ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿಯೊಬ್ಬ ಅನಾರೋಗ್ಯದ ನೆಪ ಹೇಳಿ ಆಸ್ಪತ್ರೆ ಸೇರಿ ಆಸ್ಪತ್ರೆಯಿಂದ ಪರಾರಿಯಾಗಿ ಮುಖದ ಚಹರೆ ಬದಲಾಯಿಸಿಕೊಂಡು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸ್ತಿದ್ದ ಖತರ್ನಾಕ್ ಕೊಲೆಗಾರನನ್ನು 12 ವರ್ಷಗಳ ಬಳಿಕ ಗಾಂಧಿಚೌಕ ಠಾಣೆ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ವಿಜಯಪುರ
ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿಯೊಬ್ಬ ಅನಾರೋಗ್ಯದ ನೆಪ ಹೇಳಿ ಆಸ್ಪತ್ರೆ ಸೇರಿ ಆಸ್ಪತ್ರೆಯಿಂದ ಪರಾರಿಯಾಗಿ ಮುಖದ ಚಹರೆ ಬದಲಾಯಿಸಿಕೊಂಡು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸ್ತಿದ್ದ ಖತರ್ನಾಕ್ ಕೊಲೆಗಾರನನ್ನು 12 ವರ್ಷಗಳ ಬಳಿಕ ಗಾಂಧಿಚೌಕ ಠಾಣೆ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.ಘಟನೆ ವಿವರ: 2009ರಲ್ಲಿ ಬಾಗಲಕೋಟೆಯಲ್ಲಿ ಕೃಷಿ ಅಧಿಕಾರಿಯೊಬ್ಬರ ಹನಿಟ್ರ್ಯಾಪ್ ನಡೆಸಿ, ಭೀಕರವಾಗಿ ಕೊಲೆ ಮಾಡಲಾಗಿತ್ತು. ಈ ಕೇಸ್‌ನಲ್ಲಿ ಮುಧೋಳ ನಿವಾಸಿ ಬಸವರಾಜ ಪಾಟೀಲ್‌ಗೆ ಜೀವಾವಧಿ ಶಿಕ್ಷೆಯಾಗಿತ್ತು. ಆದರೆ 2014ರಲ್ಲಿ ವಿಜಯಪುರ ಜಿಲ್ಲಾ ಕಾರಾಗೃಹದಲ್ಲಿದ್ದ ಈತ, ಅನಾರೋಗ್ಯದ ನೆಪ ಹೇಳಿ ಜಿಲ್ಲಾಸ್ಪತ್ರೆಗೆ ಅಡ್ಮಿಟ್ ಆದ. ಬಳಿಕ ಸಿಬ್ಬಂದಿ ಕಣ್ತಪ್ಪಿಸಿ ಅಲ್ಲಿಂದ ಕಾಲ್ಕಿತ್ತವನು ಬರೋಬ್ಬರಿ 12 ವರ್ಷ ಪೊಲೀಸರಿಗೆ ಸಿಕ್ಕಿರಲಿಲ್ಲ. ಜೈಲಿಂದ ಪರಾರಿಯಾದ ಬಳಿಕ ತನ್ನ ಸ್ವಂತ ಕುಟುಂಬದ ಸಂಪರ್ಕವನ್ನೂ ಸಂಪೂರ್ಣವಾಗಿ ಕಟ್ ಮಾಡಿ, ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಸಿದ್ಧಸಮುದ್ರ ಗ್ರಾಮದಲ್ಲಿ ಅಡಗಿದ್ದ. ಗಡ್ಡ-ಕೂದಲು ಬೆಳೆಸಿ, ಜಮೀನು ಲೀಜ್‌ಗೆ ಪಡೆದು ಅರೆಹುಚ್ಚ ರೈತನಂತೆ ಕಾಲ ಕಳೆಯುತ್ತಿದ್ದ. ಆದರೆ ಗದ್ದನಕೇರಿ ಕ್ರಾಸ್‌ನ ಮಹಿಳೆಯೊಬ್ಬಳ ಜತೆಗಿದ್ದ ಆತನ ಸಂಪರ್ಕವೇ ಈತನಿಗೆ ಮುಳುವಾಯಿತು. ಅನೈತಿಕ ಸಂಬಂಧದ ಸುಳಿವು ಹಿಡಿದ ಪೊಲೀಸರು ಕೊನೆಗೂ ಬಸವರಾಜ ಪಾಟೀಲನನ್ನು ಬಂಧಿಸಿದ್ದಾರೆ.
ನಮ್ಮ ಪೊಲೀಸರ ರೌಡಿ ನಿಗ್ರಹ ಪಡೆಯು ಆರೋಪಿ ಬಸವರಾಜ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಕಾಲ್ ಡಿಟೇಲ್ಸ್ ಪಡೆದುಕೊಂಡಿತ್ತು. ಬಳಿಕ ಆ ನಂಬರ್ ಲೊಕೇಶನ್ ಹಿಡಿದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಿದ್ಧಸಮುದ್ರ ಗ್ರಾಮದಲ್ಲಿ ಬಸವರಾಜನ್ನು ಬಂಧಿಸಲಾಗಿದೆ. ಬಂಧನದ ವೇಳೆ 2009ರಲ್ಲಿ ಸಂಗ್ರಹಿಸಿದ್ದ ಬೆರಳಚ್ಚು ಮಾದರಿ ಆತನ ಡಿಜಿಟಲ್ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಸಹಾಯದಿಂದ ಆರೋಪಿಯನ್ನು ಬಂಧಿಸಲಾಗಿದೆ.-ಲಕ್ಷ್ಮಣ ನಿಂಬರಗಿ ವಿಜಯಪುರ ಎಸ್.ಪಿ.