ಹಾನಗಲ್ಲ: ಅಕ್ಕಿಆಲೂರಿನ ಸಿ.ಜಿ.ಬೆಲ್ಲದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುರ್ಕಾ ಹಾಗೂ ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳ ಮನ ಒಲಿಸಿ ಕಾಲೇಜಿನ ಸಮವಸ್ತ್ರ ಪಾಲನೆಗೆ ಪ್ರಾಚಾರ್ಯ ಡಾ. ವೀರೇಶ ಕುಮ್ಮೂರ ಮಾಡಿದ ಮನವಿಗೆ ವಿದ್ಯಾರ್ಥಿಗಳು ಒಪ್ಪಿರುವ ಘಟನೆ ಗುರುವಾರ ನಡೆದಿದೆ. ಹಾನಗಲ್ಲ ತಾಲೂಕಿನ ಅಕ್ಕಿಆಲೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಮಧ್ಯಾಹ್ನ 12.30 ಗಂಟೆಯ ಹೊತ್ತಿಗೆ ಕೆಲ ವಿದ್ಯಾರ್ಥಿನಿಯರು ಬುರ್ಕಾ ಧರಿಸಿ ಬಂದರೆಂದು, ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದಿದ್ದಾರೆ. ಇದರಿಂದಾಗಿ ಕಾಲೇಜಿನಲ್ಲಿ ಕೆಲ ಕಾಲ ವಿದ್ಯಾರ್ಥಿಗಳ ನಡುವೆ ಚರ್ಚೆಗಳು ನಡೆಯುತ್ತಿದ್ದಂತೆ ಪ್ರಾಚಾರ್ಯರ ಗಮನಕ್ಕೆ ವಿಷಯ ತಿಳಿದಿದೆ. ಕೂಡಲೇ ವಿಷಯ ತಿಳಿದ ಪ್ರಾಚಾರ್ಯ ಡಾ. ವೀರೇಶ ಕುಮ್ಮೂರ ಬುರ್ಕಾ ಧರಿಸಿದ ಹಾಗೂ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳನ್ನು ಕರೆದು ಮನವರಿಕೆ ಮಾಡಿ, ಕಾಲೇಜಿನ ಆವರಣದಲ್ಲಿ ಕಾಲೇಜಿನ ಸಮವಸ್ತ್ರವನ್ನೇ ಧರಿಸಬೇಕು. ಅನಗತ್ಯವಾಗಿ ಗೊಂದಲ ಸೃಷ್ಟಿಗೆ ಅವಕಾಶ ಮಾಡಿಕೊಡಬೇಡಿ. ಕಾಲೇಜಿನ ಶಿಸ್ತು ಉಲ್ಲಂಘನೆ ಸರಿ ಅಲ್ಲ ಎಂದು ಮನವರಿಕೆ ಮಾಡಿದ್ದಾರೆ. ಇದರಿಂದ ಕಾಲೇಜಿನ ವಾತಾವರಣ ತಿಳಿಯಾಗಿದೆ. ಇನ್ನು ಮುಂದೆ ಯಾವುದೇ ವಿದ್ಯಾರ್ಥಿಗಳು ಕಾಲೇಜಿನ ಶಿಸ್ತು ಹಾಗೂ ಸಮವಸ್ತ್ರ ನಿಯಮವನ್ನು ಪಾಲಿಸಲೇಬೇಕು. ಇದರಿಂದ ಕಾಲೇಜಿನ ವಾತಾವರಣ ಯಾವುದೇ ರೀತಿಯ ತೊಂದರೆ ಆಗದಂತೆ ನಡೆದುಕೊಳ್ಳುವುದು ಕಡ್ಡಾಯ ಎಂದು ಪ್ರಾಚಾರ್ಯರು ತಿಳಿಸಿದ್ದಾರೆ.ಒಂದು ತಿಂಗಳ ಹಿಂದೆ ಇಂತಹದ್ದೇ ಘಟನೆ ನಡೆದಿತ್ತು. ಆಗ ಕಾಲೇಜಿನ ಪ್ರಾಚಾರ್ಯರು ಉಪನ್ಯಾಸಕರು ವಿದ್ಯಾರ್ಥಿಗಳಿಗೆ ತಿಳುವಳಿಕೆ ಹೇಳಿದ್ದರು ಎನ್ನಲಾಗಿದೆ. ಆದಾಗ್ಯೂ ಮತ್ತೆ ಗುರುವಾರ ಈ ಘಟನೆ ನಡೆದಿದೆ. ಇನ್ನು ಮುಂದೆ ಇಂಥ ಘಟನೆ ನಡೆಯದಂತೆ ಕ್ರಮ ಜರುಗಿಸಲು ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕ ಸಿಬ್ಬಂದಿ ನಿರ್ಧರಿಸಿದ್ದಾರೆ.