ಮಾಜಿ ಸಚಿವ ರಮಾನಾಥ್ ರೈ ಪ್ರಯಾಣಿಸುತ್ತಿದ್ದ ಕಾರು–ಖಾಸಗಿ ಬಸ್ ಡಿಕ್ಕಿ

KannadaprabhaNewsNetwork |  
Published : Sep 21, 2026, 02:45 AM IST
ಅಪಘಾತದ ತೀವ್ರತೆಗೆ ನಜ್ಜುಗುಜ್ಜಾಗಿರುವ ಕಾರು | Kannada Prabha

ಸಾರಾಂಶ

ಕಾರ್ಕಳ ರಾಷ್ಟ್ರೀಯ ಹೆದ್ದಾರಿ 169ರ ಚಿಲಿಂಬಿ ಸಮೀಪದ ಸಾಣೂರು ಶ್ರೀ ರಾಮಮಂದಿರ ಡಿವೈಡರ್ ಕ್ರಾಸ್ ಬಳಿ ಮಾಜಿ ಸಚಿವ ಬಿ. ರಮಾನಾಥ್ ರೈ ಅವರು ಪ್ರಯಾಣಿಸುತ್ತಿದ್ದ ಕಾರು ಹಾಗೂ ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಕಾರ್ಕಳ: ಕಾರ್ಕಳ ರಾಷ್ಟ್ರೀಯ ಹೆದ್ದಾರಿ 169ರ ಚಿಲಿಂಬಿ ಸಮೀಪದ ಸಾಣೂರು ಶ್ರೀ ರಾಮಮಂದಿರ ಡಿವೈಡರ್ ಕ್ರಾಸ್ ಬಳಿ ಮಾಜಿ ಸಚಿವ ಬಿ. ರಮಾನಾಥ್ ರೈ ಅವರು ಪ್ರಯಾಣಿಸುತ್ತಿದ್ದ ಕಾರು ಹಾಗೂ ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.ಅಪಘಾತದಲ್ಲಿ ರಮಾನಾಥ್ ರೈ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಕೈ ಹಾಗೂ ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಾರಿನ ಚಾಲಕ ಹಾಗೂ ಆಪ್ತ ಸಹಾಯಕ ಡೆಂಝಿಲ್ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯರು ಕಾರಿನಿಂದ ಹೊರತೆಗೆದು ತಕ್ಷಣ ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಬಸ್‌ನಲ್ಲಿದ್ದ ಕೆಲ ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿವೆ.

ರಮಾನಾಥ್ ರೈ ಅವರು ಮಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಬಳಿಕ ಕಾರ್ಕಳ ತಾಲೂಕಿನ ಕೆರ್ವಾಶೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು. ಮೂಡುಬಿದಿರೆಯಿಂದ ಕಾರ್ಕಳದತ್ತ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಕಾರ್ಕಳದಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದ ಖಾಸಗಿ ಬಸ್‌ಗೆ ಸಾಣೂರು ರಾಮಮಂದಿರ ಡಿವೈಡರ್ ಕ್ರಾಸ್ ಬಳಿ ಕಾರು ಮುಖಾಮುಖಿಯಾಗಿ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.ರಸ್ತೆ ಕಾಮಗಾರಿ ವಿರುದ್ಧ ಗ್ರಾಮಸ್ಥರ ಆಕ್ರೋಶ: ಕಾರ್ಕಳದ ಪುಲ್ಕೇರಿ ಬೈಪಾಸ್‌ನಿಂದ ಮಂಗಳೂರಿನವರೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಈ ಭಾಗದಲ್ಲಿ ಪದೇಪದೇ ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸಾಣೂರು ರಾಮಮಂದಿರ ಬಳಿಯಲ್ಲಿಯೇ ಈ ಹಿಂದೆಯೂ ಹಲವು ಅಪಘಾತಗಳು ಸಂಭವಿಸಿ ಸಾವು-ನೋವುಗಳು ಉಂಟಾಗಿವೆ. ಯುಗಾದಿಯ ಮರುದಿನ ಸಾಣೂರು ನಿವಾಸಿ ಹರೀಶ್ ಪೂಜಾರಿ ಅವರು ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ ಮೂಡುಬಿದಿರೆ ಕಡೆಯಿಂದ ಬಂದ ಬೈಕ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಘಟನೆ ನಡೆದ 11 ದಿನಗಳ ಬಳಿಕ ಇದೇ ಪ್ರದೇಶದಲ್ಲಿ ಮತ್ತೊಂದು ಅಪಘಾತ ಸಂಭವಿಸಿ, ವೇಗವಾಗಿ ಬಂದ ಟೆಂಪೊ ಡಿಕ್ಕಿಯಾಗಿ ಮೃತಪಟ್ಟಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ರಸ್ತೆ ಕಾಮಗಾರಿ ಆರಂಭವಾದ ಬಳಿಕ ಸಾಣೂರು ಭಾಗದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಭಾನುವಾರವೂ ಕಾಮಗಾರಿ ಹಿನ್ನೆಲೆಯಲ್ಲಿ ರಸ್ತೆಯ ಒಂದೇ ಬದಿಯಲ್ಲಿ ಎರಡೂ ದಿಕ್ಕಿನ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದೇ ವೇಳೆ ರಮಾನಾಥ್ ರೈ ಅವರ ಕಾರು ಹಾಗೂ ಖಾಸಗಿ ಬಸ್ ನಡುವೆ ಡಿಕ್ಕಿ ಸಂಭವಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೈಲಿಂದ ಪರಾರಿಯಾಗಿದ್ದ ಹಂತಕ 12 ವರ್ಷ ಬಳಿಕ ಅರೆಸ್ಟ್‌
ಕನಸು ಅರ್ಥೈಸಿಕೊಂಡು ಮುನ್ನಡೆದರೆ ಬದುಕು ಗೆದ್ದಂತೆ