ಕನ್ನಡಪ್ರಭ ವಾರ್ತೆ ಮಂಗಳೂರು
ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕನಿಗೆ ಮಂಗಳೂರಿನ ನ್ಯಾಯಾಲಯ ಶಿಕ್ಷೆ ವಿಧಿಸಿದೆ.ಬಾಗಲಕೋಟೆಯ ದಾವಲ್ ಸಾಬ್ (34) ಶಿಕ್ಷೆಗೊಳಗಾದವನು. ಘಟನೆ 2023ರ ಮಾರ್ಚ್‌ನಲ್ಲಿ ನಡೆದಿತ್ತು.
ಬಾಲಕಿ ಶಾಲೆಯಿಂದ ಬಿ.ಸಿ.ರೋಡ್‌ನಲ್ಲಿರುವ ತನ್ನ ಮನೆಗೆ ಬರಲು ಕಲ್ಲಡ್ಕದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಹತ್ತಿದ್ದಳು. ಆಗ ಬಸ್‌ನಲ್ಲಿ 4-5 ಮಂದಿ ಪ್ರಯಾಣಿಕರಿದ್ದರು. ಮುಂದಿನ ನಿಲ್ದಾಣದಲ್ಲಿ ಅವರು ಇಳಿದಿದ್ದರು. ಆಗ ಬಸ್ ಚಾಲಕ ಮತ್ತು ಆರೋಪಿ ನಿರ್ವಾಹಕ ಹಾಗೂ ಬಾಲಕಿ ಮಾತ್ರ ಇದ್ದರು.ಆಕೆಯ ಬಳಿಗೆ ಬಂದ ನಿರ್ವಾಹಕ ಆತನ ಪ್ಯಾಂಟ್‌ನ ಜಿಪ್ ತೆಗೆದು ಗುಪ್ತಾಂಗವನ್ನು ತೋರಿಸಿ ಕಿರುಕುಳ ನೀಡಿದ್ದಾನೆ. ಅಲ್ಲದೆ ಮುಖಸನ್ನೆಯಲ್ಲಿ ಬಾ ಎಂದು ಪೀಡಿಸಿದ್ದಾನೆ. ಹೆತ್ತವರು, ಪೊಲೀಸರಿಗೆ ತಿಳಿಸುವುದಾಗಿ ಬಾಲಕಿ ಹೇಳಿದರೂ ಆರೋಪಿ ಕಿರುಕುಳ ನೀಡಿದ್ದ. ಅಸಭ್ಯವಾಗಿ ವರ್ತಿಸಿ ಮಾನಕ್ಕೆ ಕುಂದುಂಟಾಗುವಂತೆ ವರ್ತಿಸಿದ್ದ. ಅನಂತರ ಮತ್ತೊಂದು ಸ್ಟಾಪ್‌ನಲ್ಲಿ ಕೆಲವು ಪ್ರಯಾಣಿಕರು ಹತ್ತಿದರು. ಆಗ ಆರೋಪಿ ವಿದ್ಯಾರ್ಥಿನಿಯ ಬಳಿಯಿಂದ ತೆರಳಿ ಜಿಪ್ ಹಾಕಿ ಆ ಪ್ರಯಾಣಿಕರಿಗೆ ಟಿಕೆಟ್ ನೀಡಿದ್ದ. ತೀವ್ರವಾಗಿ ನೊಂದಿದ್ದ ಬಾಲಕಿ ಬಸ್‌ನ ಸಂಖ್ಯೆ ಸಮೇತವಾಗಿ ಮನೆಗೆ ಬಂದು ತಾಯಿ ಬಳಿ ಎಲ್ಲ ಘಟನೆ ತಿಳಿಸಿದ್ದಳು. ಅನಂತರ ತಾಯಿ ಮತ್ತು ಬಾಲಕಿ ಬಂಟ್ವಾಳ ನಗರ ಠಾಣೆಗೆ ತೆರಳಿ ದೂರು ನೀಡಿದ್ದರು. ಪೊಲೀಸರು ಕೂಡಲೇ ಕಾರ್ಯಾಚರಣೆ ನಡೆಸಿ ಬಿ.ಸಿ.ರೋಡ್‌ನಿಂದ ಮಂಗಳೂರಿಗೆ ಬಂದಿದ್ದ ಅದೇ ಬಸ್ ವಾಪಸ್ ಬರುವಾಗ ನಿರ್ವಾಹಕನನ್ನು ವಶಕ್ಕೆ ಪಡೆದಿದ್ದರು.
