ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿಕನಸು ಕಾಣುವುದು ಮತ್ತು ಅದನ್ನು ನೋಡುವುದು ತುಂಬಾ ವಿಭಿನ್ನ. ಕನಸನ್ನು ಅರ್ಥೈಸಿಕೊಂಡು ಅದರಂತೆ ಮುನ್ನಡೆದರೆ ನಿಮ್ಮ ಬದುಕನ್ನು ನೀವೇ ಗೆದ್ದಂತೆ ಎಂದು ಸುಧಾ ವಾರಪತ್ರಿಕೆಯ ಸಂಪಾದಕಿ ರಶ್ಮಿ ಎಸ್. ಹೇಳಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಕನಸು ಕಾಣುವುದು ಮತ್ತು ಅದನ್ನು ನೋಡುವುದು ತುಂಬಾ ವಿಭಿನ್ನ. ಕನಸನ್ನು ಅರ್ಥೈಸಿಕೊಂಡು ಅದರಂತೆ ಮುನ್ನಡೆದರೆ ನಿಮ್ಮ ಬದುಕನ್ನು ನೀವೇ ಗೆದ್ದಂತೆ ಎಂದು ಸುಧಾ ವಾರಪತ್ರಿಕೆಯ ಸಂಪಾದಕಿ ರಶ್ಮಿ ಎಸ್. ಹೇಳಿದರು.

ಭಾನುವಾರ ಯಲ್ಲಟ್ಟಿ ಗ್ರಾಮದ ಕೊಣ್ಣೂರು ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ ನ ಕೊಣ್ಣೂರು ವಿಜ್ಞಾನ ಪಿಯು ಕಾಲೇಜಿನ ಆವರಣದಲ್ಲಿ ನಡೆದ ಶಿಕ್ಷಣ, ಮೌಲ್ಯ, ಅವಕಾಶ ಹಾಗೂ ಉಜ್ವಲ ಭವಿಷ್ಯದ ಸಂದೇಶ ಸಾರುವ ವಿಶೇಷ ಕಾರ್ಯಕ್ರಮದಲ್ಲಿ ಸಂಸ್ಥೆಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕನಸು ಕಂಡು, ಗುರಿ ಸಾಧಿಸಿ’ ಎಂಬ ಆಶಯದೊಂದಿಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ವೃತ್ತಿ ಯಾವುದೇ ಆಗಿರಲಿ, ಅದರಲ್ಲಿ ತಾದಾನ್ಮತೆ, ಸಮಯದ ಸದುಪಯೋಗ, ಅರ್ಪಣಾ ಮನೋಭಾವ ಹಾಗೂ ಕಠಿಣ ಪರಿಶ್ರಮ ಅಗತ್ಯ. ವಿದ್ಯಾರ್ಥಿಗಳು ದೊಡ್ಡ ದೊಡ್ಡ ಕನಸುಗಳನ್ನು ಕಾಣಬೇಕು. ಕನಸು ಕಂಡಾಗ ಅದನ್ನು ನನಸಾಗಿಸುವ ಪ್ರಯತ್ನವನ್ನು ತಮ್ಮಿಂದಲೇ ಆರಂಭಿಸಬೇಕು. ಕಬೀರರ ಜೀವನದ ಅನೇಕ ಉದಾಹರಣೆಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬಿದರು.

ಶಾಸಕ ಸಿದ್ದು ಸವದಿ ಮಾತನಾಡಿ, ಸಾಧನೆಗೆ ಕೇವಲ ಅಂಕಗಳೇ ಮುಖ್ಯವಲ್ಲ. ಗುಣಮಟ್ಟದ ಶಿಕ್ಷಣದ ಜತೆಗೆ ವಿದ್ಯಾರ್ಥಿಗಳಲ್ಲಿರುವ ಸಾಮರ್ಥ್ಯವನ್ನು ಗುರುತಿಸಿ, ಅದನ್ನು ಹೊರತರುವ ಕೆಲಸವಾಗಬೇಕು ಎಂದರು.

ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೊಣ್ಣೂರ ಮಾತನಾಡಿ, ಮನೆಪಾಠ ಮಾಡಿಕೊಂಡು ಸಂಸ್ಥೆಯನ್ನು ಕಟ್ಟಿದ್ದು ನನಗೆ ಹೆಮ್ಮೆಯ ಸಂಗತಿ. ಸಾವಿರಾರು ವಿದ್ಯಾರ್ಥಿಗಳು ಈ ದೇವಾಲಯದಲ್ಲಿ ಶಿಕ್ಷಣ ಪಡೆದು ಉನ್ನತ ಹುದ್ದೆಗಳಿಗೆ ತೆರಳುತ್ತಿರುವುದು ಸಂತಸ ತಂದಿದೆ ಎಂದರು.

ಇದೇ ವೇಳೆ ಬಸವರಾಜ ಕೊಣ್ಣೂರ ಅವರ 61ನೇ ಜನ್ಮದಿನದ ನಿಮಿತ್ತ ಜಮಖಂಡಿ, ರಬಕವಿ ಬನಹಟ್ಟಿ ತಾಲೂಕಿನ ಆಯ್ದ ಶಾಲೆಗಳ ಪ್ರಾಧ್ಯಾಪಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ನಿವೃತ್ತ ಶಿಕ್ಷಕ ಜಯವಂತ ಕಾಡದೇವರ, ಸಂಸ್ಥೆಯ ಆಡಳಿತಾಧಿಕಾರಿ ನಿಖಿಲ್ ಕೊಣ್ಣೂರ, ಬರಮಪ್ಪ ಕೊಣ್ಣೂರ, ಶೀತಲ ಕೊಣ್ಣೂರ ಸೇರಿದಂತೆ ಹಲವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚಂದ್ರಕಾಂತ ಹೊಸೂರ ನಿರೂಪಿಸಿ, ವಂದಿಸಿದರು.