ಬೇಸಿಗೆ ಶಿಬಿರಗಳು ಕ್ರಿಯಾಶೀಲತೆಯೊಡನೆ ಸೃಜನಶೀಲತೆ ಬೆಳೆಸುತ್ತವೆ: ಬನ್ನೂರು ಕೆ. ರಾಜು

KannadaprabhaNewsNetwork | Published : May 16, 2024 12:49 AM

ಸಾರಾಂಶ

ಇಂದಿನ ಶಿಕ್ಷಣ, ವಿಷಯ, ವಿಚಾರ, ಆಟ, ಪಾಠ, ಪ್ರವಚನ, ಸರ್ಕಾರದ ನೀತಿ, ನಿಯಮ ಗಳಾವುವೂ ಹಿಂದಿನಂತಿಲ್ಲ. ಪೋಷಕರೂ ಒಳಗೊಂಡಂತೆ ಶಿಕ್ಷಕರ ಮನೋಸ್ಥಿತಿ ಕೂಡ. ಆಧುನಿಕ ಭರಾಟೆಯ ವೇಗದ ಜಗತ್ತಿನಲ್ಲಿ ಬಿತ್ತಿದ ತಕ್ಷಣ ಡಾಕ್ಟರ್ಸ್, ಎಂಜಿನಿಯರ್ಸ್, ಐಎಎಸ್, ಐಪಿಎಸ್ ಅಧಿಕಾರಿ ಗಳೆಂಬ ಫಲದ ನಿರೀಕ್ಷೆಯಲ್ಲಿ ಮಕ್ಕಳ ಭವಿಷ್ಯವನ್ನು ಅವರು ತೆಗೆಯುವ ಅಂಕಗಳು ನಿರ್ಧರಿಸುವಂತಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಮಕ್ಕಳಿಗೆ ಶಾಲೆಯಿಂದಾಚೆಗಿನ ಜಗತ್ತನ್ನು ಪರಿಚಯಿಸುವ ಚಿಣ್ಣರ ಚಿತ್ತಾರಗಳಂತಹ ಬೇಸಿಗೆ ಶಿಬಿರಗಳು ಕ್ರಿಯಾಶೀಲತೆಯೊಡನೆ ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸುತ್ತವೆಯೆಂದು ಸಾಹಿತಿ ಬನ್ನೂರು ಕೆ. ರಾಜು ಅಭಿಪ್ರಾಯಪಟ್ಟರು.

ಕನಕದಾಸನಗರದ ನಾಗ ಮಾರ್ಷಲ್ ಆರ್ಟ್ಸ್ ಅಕಾಡೆಮಿಯ ಆವರಣದಲ್ಲಿ ಪ್ರತಿಷ್ಠಿತ ಸೇವಾ ಸಂಸ್ಥೆಗಳಾದ ಪ್ರಜ್ಞಾ ಶೈಕ್ಷಣಿಕ ಮತ್ತು ಸಾಂಸ್ಕೃಕ ಟ್ರಸ್ಟ್ ಹಾಗೂ ಡಾ.ನಾ.ಸು. ಹರ್ಡಿಕರ್ ಭಾರತ ಸೇವಾದಳ ಪ್ರೌಢಶಾಲೆ ಸಂಯುಕ್ತವಾಗಿ ಬುಧವಾರ ಆಯೋಜಿಸಿದ್ದ ಚಿಣ್ಣರ ಚಿತ್ತಾರ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಕ್ಕಳ ಬೌದ್ಧಿಕ ಮತ್ತು ಮಾನಸಿಕ ವಿಕಸನದ ಪ್ರಬುದ್ಧತೆಗಾಗಿ ಪ್ರತಿಯೊಂದು ವಿಷಯಗಳ ಅವಶ್ಯಕತೆ ಇದ್ದು ಅದು ಕೇವಲ ಒಂದು ಶಾಲಾ ತರಗತಿಯಲ್ಲಿ ಖಂಡಿತ ಸಿಗಲಾರದೆಂದರು.