ಇನ್ಸ್‌ಪೆಕ್ಟರ್ ನಂದಿನಿ ಎಸ್.ಶೆಟ್ಟಿ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ (ಎಫ್‌ಟಿಎಸ್‌ಸಿ-1 ಪೋಕ್ಸೊ) ನ್ಯಾಯಾಧೀಶ ಮಂಜುಳಾ ಇಟ್ಟಿ ಅವರು ಶುಕ್ರವಾರ ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.ಆರೋಪಿಗೆ ಐಪಿಸಿ ಕಲಂ 509ರಡಿ ಒಂದು ವರ್ಷ ಸಾದಾ ಸಜೆ ಮತ್ತು 5,000 ರು. ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿಯಾಗಿ ಒಂದು ತಿಂಗಳು ಸಾದಾ ಸಜೆ, ಪೊಕ್ಸೋ ಕಾಯಿದೆಯ ಕಲಂ 12 ರಡಿ 2 ವರ್ಷ ಕಠಿನ ಸಜೆ ಮತ್ತು 10,000 ರು. ದಂಡ, ಒಂದು ವೇಳೆ ದಂಡ ಪಾವತಿಸದಿದ್ದರೆ ಮತ್ತೆ 2 ತಿಂಗಳು ಸಾದಾ ಸಜೆ ವಿಧಿಸಿದ್ದಾರೆ. ಅಲ್ಲದೆ ಸಂತ್ರಸ್ತೆ ವಿದ್ಯಾರ್ಥಿನಿಗೆ 10,000 ರು.ಗಳನ್ನು ಪರಿಹಾರವಾಗಿ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶ ನೀಡಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಪೋಕ್ಸೊ ವಿಶೇಷ ಸರ್ಕಾರಿ ಅಭಿಯೋಜಕಿ ಸಹನಾದೇವಿ ಬೋಳೂರು ವಾದಿಸಿದ್ದರು.
----ಖಾಸಗಿ ಬಸ್ ಉದ್ಯಮಿ ಆತ್ಮಹತ್ಯೆ
ಮಂಗಳೂರು: ಖಾಸಗಿ ಬಸ್ ಉದ್ಯಮದಲ್ಲಿ ತೊಡಗಿದ್ದ ನಗರದ ಬಜಾಲ್ ನಿವಾಸಿ, ಭವಾನಿ ಬಸ್ ಮಾಲೀಕರಾಗಿದ್ದ ದಿ. ದೇವೇಂದ್ರ ಅವರ ಪುತ್ರ ಪ್ರಜ್ವಲ್ ಡಿ.(35) ಎಂಬವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಮಂಗಳವಾರ ಬೆಳಗ್ಗೆ ಜೆ.ಎಂ. ರೋಡ್‌ನಲ್ಲಿರುವ ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರಜ್ವಲ್ ಅವರ ಸಹೋದರ ಬಸ್ ಮಾಲೀಕರಾಗಿದ್ದು, ಪ್ರಜ್ವಲ್ ವ್ಯವಹಾರದ ಜವಾಬ್ದಾರಿ ವಹಿಸಿಕೊಂಡಿದ್ದರು.ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ದೊಡ್ಡ ಮಟ್ಟದ ಸಾಲ ಹೊಂದಿದ್ದ ಅವರಿಗೆ ಬ್ಯಾಂಕ್‌ನವರು ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಪೊಲೀಸರು ಸಂಶಯಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರಿಗೆ ಪತ್ನಿ ಹಾಗೂ ನಾಲ್ಕು ವರ್ಷದ ಮಗು ಇದ್ದಾರೆ.