ಕನ್ನಡಪ್ರಭ ವಾರ್ತೆ, ಹನೂರು
ವಿದ್ಯುತ್ ಟ್ರಾನ್ಸ್ ಫಾರ್ಮ್ ಇನ್ವರ್ಟರ್ ಬೂಸ್ಟರ್ ಸುಟ್ಟು ಹೋಗಿ ಕುಡಿಯುವ ನೀರಿನ ಸಮಸ್ಯೆ ಉಂಟಾದ ಘಟನೆ ತಾಲೂಕಿನ ನೆಲ್ಲೂರು ಗ್ರಾಮದಲ್ಲಿ ನಡೆದಿದೆ.ಗ್ರಾಮದಲ್ಲಿರುವ ವಿದ್ಯುತ್ ಟಿಸಿ ಬಳಿ ಹೊಗ್ಯಂ ಗ್ರಾಮದವರೆಗೆ ಸಂಪರ್ಕ ನೀಡಿರುವ ಇನ್ವರ್ಟರ್ ಬೂಸ್ಟರ್ ಸುಟ್ಟು ಹೋಗಿದ್ದರಿಂದ ವಿವಿಧ ಗ್ರಾಮಗಳ ತೋಟದ ಮನೆಯ ಪಂಪ್ ಸೆಟ್‌ಗಳಿಗೆ ಲೋ ವೋಲ್ಟೇಜ್ ಉಂಟಾಗಿ ಮೋಟರ್ ಚಾಲನೆಯಾಗದೇ ಕುಡಿಯುವ ನೀರಿನ ಸಮಸ್ಯೆ ಜೊತೆಗೆ ಜನ ಜಾನುವಾರು, ಬೆಳೆಗಳಿಗೂ ಸಹ ನೀರಿಲ್ಲದಂತಾಗಿದೆ.
ಚೆಸ್ಕಾಂ ಅಧಿಕಾರಿಗಳಿಗೆ ಹಲವಾರು ತಿಂಗಳಿಂದ ಇನ್ವರ್ಟರ್ ಬೂಸ್ಟರ್ ಅಳವಡಿಸಿ ಸಮರ್ಪಕ ವಿದ್ಯುತ್ ಸರಬರಾಜು ಮಾಡುವಂತೆ ಮನವಿ ಮಾಡಿದ್ದರೂ ಕೂಡ ಅಧಿಕಾರಿಗಳು ಸ್ಪಂದಿಸದೆ ಇರುವುದರಿಂದ ಬೆಳೆಗಳು ಒಣಗುತ್ತಿವೆ. ಜೊತೆಗೆ ಕುಡಿಯುವ ನೀರಿನ ಸಮಸ್ಯೆ ಸಹ ಗಡಿ ಗ್ರಾಮದಲ್ಲಿ ಉಲ್ಬಣಗೊಂಡಿದೆ. ಸಮಸ್ಯೆಯನ್ನು ಕೇಳುವವರು ಇಲ್ಲದಂತಾಗಿದೆ.ಚೆಸ್ಕಾಂ ಅಧಿಕಾರಿಗಳು ಕೂಡಲೇ ಗ್ರಾಮದತ್ತ ತೆರಳಿ ವಿದ್ಯುತ್ ಟಿಸಿ ಇನ್ವರ್ಟರ್ ಬೂಸ್ಟರ್ ಅಳವಡಿಸಿ ರೈತರಿಗೆ ಸಮರ್ಪಕ ವಿದ್ಯುತ್ ಸರಬರಾಜು ಮಾಡಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಕೂಡ್ಲೂರು ಘಟಕದ ಅಧ್ಯಕ್ಷ ಕಾಶಿ ಗೌಡ ಎಚ್ಚರಿಸಿದ್ದಾರೆ.ಇಂದು ವಿದ್ಯುತ್ ಸಮಸ್ಯೆ ಖಂಡಿಸಿ ಪ್ರತಿಭಟನೆ: ತಾಲೂಕಿನ ಎಲ್ಲೇ ಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕೆವಿಎನ್ ದೊಡ್ಡಿ, ಎಂಟಿ ದೊಡ್ಡಿ, ಗೂಳ್ಯ ಬೂದುಗುಪ್ಪೆ, ಗಾಂಧಿನಗರ ಹಾಗೂ ಗುಂಡಾಲ್ ಜಲಾಶಯ ನೀರಾವರಿ ಸಮಸ್ಯೆಗಳಿಗೆ ಸೇರಿದಂತೆ ಹಾಗೂ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಿದೆ. ವಿದ್ಯುತ್ ಸಮಸ್ಯೆಯಿಂದ ಗ್ರಾಮದ ಜನತೆಗೆ ನೀರಿನ ಸರಬರಾಜಿನ ವ್ಯವಸ್ಥೆಯಲ್ಲಿ ವ್ಯಥೆಯ ಉಂಟಾಗಿತ್ತು. ರಾತ್ರಿ ವೇಳೆಯಲ್ಲಿ ಸಹ ರೈತರಿಗೆ ತೋಟದ ಮನೆಗಳಿಗೆ ವಿದ್ಯುತ್ ನೀಡದೆ ಇರುವುದರಿಂದ ಇದನ್ನು ಖಂಡಿಸಿ ಸೋಮವಾರ ಬೆಳಗ್ಗೆ 11.30ಕ್ಕೆ ಪಟ್ಟಣದ ಚೆಸ್ಕಾಂ ಕಚೇರಿ ಮುಂಭಾಗ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಏಕೀಕರಣ ಹಸಿರು ಸೇನೆ ಜಿಲ್ಲಾಧ್ಯಕ್ಷ ಸೋಮಣ್ಣ ಹಾಗೂ ತಾಲೂಕು ಘಟಕದ ಅಧ್ಯಕ್ಷ ಚಿಕ್ ರಾಜು ತಿಳಿಸಿದ್ದಾರೆ.