ಇಂದಿನ ಶಿಕ್ಷಣ, ವಿಷಯ, ವಿಚಾರ, ಆಟ, ಪಾಠ, ಪ್ರವಚನ, ಸರ್ಕಾರದ ನೀತಿ, ನಿಯಮ ಗಳಾವುವೂ ಹಿಂದಿನಂತಿಲ್ಲ. ಪೋಷಕರೂ ಒಳಗೊಂಡಂತೆ ಶಿಕ್ಷಕರ ಮನೋಸ್ಥಿತಿ ಕೂಡ. ಆಧುನಿಕ ಭರಾಟೆಯ ವೇಗದ ಜಗತ್ತಿನಲ್ಲಿ ಬಿತ್ತಿದ ತಕ್ಷಣ ಡಾಕ್ಟರ್ಸ್, ಎಂಜಿನಿಯರ್ಸ್, ಐಎಎಸ್, ಐಪಿಎಸ್ ಅಧಿಕಾರಿ ಗಳೆಂಬ ಫಲದ ನಿರೀಕ್ಷೆಯಲ್ಲಿ ಮಕ್ಕಳ ಭವಿಷ್ಯವನ್ನು ಅವರು ತೆಗೆಯುವ ಅಂಕಗಳು ನಿರ್ಧರಿಸುವಂತಾಗಿದೆ. ಹಾಗಾಗಿ ವಿಶೇಷವಾಗಿ ಇಂದಿನ ಬಹುತೇಕ ನಗರದ ಮಕ್ಕಳಿಗೆ ಮತ್ತು ಅವರ ಪೋಷಕರಿಗೆ ಅವರ ಸುತ್ತಲೂ ಇರುವ ಪ್ರಕೃತಿ ಸಂಪನ್ಮೂಲದ ಅರಿವಿಲ್ಲ ಎಂದು ಅವರು ತಿಳಿಸಿದರು.

ರಂಗಕರ್ಮಿ, ರಂಗ ನಿರ್ದೇಶಕ ಮೈಮ್ ರಮೇಶ್ ಮಾತನಾಡಿ, ನಮ್ಮಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರ ನಶಿಸಿ ಹೋಗುತ್ತಿದೆ. ಇಂತಹ ಕಾಲಘಟ್ಟದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಸುಸಂಸ್ಕೃತರನ್ನಾಗಿ ಬೆಳೆಸುವುದೇ ಒಂದು ಸವಾಲಿನ ಕೆಲಸವಾಗಿದೆ. ಒಳಿತಿಗಿಂತ ಹೆಚ್ಚಾಗಿ ಕೆಟ್ಟದ್ದೇ ತುಂಬಿರುವ ನಮ್ಮ ಸಮಾಜದಲ್ಲಿ ಪೋಷಕರು ಮಕ್ಕಳನ್ನು ಬಹಳ ಜಾಗೃತಿಯಿಂದ, ಬೆಳೆಸಬೇಕಾಗಿದೆ. ಅಷ್ಟೇ ಜಾಗರೂಕತೆಯಿಂದ ನೋಡಿ ಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.

ಪ್ರಜ್ಞಾ ಶೈಕ್ಷಣಿಕ ಟ್ರಸ್ಟ್ ನ ಅಧ್ಯಕ್ಷ ಸೋಸಲೆ ಸಿದ್ಧರಾಜು ಅಧ್ಯಕ್ಷತೆ ವಹಿಸಿದ್ದರು. ಭಾರತ ಸೇವಾದಳದ ಕಾರ್ಯದರ್ಶಿ ಬೀರಿಹುಂಡಿ ಬಸವಣ್ಣ, ಭಾರತ ಸೇವಾದಳದ ಶಾಲಾ ಸಲಹಾ ಸಮಿತಿ ಅಧ್ಯಕ್ಷ ಡಿ.ಆರ್. ಶೇಷಾಚಲ, ವಲಯ ಸಂಘಟಕ ಕೆ. ಈರಯ್ಯ , ಪ್ರಜ್ಞಾ ಶೈಕ್ಷಣಿಕ ಟ್ರಸ್ಟ್ ನ ಖಜಾಂಚಿ ಹಾಗೂ ಉಪನ್ಯಾಸಕ ಡಾ. ತಿರುಮಲೇಶ್, ಸಂಗೀತ ಶಿಕ್ಷಕ ನವೀನ್, ಮಹಾದೇವ್ ಇದ್ದರು. ಶಿಬಿರಾರ್ಥಿ ಮಕ್ಕಳು ಪ್ರಾರ್ಥನೆಯ ಮೂಲಕ ಭೂಮಿ ತಾಯಿಯೇ ನಿನಗೆ ವಂದನೆ ಎಂಬ ಗೀತೆಯನ್ನು ಚೆಂದವಾಗಿ ಹಾಡಿ ನೆರೆದಿದ್ದವರ ಗಮನ ಸೆಳೆದರು.

Share this article