೆಯಲ್ಲಿನ ಚೌಕಿ ಮನೆ ಬಳಿ ಆಗಮಿಸಿತು. ಉತ್ಸವಮೂರ್ತಿ ಊರಮ್ಮ ದೇವಿಗೆ ಪೂಜೆ ಸಲ್ಲಿಸಿದ ರೈತರು, ಮಹಾಮಂಗಳಾರತಿ ಬಳಿಕ ಮುಂಬರುವ ದಿನಗಳಲ್ಲಿ ಮಳೆ-ಬೆಳೆ ಸಮೃದ್ಧಿಯಾಗಲಿ ಎಂದು ದೇವಿಯಲ್ಲಿ ಪ್ರಾರ್ಥಿಸಿಕೊಂಡರು.

ಕಾಂಗ್ರೆಸ್ ಮುಖಂಡ ಎನ್.ಎಚ್. ಶ್ರೀನಿವಾಸ್ ನಂದಿಗಾವಿ, ಚೂರಿ ಜಗದೀಶ್, ಎಂ.ಎಚ್ ಚಂದ್ರಶೇಖರ್, ಕೆ.ಬಿ. ರಾಜಶೇಖರ್, ಬೆಣ್ಣೆಸಿದ್ದೇಶ್, ಗುತ್ತಿಗೆದಾರ ಸುಭಾಷ್‌ ಎಚ್.ಎಸ್., ರಾಜು, ಶೇಖರಗೌಡ ಪಾಟೀಲ್, ಪಾಲಾಕ್ಷಿ ಪೈ, ಮಲ್ಲಿಕಾರ್ಜುನ್ ಗದ್ಗಿಮಠ, ಚಿದಾನಂದ ಕಂಚಿಕೇರಿ, ಗೌಡರ ಸಂತೋಷ, ಕಣ್ಣಪ್ಪ, ಮಜ್ಜಿಗಿ ವೀರಭದ್ರಪ್ಪ, ಹಾವನೂರು ಈರಣ್ಣ, ಕರಿಬಸಪ್ಪ ಕಂಚಿಕೇರಿ, ಪರಶುರಾಮ್, ಗುರುಪ್ರಸಾದ್ ಸಿ.ಕೆ., ಶಂಭು ಹಾವನೂರ್, ಪೂಜಾರ್ ಹೇಮಣ್ಣ, ಹನುಮಂತಪ್ಪ ಬೆಣ್ಣೆ, ಶಂಭುಲಿಂಗ ಸ್ವಾಮಿ ಸೇರಿದಂತೆ ಇತರರು ಭಾಗವಹಿಸಿದ್ದರು.

- - -

-27ಎಚ್‍ಆರ್‍ಆರ್4, 4ಎ:

ಹರಿಹರ ಗ್ರಾಮದೇವತೆ ಊರಮ್ಮ ದೇವಿಯ ಮೂರನೇ ದಿನದ ಉತ್ಸವ ಅಂಗವಾಗಿ ಕಸಬಾ ಭಾಗದ ರೈತರಿಂದ ಆಕರ್ಷಕ ಎತ್ತುಗಳು, ಅಲಂಕೃತ ಬೆಲ್ಲದ ಬಂಡಿಯ ಮೆರವಣಿಗೆ ನಡೆಯಿತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